ಶಿವಮೊಗ್ಗ: 2023ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯು ಶೇಕಡವಾರು ಮತದಾನ ಪ್ರಮಾಣದಲ್ಲಿ ನಂಬರ್ 1 ಸ್ಥಾನ ಆಗುವಂತೆ ಜಿಲ್ಲೆಯ ಎಲ್ಲ ಮತದಾರರು ಮತದಾನ ಮಾಡಬೇಕು ಎಂದು ಡಿವೈಎಸ್‌ಪಿ ಬಾಲರಾಜ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಡಿಎಆರ್ ಸಭಾಂಗಣದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮತದಾನದ ಅಭಿಯಾನ, ನನ್ನ ಮತ ಮಾರಾಟಕ್ಕಿಲ್ಲ ಘೋಷವಾಕ್ಯದಡಿ ನಡೆದ ಅಭಿಯಾನದಲ್ಲಿ ಮಾತನಾಡಿ, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು. ಶಿವಮೊಗ್ಗ ಜಿಲ್ಲೆಯು ರಾಜ್ಯದಲ್ಲಿಯೇ ನಂ. 1 ಆಗಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿ, ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಉತ್ತಮ ಜನಪ್ರತಿನಿಧಿಗಳ ಆಯ್ಕೆ ಮಾಡಬೇಕು. ಪ್ರತಿಯೊಬ್ಬರು ಮತದಾನ ಮಾಡುವ ಜತೆಯಲ್ಲಿ ಕುಟುಂಬ ಎಲ್ಲ ಅರ್ಹ ಮತದಾರರು ಮತದಾನ ಮಾಡುವಂತೆ ಹೇಳಬೇಕು. ಸಂಘಟಿತ ಪ್ರಯತ್ನ ನಡೆಸಿದಲ್ಲಿ ಶಿವಮೊಗ್ಗ ಜಿಲ್ಲೆಯು ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿದ ಜಿಲ್ಲೆ ಆಗಲಿದೆ ಎಂದರು.
ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ, ನಮ್ಮ ಸಂಸ್ಥೆ ವತಿಯಿಂದ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಮತದಾನ ಮಾಡುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದು, ನನ್ನ ಮತ ಮಾರಾಟಕ್ಕಿಲ್ಲ ಎಂಬ ವಿಶೇಷ ಘೋಷಣೆಯೊಂದಿಗೆ ಕಾರ್ಯಕ್ರಮ ಮೂಡಿಸುತ್ತಿರುವುದು ಮತ್ತೊಂದು ವಿಶೇಷ. ಮೊದಲ ಸಲ ಮತದಾನದ ಹಕ್ಕು ಪಡೆದ ಪ್ರತಿ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಸಮನ್ವಯ ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಕಾಲೇಜು ವಿದ್ಯಾರ್ಥಿಗಳು ಗ್ರಾಮ ಗ್ರಾಮಗಳಲ್ಲಿ, ಕಾಲೇಜುಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ನನ್ನ ಮತ ಮಾರಾಟಕ್ಕಿಲ್ಲ ಎಂಬ ವಿಷಯದ ಬಗ್ಗೆ ತಿಳವಳಿಕೆ ನೀಡಲಿದ್ದಾರೆ. ಯಾವುದೇ ಆಮಿಷಕ್ಕೆ ಬಲಿಯಾಗದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳ ಪ್ರಮುಖ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು. ಸಮನ್ವಯ ಟ್ರಸ್ಟ್ ಸ್ವಯಂ ಸೇವಕರು ಹಾಜರಿದ್ದರು.

error: Content is protected !!