ಶಿವಮೊಗ್ಗ, ಏಪ್ರಿಲ್ 25, : ಜನರಲ್ಲಿ ಇವಿಎಂ/ವಿವಿಪ್ಯಾಟ್ ಸೇರಿದಂತೆ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮತದಾನ ಪ್ರಮಾಣ ಹೆಚ್ಚಿಸುವುದು ಈ ‘ಸ್ವೀಪ್ ಎಕ್ಸ್‍ಪ್ರೆಸ್ ಬಸ್’ ಸಂಚಾರದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ .ಆರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಿವಮೊಗ್ಗ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮದಡಿಯಲ್ಲಿ ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ ‘ಸ್ವೀಪ್ ಎಕ್ಸ್‍ಪ್ರೆಸ್ ಬಸ್’ ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಈ ಹಿಂದೆ ಉತ್ತಮವಾಗಿ ಮತದಾನ ಆಗಿದೆ. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಮತದಾನ ಆಗಿದ್ದು, ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ವತಿಯಿಂದ ಅನೇಕ ಉತ್ತಮ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಕಳೆದ ಬಾರಿಗಿಂತ ಶೇ.10 ರಷ್ಟಾದರೂ ಮತದಾನ ಪ್ರಮಾಣ ಹೆಚ್ಚಬೇಕು. ಈ ಎಕ್ಸ್‍ಪ್ರೆಸ್ ಬಸ್ ಜಿಲ್ಲಾದ್ಯಂತ ಕಡಿಮೆ ಮತದಾನ ಆದ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದೆ. ಮೇ 09 ರವರೆಗೆ ಸಂಚರಿಸಿ ಮತದಾನ ಕುರಿತು ಜಾಗೃತಿ ಮೂಡಿಸಬೇಕೆಂದರು.
‘ಸ್ವೀಪ್ ಎಕ್ಸ್‍ಪ್ರೆಸ್ ಬಸ್’ ಒಳಗೆ ಮಾದರಿ ಮತದಾನ ಕೇಂದ್ರ, ಮತದಾನ ಕೇಂದ್ರಗಳಲ್ಲಿನ ಮೂಲಭೂತ ಸೌಕರ್ಯಗಳು, ಇವಿಎಂ/ವಿವಿಪ್ಯಾಟ್(ಇಗಿಒ/ಗಿಗಿPಂಖಿ) ಪ್ರತಿಕೃತಿಗಳು ಹಾಗು ಮತದಾನ ಜಾಗೃತಿ ಬಿತ್ತಿ ಚಿತ್ರಗಳಿವೆ. ಬಸ್ ಹೊರಮೈಯಲ್ಲಿ ಸಿವಿಜಿಲ್ ಆ್ಯಪ್ , 1950 ಟಾಲ್‍ಫ್ರೀ ಸಂಖ್ಯೆ, ವೋಟರ್ ಹೆಲ್ಪ್‍ಲೈನ್ ಪೋರ್ಟಲ್ ಹಾಗೂ ಸ್ವೀಪ್ ಕುರಿತು ಮಾಹಿತಿ ಇದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಜಿ.ಪಂ. ಸಿಇಓ, ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳು ಬಸ್ ಒಳಗಿನ ಮತದಾನ ಕೇಂದ್ರದಲ್ಲಿ ಕುಳಿತು ಪರಿವೀಕ್ಷಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಮಾತನಾಡಿ, ಮತದಾನ ಕುರಿತು ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಈ ಸ್ವೀಪ್ ಎಕ್ಸ್‍ಪ್ರೆಸ್ ಬಸ್ ಸಂಚಾರ ಆರಂಭಿಸಲಾಗಿದೆ. ಕಡಿಮೆ ಮತದಾನ ಆದ ಪ್ರದೇಶಗಳಿಗೆ ಇದು ಭೇಟಿ ನೀಡಿ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು. ಹಾಗೂ ಚುನಾವಣಾ ಅಕ್ರಮ ತಡೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕುರಿತು, ಸಿವಿಜಿಲ್ ಆ್ಯಪ್ ಕುರಿತು ಮಾಹಿತಿ ನೀಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದರು.
ಶಿವಮೊಗ್ಗ ನಗರ ಸೇರಿದಂತೆ, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರ ಮತ್ತು ಜನ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಿಗೆ ದಿನಾಂಕ:25/04/2023 ರಿಂದ 02/05/2023 ರ ವರೆಗೆ, ಭೇಟಿನೀಡಿ ಮತದಾನ ಜಾಗೃತಿ ಮೂಡಿಸಲಿದೆ.
ಇಂದು ಈ ಬಸ್ ಕುವೆಂಪು ಪ್ರತಿಷ್ಟಾನ ಬಿ.ಎಡ್ ಕಾಲೇಜ್, ನ್ಯಾಷನಲ್ ಕಾಲೇಜ್, ಡಿವಿಎಸ್ ಕಾಲೇಜ್, ಸಹ್ಯಾದ್ರಿ ಕಾಲೇಜ್ ಮಾರ್ಗವಾಗಿ ಸಾಗಿ ಒಡ್ಡಿನಕೊಪ್ಪ, ಓಲ್ಡ್ ಮಂಡ್ಲಿ, ಗೋಪಾಳ, ಅಶೋಕನಗರ, ಗಾಡಿಕೊಪ್ಪ, ಶಾಂತಿನಗರ, ರಾಜೇಂದ್ರನಗರ, ರವೀಂದ್ರ ನಗರ, ಬಸವನಗುಡಿಗೆ ಬಂದು ತಲುಪಿ ಅಲ್ಲಿಂದ ಜಿಲ್ಲಾ ಪಂಚಾಯ್ತಿಗೆ ಆಗಮಿಸಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಸ್ವೀಪ್ ನೋಡಲ್ ಅಧಿಕಾರಿ ಶ್ರೀಕಾಂತ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.