ಶಿವಮೊಗ್ಗ: ಪ್ರತಿಯೊಂದು ಕ್ಷೇತ್ರ ಹಾಗೂ ಉದ್ಯೋಗದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅತ್ಯಂತ ಮುಖ್ಯ ಆಗುತ್ತದೆ. ಕೌಶಲ್ಯಗಳು ವೃತ್ತಿಯಲ್ಲಿ ಹಂತ ಹಂತವಾಗಿ ಪ್ರಗತಿ ಸಾಧಿಸಲು ನೆರವಾಗುತ್ತದೆ ಎಂದು ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆಯ ಸಿಇಒ ಡಿ.ಸುರೇಶ್ ಕುಮಾರ್ ಹೇಳಿದರು.
ಶಿವಮೊಗ್ಗ ನಗರದ ರೋಟರಿ ಮಿಡ್ ಟೌನ್ ಸಭಾಂಗಣದಲ್ಲಿ ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ತರಬೇತಿ ಹಾಗೂ ಮಾರ್ಗದರ್ಶನದ ಪ್ರವೇಶ ಪರೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಅಧ್ಯಯನದಲ್ಲಿ ಮುಂದಿದ್ದರೂ ಕೌಶಲ್ಯಗಳ ವಿಷಯದಲ್ಲಿ ಉದ್ಯೋಗ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯವು ತುಂಬಾ ಮುಖ್ಯವಾಗುತ್ತದೆ. ಕೌಶಲ್ಯಗಳ ಕಲಿಕೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ಉದ್ಯೋಗ ಬಯಸುವ ಎಲ್ಲರೂ ಶಿಕ್ಷಣದ ಜತೆಯಲ್ಲಿ ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಬೇಕು. ಶ್ರದ್ಧೆ ಹಾಗೂ ಆತ್ಮವಿಶ್ವಾಸದಿಂದ ತಾವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರಕ್ಕೆ ಅವಶ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯ ಮಾರ್ಗದರ್ಶನ ಹಾಗೂ ಅಂತರಾಷ್ಟ್ರೀಯ ರೋಟರಿ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಅವಕಾಶಗಳಲ್ಲಿ ವಂಚಿತರಾದ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲ್ಯ ತರಬೇತಿ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ರೋಟರಿ ಮಿಡ್ ಟೌನ್ ಕ್ಲಬ್ ಅಧ್ಯಕ್ಷೆ ವೀಣಾ ಸುರೇಶ್ ಮಾತನಾಡಿ, ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಸಂವಹನ ಕೌಶಲ್ಯ, ಕಂಪ್ಯೂಟರ್ ವಿಜ್ಷಾನದ ಮೂಲ ಆಶಯ, ಸಾಪ್ಟವೇರ್ಗಳ ಪರಿಚಯ, ಕಾರ್ಯಕ್ರಮ ನಿರೂಪಣೆ, ಪರೀಕ್ಷೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ತರಬೇತುದಾರರಾದ ರಘುಪತಿ, ಸುಜಾತಾ ಉದಯ್, ವೀಣಾ ಸುರೇಶ್, ವಿಜಯ್ಕುಮಾರ್, ಉದಯ್, ಸುರೇಶ್ ಕುಮಾರ್ ಉಪಸ್ಥಿತರಿದ್ದರು