ಶಿವಮೊಗ್ಗ, ಏಪ್ರಿಲ್ 24, :
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕೆ ಸಂಬಂಧಿಸಿದಂತೆ ಮೇ 10 ರಂದು ಮತದಾನ ನಡೆಯಲಿದ್ದು, ಚುನಾವಣಾ ವ್ಯಾಪ್ತಿಯೊಳಗೆ ಬರುವ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರು ಮತ ಚಲಾಯಿಸಲು ಅನುಕೂಲವಾಗುವ ಹಿತದೃಷ್ಟಿಯಿಂದ ಮತ್ತು ಅಹಿತಕರ ಘಟನೆಗಳನ್ನು ತಡೆಯುವ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಮತದಾನ ಕೊನೆಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಹಾಗೂ ಮತದಾನ ಮುಗಿದ 24 ಗಂಟೆಗಳ ಅವಧಿಯಲ್ಲಿ ಮತದಾನದ ಸ್ಥಳದ 100 ಮೀ ಪರಿಮಿತಿಯಲ್ಲಿ ದಿ: 08-05-2023 ರ ಸಂಜೆ 6 ಗಂಟೆಯಿಂದ ದಿ: 11-05-2023 ರ ಸಂಜೆ 6 ಗಂಟೆವರೆಗೆ ಐಪಿಸಿ ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಇವರು ಆದೇಶಿಸಿರುತ್ತಾರೆ.

  • ನಿಷೇಧಾಜ್ಞೆ ಜಾರಿ ಮಾಡಿದ ಅವಧಿಯಲ್ಲಿ ದಿ: 10-05-2023 ರಂದು ಮತದಾನ ಕೇಂದ್ರಗಳಿಗೆ ಮತ ಹಾಕಲು ಬರುವ ಮತದಾರರನ್ನು ಹೊರತುಪಡಿಸಿ ಉಳಿದಂತೆ 05 ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲೀ ಇತರೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ.
  • ಯಾವುದೇ ಸಂಘಟನೆಗಳು/ರಾಜಕೀಯ ಪಕ್ಷಗಳು/ಧಾರ್ಮಿಕ ಪಂಗಡಗಳು ಮೆರವಣಿಗೆ ಮಾಡತಕ್ಕದ್ದಲ್ಲ ಹಾಗೂ ಪ್ರತಿಭಟನೆ ನಡೆಸತಕ್ಕದಲ್ಲ.
  • ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು, ಕೋಲುಗಳು, ಬಂದೂಕುಗಳು, ಲಾಠಿಗಳು ಅಥವಾ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು/ಶೇಖರಿಸುವುದನ್ನು ನಿಷೇಧಿಸಿದೆ.
  • ಯಾವುದೇ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣಗಲ ಒಯ್ಯುವಿಕೆಯನ್ನು ಮತ್ತು ಶೇಖರಿಸುವುದನ್ನು ನಿಷೇಧಿಸಿದೆ.
    • ಯಾವುದೇ ವ್ಯಕ್ತಿ ನಿಷೇಧಿಸಿರುವ ಮಾರಕಾಸ್ತ್ರ, ಸ್ಪೋಟಕ ವಸ್ತುಗಳನ್ನು, ಬಂದೂಕುಗಳನ್ನು ಹೊಂದಿದ್ದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿರವರಿಗೆ ಅಧಿಕಾರವಿರುತ್ತದೆ ಮತ್ತು ಅಂತಹ ವ್ಯಕ್ತಿಯ ಬಳಿಯಲ್ಲಿರುವ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದು.
  • ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಗುಂಪಾಗಿ ನಿಲ್ಲುವುದನ್ನು ಹಾಗೂ ಓಡಾಡುವುದನ್ನು ನಿಷೇಧಿಸಿದೆ.
  • ಭಾಷಣ ಮಾಡುವುದು ಅಥವಾ ಪ್ರಚೋದನಕಾರಿಯಾಗಿ ಮಾತನಾಡುವುದನ್ನು ನಿಷೇಧಿಸಿದೆ.
  • ಬ್ಯಾನರ್ ಅಥವಾ ಫ್ಲೆಕ್ಸ್‍ಗಳನ್ನು ಅಂಟಿಸುವುದನ್ನು ನಿಷೇಧಿಸಿದೆ.
  • ಪ್ರಜಾಪ್ರಾತಿನಿಧ್ಯ ಕಾಯ್ದೆ 1951 ರಲ್ಲಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ. ಈ ನಿಷೇಧಾಜ್ಞೆಯನ್ನು ಸದುದ್ದೇಶದ ಕಾರ್ಯಗಳಾದ ಶವ ಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಹಾಗೂ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ಪ್ರಾರ್ಥನೆಗೆ ತೆರಳುವವರಿಗೆ ಹಾಗೂ ಇನ್ನಿತರೆ ಸಮಾರಂಭಗಳನ್ನು ನಡೆಸಲು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಹಾಗೂ ಚುನಾವಣಾ ಕಾರ್ಯಾಚರಣೆ ಅಧಿಕಾರಿಗಳಿಗೆ, ಚುನಾವಣಾ ಏಜೆಂಟರು, ಎಣಿಕೆ ಏಜೆಂಟರುಗಳು ಎಣಿಕೆಗೆ ಹಾಜರಾಗುವವರಿಗೆ ಅನ್ವಯಿಸತಕ್ಕದ್ದಲ್ಲ.
    ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
error: Content is protected !!