ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಸ್ಥಾಪನೆ ಮಾಡಲು ಮಂಜೂರಾತಿ ನೀಡಿದ ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಷಾ ರವರಿಗೆ ಶಿವಮೊಗ್ಗ ಕ್ಷೇತ್ರದ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ಈ ಒಂದು ಕ್ಯಾಂಪಸ್ ಸ್ಥಾಪಿಸಲು ವಿಶೇಷ ಆಸಕ್ತಿವಹಿಸಿ ರಾಜ್ಯ ಸರ್ಕಾರದ ಎಲ್ಲಾ ರೀತಿಯ ನೆರವು ನೀಡುತ್ತಿರುವ ರಾಜ್ಯ ಸರ್ಕಾರದ ಗೃಹ ಮಂತ್ರಿಗಳಾದ ಸನ್ಮಾನ್ಯ ಶ್ರೀ ಅರಗ ಜ್ಞಾನೇಂದ್ರರವರಿಗೂ ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೂ ಅಭಿನಂದನೆಗಳು.
ಶಿವಮೊಗ್ಗ ನಗರದ ನವುಲೆ ಸರ್ವೆ ನಂ 112ರಲ್ಲಿ ಕಾಯ್ದಿರಿಸಲಾಗಿರುವ 8.00 ಎಕರೆ ಭೂಮಿಯಲ್ಲಿ ದೇಶದಲ್ಲಿಯೇ 3ನೇ ಕ್ಯಾಂಪಸ್ ಆನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ ಷಾರವರು ದಿನಾಂಕ 24.03.2023ರ ಶುಕ್ರವಾರ ಶಿವಮೊಗ್ಗದ ನವುಲೆಯಲ್ಲಿರುವ ಹಳೆಯ ಕೇಂದ್ರೀಯ ವಿದ್ಯಾಲಯದ ಕಟ್ಟಡದಲ್ಲಿ ವರ್ಚುಯಲ್ ಮೂಲಕ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಉದ್ಯೋಗ ಅರಸುತ್ತಿರುವ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯಲು ಸಹಾಯಕವಾಗುವಂತಹ ಮಹತ್ತರವಾದ ಈ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಡಿಪ್ಲೊಮೋ ಇನ್ ಪೊಲೀಸ್ ಸೈನ್ಸ್, ಪಿ.ಜಿ. ಡಿಪ್ಲೋಮೋ ಸೈಬರ್ ಸೆಕ್ಯುರಿಟಿ ಅ್ಯಂಡ್ ಸೈಬರ್ ಲಾ, ಬೇಸಿಕ್ ಕೋರ್ಸ್ ಇನ್ ಕಾರ್ಪೋರೇಟ್ ಸೆಕ್ಯುರಿಟಿ ಮ್ಯಾನೇಜ್ಮೆಂಟ್, ಸರ್ಟಿಫಿಕೇಟ್ ಕೋರ್ಸ್ ಇನ್ ಕೋಸ್ಟಲ್ ಸೆಕ್ಯುರಿಟಿ & ಲಾ ಎನ್ಫೋರ್ಸ್ಮೆಂಟ್, ಟೂ ವಿಕ್ಸ್ ಸರ್ಟಿಫಿಕೇಟ್ ಫ್ರೋಗ್ರಾಂ ಇನ್ ರೋಡ್ ಟ್ರಾಫಿಕ್ ಸೇಫ್ಟಿ ಮ್ಯಾನೇಜ್ ಮೆಂಟ್, ಮತ್ತು ಟೂ ವೀಕ್ಸ್ ಸರ್ಟಿಫಿಕೇಟ್ ಫ್ರೋಗ್ರಾಂ ಇನ್ ಫಿಷಿಕಲ್ ಫಿಟ್ನೆಸ್ ಮ್ಯಾನೇಜ್ಮೆಂಟ್ ಕೋರ್ಸ್ ಗಳನ್ನು ಮೊದಲ ಹಂತದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಇದೇ ವರ್ಷದ ಶೈಕ್ಷಣಿಕ ವರ್ಷದಿಂದ ಬರುವ ಅಗಸ್ಟ್ ನಿಂದಲೇ ಪ್ರಾರಂಭಗೊಳ್ಳಲಿದೆ.
ಈ ರೀತಿಯ ಕೋರ್ಸ್ ಗಳನ್ನು ಮಾಡಿಕೊಳ್ಳುವ ಯುವಕ/ಯುವತಿಯರಿಗೆ ಪೊಲೀಸ್ ಸೇವೆ, ಶಸ್ತ್ರಸಜ್ಜಿತ ಸೇವೆಗಳಿಗೆ ಸೇರಲು ಬೇಕಾಗಿರುವಂತಹ ತರಬೇತಿ ಸಿಗುವುದರ ಜೊತೆಗೆ ಹಾಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬೇಕಾಗಿರುವಂತಹ ತರಬೇತಿ ಮತ್ತು ಸಂಶೋಧನೆಗಳನ್ನು ನಡೆಸಲು ಸಹ ಇದು ಸಹಕಾರಿಯಾಗಲಿದೆ.
ಗುಜರಾತಿನ ಗಾಂಧಿನಗರದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಈ ವಿಶ್ವವಿದ್ಯಾಲಯವು ಅರುಣಾಚಲ ಪ್ರದೇಶದಲ್ಲಿ 2ನೇ ಕ್ಯಾಂಪಸ್ ಅನ್ನು ಹೊಂದಿದ್ದು, ಶಿವಮೊಗ್ಗದಲ್ಲಿ ಸ್ಥಾಪನೆಗೊಳ್ಳುತ್ತಿರುವುದು 3ನೇ ಕ್ಯಾಂಪಸ್ ಆಗಿದೆ.
ಈಗಾಗಲೇ ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಪ್ರೋ ಉಪ ಕುಲಪತಿಗಳಾದ ಡಾ. ಆನಂದ ಕುಮಾರ್ ತ್ರಿಪಾಠಿರವರ ನೇತೃತ್ವದಲ್ಲಿ ಡಾ. ಧನುಷ್ ಕುಮಾರ್ ಪ್ರಜಾಪತಿ, ಸಹಾಯಕ ಕುಲಸಚಿವರು, ಶ್ರೀ ವಿಶ್ವ ಪ್ರತಾಪ್ ಸಿಂಗ್ ಶೇಕಾವತ್, ಕ್ಯಾಂಪಸ್ ನಿರ್ದೇಶಕರು ಹಾಗೂ ಶ್ರೀ ಆತೀಷ್ ಬಾರೋಟ್, ಆಡಳಿತಾಧಿಕಾರಿಗಳ ನಾಲ್ಕು ಜನರ ತಂಡವು ದಿನಾಂಕ: 20ರಿಂದ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ದಿನಾಂಕ: 24ರ ಕಾರ್ಯಕ್ರಮದ ಎಲ್ಲಾ ಪೂರ್ವ ಸಿದ್ದತೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
- ಬಿ.ವೈ. ರಾಘವೇಂದ್ರ, ಸಂಸದರು ಶಿವಮೊಗ್ಗ.