ರಾಜ್ಯ ವ್ಯಾಪಿ ವಿದ್ಯಾಸಂಸ್ಥೆಗಳ ಮೂಲಕ ಎಲ್ಲಾ ವರ್ಗದ ಮಕ್ಕಳಿಗೂ ಸೂಕ್ತ  ಸಮರ್ಥವಾದ ಶಿಕ್ಷಣ ನೀಡುವ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಇಲ್ಲಿಯವರೆಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ, ಕ್ರೀಡೆ ಮೊದಲಾದ ವಿಷಯಗಳಿಗೂ ಅತಿ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಇಂತಹ ವಿದ್ಯಾಸಂಸ್ಥೆಯಲ್ಲಿ ಓದುವುದು ನಿಮ್ಮ ಪುಣ್ಯ ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ  ನಾಗರಾಜ್ ಪಿ  ಹೇಳಿದರು. 

ಅವರು ನಿನ್ನೆ ಸಂಜೆ ಗುರುಪುರದ ಬಿಜಿಎಸ್ ಶಾಲೆಯ ಸಭಾಭವನದಲ್ಲಿ ನಡೆದ  ಶ್ರೀ ಆದಿಚುಂಚನಗಿರಿ ಶಿಕ್ಷಣ  ಟ್ರಸ್ಟ್ (ರಿ )ಶಿವಮೊಗ್ಗ ಶಾಖೆಯ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗುರುಪುರ, ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶರಾವತಿ ನಗರ ಶಿವಮೊಗ್ಗ, ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ  ಪ್ರೌಢಶಾಲೆ ಶರಾವತಿ ನಗರ ಶಿವಮೊಗ್ಗ ಹಾಗೂ ಬಿಜಿಎಸ್ ವಸತಿಯುತ ಪ್ರೌಢಶಾಲೆ ಶರಾವತಿ ನಗರ, ಶಿವಮೊಗ್ಗ ಇವರ ಸಹಯೋಗದೊಂದಿಗೆ.    2022 — 23 ನೇ ಸಾಲಿನ    ಎಸ್ ಎಸ್ಎಲ್ ಸಿ ವಿದ್ಯಾರ್ಥಿಗಳಿಗಾಗಿ ಸರಸ್ವತಿ ಪೂಜಾ ಕಾರ್ಯಕ್ರಮವನ್ನು  ಗುರುಪುರದ ಬಿಜಿಎಸ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದು, ಶಾಲೆಯ ಮಕ್ಕಳ ಶಾರದಾ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯು ರಾಜ್ಯ ವ್ಯಾಪಿ,625 ಮತ್ತು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದ ಶಿಕ್ಷಣ ಸಂಸ್ಥೆಯಾಗಿರುವುದು ಹೆಮ್ಮೆಯ ವಿಷಯ ಎಂದರು.

ಪರೀಕ್ಷೆಯ ವಿಷಯದಲ್ಲಿ ಮಕ್ಕಳು ಗಾಬರಿಯಾಗುವುದು ಬೇಡ ಯಾವುದೇ ಒತ್ತಡ ಇಲ್ಲದೆ ಮುಕ್ತವಾಗಿ ಕಲಿತದ್ದನ್ನು ಸಮರ್ಪಕವಾಗಿ ಬರೆದು ಬನ್ನಿ, ಅಂಜಿಕೆ ಇಟ್ಟುಕೊಳ್ಳದಿರಿ ಪರೀಕ್ಷೆ ಎಂಬುದು ನೀವು ಮಾಡಿದ ಕಲಿಕೆಯ ಫಲ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಇಂದಿನ ದಿನಮಾನಗಳಲ್ಲಿ ಶಿಕ್ಷಣ ಪಡೆಯುವುದು ಕಷ್ಟದ ವಿಷಯವೇನಲ್ಲ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳು ಅತ್ಯಂತ ಕ್ಲಿಷ್ಟ ಹಾಗೂ ಕಠೋರ ಎನಿಸುತ್ತಿದ್ದವು ಅಂತಹುದರಲ್ಲೇ ನಾನು ಸಹ ಜಯಿಸಿ ಬಂದೆ ಎಂದು ತಮ್ಮ ಬದುಕಿನ ವಿವರಣೆಯೊಂದಿಗೆ ಮಕ್ಕಳಿಗೆ ಸವಿಸ್ತಾರವಾಗಿ ಪರೀಕ್ಷೆ ಎದುರಿಸುವ ಬಗ್ಗೆ ಮಾಹಿತಿ ನೀಡಿದರು.

 ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ಆದಿಚುಂಚನಗಿರಿ ಸಂಸ್ಥೆಯು ಅತ್ಯಂತ ವ್ಯವಸ್ಥಿತವಾದ ಕಲಿಕೆಗೆ ಹಾಗೂ ಸಂಸ್ಕಾರದ ಬದುಕು ರೂಪಿತವಾಗಲು ಪೂರಕವಾದ ಎಲ್ಲಾ ಬಗೆಯ ವಾತಾವರಣವನ್ನು ಸೃಷ್ಟಿಸಿದೆ. ಪರೀಕ್ಷೆಯ ಈ ಸಂದರ್ಭದಲ್ಲಿ ಅನಗತ್ಯವಾಗಿ ಗಾಬರಿಯಾಗದೆ ಸಕಾಲದಲ್ಲಿ ಪರೀಕ್ಷೆಗೆ ಹಾಜರಾಗುವ ಜೊತೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ, ಇಲ್ಲಿಯವರೆಗೆ ನಿಮಗೆ ಶಿಕ್ಷಕರು ಕಲಿಸಿರುವ ಕಲಿಕೆಯನ್ನು ಮನದಲ್ಲಿಟ್ಟುಕೊಂಡು ಪ್ರಶಾಂತವಾಗಿ ಪರೀಕ್ಷೆಯನ್ನು ಎದುರಿಸಿ, ಶಾಲೆಗೆ,ಶಿಕ್ಷಕರಿಗೆ, ಪೋಷಕರಿಗೆ ಗೌರವ ತರುವಂತಹ ಕೆಲಸ ಮಾಡಿ ಎಂದು ಮಕ್ಕಳಿಗೆ ತಿಳಿ ಮಾತು ಹೇಳಿದರು. 

ಎರಡು ದಿನಗಳ ಹಿಂದೆ ನಡೆದಂತಹ ಪರೀಕ್ಷಾ ಕೇಂದ್ರದ ಅದಲು ಬದಲು ಘಟನೆಯ ಬಗ್ಗೆ ಸವಿಸ್ತಾರವಾದ ಕಥೆಯ ರೂಪದಲ್ಲಿ ಮಾಹಿತಿ ನೀಡಿದ ಶ್ರೀಗಳು ಅಂದು ಮಗು ಮತ್ತು ಪೋಷಕ ಮಾಡಿದ ತಪ್ಪಿನಿಂದಾಗಿ ಪರೀಕ್ಷೆಗೆ ಹಾಜರಾಗುವ ಸಾಧ್ಯತೆಗಳು ಕಡಿಮೆಯಾಗಿದ್ದಾಗ, ಅಲ್ಲಿನ ಪೊಲೀಸ್ ಅಧಿಕಾರಿ ಒಬ್ಬರು ಕೇವಲ 20 ನಿಮಿಷದಲ್ಲಿ ಮಗುವಿನ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಬಂದ ಘಟನೆಯನ್ನು ತಿಳಿಸುವ ಮೂಲಕ ಪೋಷಕರು ಸಹ ಮಗುವಿನ ಪರೀಕ್ಷಾ ಕೇಂದ್ರ, ಪ್ರವೇಶ ಪತ್ರ, ನೀರು,ಪರೀಕ್ಷೆಗೆ ಅಗತ್ಯವಿರುವ ವಸ್ತುಗಳ ಬಗ್ಗೆ ಜಾಗೃತಿ ವಹಿಸಿ ಮಗುವಿಗೆ ಖುಷಿಯ ಮಾತನಾಡಿ ಸಂತೋಷದಿಂದ ಪರೀಕ್ಷೆ ಬರೆಯಲು ಕಳುಹಿಸಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜ್ ಪಿ. ಸಂಸ್ಥೆಯ ನಿರ್ದೇಶಕರುಗಳಾದ  ಶ್ರೀ ಕೊಳಿಗೆ ಡಿ ವಾಸಪ್ಪ ಗೌಡ, ಶ್ರೀ ಸತೀಶ್ ಡಿ. ವಿ. ಯವರು, ಭದ್ರಾವತಿ ಶಾಖೆಯ ಎಸ್ ಎ ವಿ ಶಾಲಾ –  ಕಾಲೇಜಿನ ಆಡಳಿತಾಧಿಕಾರಿಗಳಾದ ಶ್ರೀ ಜಗದೀಶ್ ಪಿ., ಸಂಸ್ಥೆಯ ಪ್ರಾಂಶುಪಾಲರುಗಳಾದ ಶ್ರೀಮತಿ ಹೇಮಾ ಎಸ್.ಆರ್., ಶ್ರೀ ಸುರೇಶ್ ಎಸ್. ಹೆಚ್. ಹಾಗೂ ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್,  ಇಂಜಿನಿಯರ್  ಬಸವರಾಜ್ ಹಾಗೂ ಸಂಸ್ಥೆಯ ಅಧ್ಯಾಪಕರುಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು 

error: Content is protected !!