ಶಿವಮೊಗ್ಗ : ಮಾರ್ಚ್ 17 : ಶಿಕಾರಿಪುರ ತಾಲೂಕಿನ ಶರಣ ಅಲ್ಲಮಪ್ರಭು ಅವರ ಜನ್ಮಸ್ಥಳವನ್ನು 5.00ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ ಶಿವಮೊಗ್ಗ, ಜಿಲ್ಲಾ ಪಂಚಾಯತ್, ಶಿವಮೊಗ್ಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಲೋಕೋಪಯೋಗಿ ಇಲಾಖೆ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್, ನಿರ್ಮಿತಿ ಕೇಂದ್ರ, ಇವರುಗಳ ಸಂಯುಕ್ತ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಅಕ್ಕಮಹಾದೇವಿ ಅವರ 65ಅಡಿ ಎತ್ತರದ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಿದ ನಂತರ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉಡುತಡಿಯಲ್ಲಿರುವ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಭೌತಿಕ ಕಟ್ಟಡ ನಿರ್ಮಾಣ ಹಾಗೂ ಅಗತ್ಯತೆಗಳಿಗಾಗಿ ಉನ್ನತ ಶಿಕ್ಷಣ ಇಲಾಖೆಯಿಂದ 10ಕೋಟಿ ಹಾಗೂ ಶ್ರೀಕ್ಷೇತ್ರ ಶಿವನಪಾದವನ್ನು 10ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದವರು ನುಡಿದರು.
ಕಾಯಕ ಸಮುದಾಯಗಳ ಜಾಗೃತಿ ಮೂಡಿಸಿದ ಪುಣ್ಯನೆಲ ಶಿಕಾರಿಪುರ ತಾಲೂಕು. ಮಾನ್ಯ ಯಡಿಯೂರಪ್ಪನವರು ರಾಜ್ಯದ ಎಲ್ಲಾ ಸಮುದಾಯಗಳ ವಿಕಾಸಕ್ಕೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ. 45ಕೋಟಿ ರೂ.ಗಳ ವೆಚ್ಚದಲ್ಲಿ ಕಾಗಿನೆಲೆ ಅಭಿವೃದ್ಧಿ, 14ಕೋಟಿ ರೂ.ಗಳ ವೆಚ್ಚದಲ್ಲಿ ಕನಕದಾಸ ಹುಟ್ಟೂರು ಅಭಿವೃದ್ಧಿಗೆ ಅನುದಾನ ನೀಡಿದ್ದಲ್ಲದೇ ಸರ್ಕಾರದ ವತಿಯಿಂದಲೇ ವಾಲ್ಮೀಕಿ ಜಯಂತಿ ಆಚರಣಗೆ ಆದೇಶ, ಮಠ-ಮಾನ್ಯಗಳ ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ನೆರವು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಲಾಗಿದೆ ಎಂದರು.
ನಾಯಕ ಮತ್ತು ಜನನಾಯಕರಲ್ಲಿ ವೆತ್ಯಾಸಗಳಿವೆ. ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ಜನನಾಯಕ ಯಡಿಯೂರಪ್ಪ ಎಂದು ಪ್ರಶಂಸಿಸಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಯಡಿಯೂರಪ್ಪನಂತಹ ಮುತ್ಸದ್ಧಿಗಳ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ಅವರ ಅದಮ್ಯ ಉತ್ಸಾಹ, ಚಿಂತನೆ, ಆಲೋಚನೆಗಳು, ದಣಿವರಿಯದ ಕಾರ್ಯಪ್ರವೃತ್ತಿ, ಅಚಲ ವಿಶ್ವಾಸ, ಕಲ್ಮಶ ರಹಿತ-ದ್ವೇಷಾಸೂಯೆಗಳಿಲ್ಲದ ಅವರ ಮನಸ್ಸು ಯಡಿಯೂರಪ್ಪ ಅವರನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ದಿವೆ ಎಂದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಶಿಕಾರಿಪುರ ಮಾತ್ರವಲ್ಲದೇ ನಾಡಿನ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ ಹೆಮ್ಮೆ ನನಗಿದೆ. ಜನರ ಆಶೋತ್ತರಗಳಿಗೆ ಪೂರಕವಾಗಿ ಇನ್ನಷ್ಟು ಕಾರ್ಯನಿರ್ವಹಿಸಲು ಬದ್ಧನಾಗಿದ್ದೇನೆ. ನಮ್ಮೆಲ್ಲಾ ಆಲೋಚನೆಗಳಿಗೆ ಪೂರಕವಾಗಿ ಸ್ಪಂದಿಸಿ, ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸಹಕರಿಸಿದ ಅಧಿಕಾರಿ-ಸಿಬ್ಬಂಧಿಗಳು ಅಭಿನಂದನಾರ್ಹರು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಇತಿಹಾಸದಲ್ಲಿ ಹೊಸ ಮನ್ವಂತರವನ್ನು ಸೃಷ್ಠಿಸಿದ ಶರಣರ ನೆಲೆವೀಡು ಶಿಕಾರಿಪುರ ಜಗತ್ತಿಗೆ ಅದ್ವಿತೀಯ ಧರ್ಮಸಂಸ್ಕಾರವನ್ನು ಪರಿಚಯಿಸಿದೆ. ಅಂತೆಯೇ ಶರಣರ ಆಶಯವನ್ನು ಈಡೇರಿಸುವ ಪರ್ವಕಾಲ ಇದಾಗಿದೆ ಎಂದರು.
ರಾಜ್ಯದಲ್ಲಿ 75,000ಕೋಟಿ ರೂ.ಗಳ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಲಾಗಿದೆ. 4ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ರಾಜ್ಯದ ರೈತರ ಬದುಕು ಹಸನಾಗಿಸುವಲ್ಲಿ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದೆ ಎಂಬದು ಹರ್ಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 29ಎಕರೆ ಪ್ರದೇಶಲ್ಲಿ ದೆಹಲಿ ಅಕ್ಷರಧಾಮದ ಮಾದರಿಯಲ್ಲಿ ಅಕ್ಕಮಹಾದೇವಿ ಕೋಟೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅದಕ್ಕಾಗಿ ಸರ್ಕಾರ 69ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದರು.
ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಕಲಿಗಳ ನೆಲೆ ಇದಾಗಿದೆ. ಜಾಗತಿಕ ಭೂಪಟದಲ್ಲಿ ಶಿಕಾರಿಪುರವನ್ನು ಗುರುತಿಸುವಂತೆ ಮಾಡಿದ ಅಪ್ರತಿಮ ಸಾಧಕರ, ಶರಣರ, ಮಹಾನುಭಾವರ ಪುಣ್ಯ ನೆಲ ಇದಾಗಿದೆ. ಜಾತಿ, ಮತ ಪಂಥಗಳನ್ನು ಮೀರಿದ ಶರಣರ ಮಾಹಿತಿಯನ್ನು ಜನರಿಗೆ ಪರಿಚಯಿಸುವಲ್ಲಿ 30 ಶರಣರ ಪ್ರತಿಮೆಗಳನ್ನು ಇಲ್ಲಿ ಚಿತ್ರಿಸಲಾಗಿದೆ ಎಂದ ಅವರು ಖಂಡಿತವಾಗಿಯೂ ಈ ಸ್ಥಳ ಪ್ರವಾಸಿಗರಿಗೆ ಮಾಹಿತಿ ಮತ್ತು ಸಂತಸವನ್ನು ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ್ರು, ಶ್ರೀಮತಿ ಭಾರತಿಶೆಟ್ಟಿ, ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಸಚಿವೆ ಶ್ರೀಮತಿ ಲೀಲಾದೇವಿ ಪ್ರಸಾದ್, ಮುಖಂಡರಾದ ವಿಜಯೇಂದ್ರ, ಹೆಚ್.ಟಿ.ಬಳಿಗಾರ್, ಶ್ರೀಮತಿ ರೇಖಾಬಾಯಿ, ಕೆ.ಎಸ್.ಗುರುಮೂರ್ತಿ, ಕೊಳಗಿ ರೇವಣಪ್ಪ, ಡಿ.ಟಿ.ಮೇಘರಾಜ್, ವೀರೇಂದ್ರ, ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧಿಪತಿಗಳು, ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಮಾನ್ಯ ಮುಖ್ಯ ಮಂತ್ರಿಯವರಿಂದ ಇಂದು ಉದ್ಘಾಟನೆಯಾದ ಕಾಮಗಾರಿಗಳು :
ಕರ್ನಾಟಕ ನೀರಾವರಿ ನಿಗಮದಿಂದ 69ಕೋಟಿ ರೂ.ಗಳ ವೆಚ್ಚದಲ್ಲಿ ಶಿಕಾರಿಪುರ ತಾಲ್ಲೂಕಿನ ಉಡತಡಿ ಅಕ್ಕಮಹಾದೇವಿ ಜನ್ಮಸ್ಥಳದಲ್ಲಿ ನಿರ್ಮಿಸಿರುವ 62 ಅಡಿ ಎತ್ತರದ ಶಿವಶರಣೆ ಅಕ್ಕಮಹಾದೇವಿ ಪುರ ಅನಾವರಣ ಹಾಗೂ ದೆಹಲಿ, ಅಕ್ಷರದಾಮದ ಮಾದರಿಯಲ್ಲಿ ನಿರ್ಮಿಸಿರುವ ಉದ್ಯಾನವನ, 125.00 ಕೋಟಿ ರೂ.ಗಳ ವೆಚ್ಚದಲ್ಲಿ ಶಿಕಾರಿಪುರ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಕಸಬಾ ಏತ ನೀರಾವರಿ ಯೋಜನಾ ಕಾಮಗಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ 475.00 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಿಕಾರಿಪುರ ಪಟ್ಟಣದಲ್ಲಿ ಬಸ್ ನಿಲ್ದಾಣದ ಕಾಮಗಾರಿ, 995.00 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಿಕಾರಿಪುರ ಬಸ್ ಘಟಕದ ಕಾಮಗಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 1500.00 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಿಕಾರಿಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ 773.92 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಒಗಿಂ 100/11 ಕೆ.ವಿ ವಿದ್ಯುತ್ ಉಪಕೇಂದ್ರ ಹಾಲಿ ಇರುವ 110/11 ಕೆವಿ ಬಳ್ಳಿಗಾವಿ-ಹಿರೇಕೆರೂರು ಏಕಮುಖ ಮಾರ್ಗದಿಂದ ಉದ್ದೇಶಿತ ಭಕ್ತನಕೊಪ್ಪ 110/11 ಕೆ.ವಿ ವಿದ್ಯುತ್ ಉಪ ಕೇಂದ್ರದವರೆಗೆ ಸುಮಾರು 0,198 ಕಿ.ಮೀ ಉದ್ದದ ಲಿಲೋ ಮಾರ್ಗ ರಚನೆ ಕಾಮಗಾರಿ ಹಾಗೂ 759.67 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 1*10 ಒಗಿಂ 100/11 ಕೆ.ವಿ ವಿದ್ಯುತ್ ಉಪಕೇಂದ್ರ & ಹಾಲಿ ಇರುವ 110/11 ಕೆವಿ ಶಿರಾಳಕೊಪ್ಪ (ಬಳ್ಳಿಗಾವಿ) -ಶಿಕಾರಿಪುರ ಏಕಮುಖ ಮಾರ್ಗದಿಂದ ಉದ್ದೇಶಿತ ಅಂಬಾರಗೊಪ್ಪ 110/11 ಕೆ.ವಿ ವಿದ್ಯುತ್ ಉಪ ಕೇಂದ್ರದವರೆಗೆ ಸುಮಾರು 0.06 ಕಿ.ಮೀ ಉದ್ದದ ಉಪ ಲಿಲೋ ಮಾರ್ಗ ರಚನೆ ಕಾಮಗಾರಿ, ಕರ್ನಾಟಕ ಸೋಪ್ಸ್ ಅಂಡ್ ಡಿಟಜೆಂರ್ಟ್ ಲಿಮಿಟೆಡ್ ವತಿಯಿಂದ 86.76 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಿಕಾರಿಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನಗಳ ಸರ್ಕಾರದ ಹಾಗೂ ಕೆ.ಎಸ್.ಡಿ.ಎಲ್. ನಿಗಮದ | ಸಿ.ಎಸ್.ಆರ್. ಅನುದಾನದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡಗಳ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಲೋಕೋಯೋಗಿ ಇಲಾಖೆ ವತಿಯಿಂದ 200ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, 450ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಹಾಗೂ ಹಳೆಯ ಕಟ್ಟಡದ ನವೀಕರಣ ಹಾಗೂ 150ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕ್ಯಾಂಟೀನ್ ಕಟ್ಟಡ ನಿರ್ಮಾಣ.
ಮಾನ್ಯ ಮುಖ್ಯ ಮಂತ್ರಿಯವರಿಂದ ಶಂಕುಸ್ಥಾಪನೆಗೊಂಡ ಕಾಮಗಾರಿಗಳು :
39ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶಿಕಾರಿಪುರ ತಾಲೂಕಿನ ಉಡಗುಣಿ, ತಾಳಗುಂದ _ಹೊಸೂರು ಹೋಬಳಿಗಳಲ್ಲಿ ಹೆಚ್ಚುವರಿಯಾಗಿ 104 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ 135ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತಾಲೂಕಿನ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಮುದಾಯ ಭವನಗಳ ಹಾಗೂ ಮೂಲಭೂತ ಸೌಕರ್ಯಗಳ ಕಾಮಗಾರಿ.