ಶಿವಮೊಗ್ಗ, ಜೂ.11 : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ಬದಲಾವಣೆ ಹಾಗೂ ಅಳವಡಿಕೆ ಕಾರ್ಯವನ್ನು ತ್ವರಿತಗೊಳಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.
ಅವರು ಬುಧವಾರ ನಗರದ ಲಕ್ಷ್ಮಿ ಮೆಡಿಕಲ್ ಬಳಿಯ ಸವರಲೈನ್ ಮಾರ್ಗದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಇಲ್ಲಿ ಹೈಮಾಸ್ಟ್ ಕಂಬದಿಂದಾಗಿ ಕುಡಿಯುವ ನೀರಿನ ಪೈಪ್‍ಲೈನ್‍ಗೆ ಹಾನಿಯಾಗಿರುವುದನ್ನು ಪರಿಶೀಲಿಸಿದ ಅವರು, ತಕ್ಷಣ ಹೈಮಾಸ್ಟ್ ಕಂಬವನ್ನು ಬದಲಾಯಿಸಲು ಸ್ಥಳಾಂತರಿಸಲು ಆದೇಶ ನೀಡಿದರು. ಈ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಇನ್ನೊಂದು ಬೀದಿ ದೀಪ ಅಳವಡಿಸಬೇಕು. ಆದಷ್ಟು ಬೇಗನೆ ಕುಡಿಯುವ ನೀರಿನ ಪೈಪ್‍ಲೈನ್ ದುರಸ್ತಿಗೊಳಿಸಿ ನೀರು ಸರಬರಾಜು ಪುನರಾರಂಭಿಸಲು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಅನುಷ್ಟಾನದ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಇಲಾಖೆಗಳು ರಸ್ತೆ ಕಟ್ಟಿಂಗ್ ಇತ್ಯಾದಿಗಳನ್ನು ಕೈಗೊಂಡ ಬಳಿಕ ಹಿಂದೆ ಇದ್ದಂತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.
ಟ್ಯೂಬ್‍ಲೈಟ್ ಅಳವಡಿಕೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತು ಅಗತ್ಯ ಇರುವ ಕಡೆಗಳಲ್ಲಿ ಹಾಳಾಗಿರುವ ಬೀದಿ ದೀಪಗಳನ್ನು ಬದಲಾಯಿಸಿ ಟ್ಯೂಬ್‍ಲೈಟ್‍ಗಳನ್ನು ಅಳವಡಿಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಎಲ್‍ಇಡಿ ದೀಪಗಳನ್ನು ಅಳವಡಿಸುವ ಯೋಜನೆ ಇದ್ದು, ತಾತ್ಕಾಲಿಕವಾಗಿ ಹೊಸ ಬೀದಿ ದೀಪಗಳನ್ನು ಅಳವಡಿಸುವುದನ್ನು ಸ್ಥಗಿತಗೊಳಿಸಲು ಸರ್ಕಾರ ಸೂಚನೆ ನೀಡಿದೆ. ಆದರೂ ಪಾಲಿಕೆಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಗತ್ಯ ಇರುವ ಕಡೆ ಬೀದಿ ದೀಪ ಅಳವಡಿಸಲಾಗುತ್ತಿದೆ. ಬೊಮ್ಮನಕಟ್ಟೆ ಹಾಗೂ ನಗರದ ಇತರ ವಾರ್ಡ್‍ಗಳಲ್ಲಿ ಈಗಾಗಲೇ ಬೀದಿದೀಪಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಹೆಚ್.ಬ್ಲಾಕ್ ಬಡಾವಣೆಯಲ್ಲಿ ಮೆಸ್ಕಾಂ ಶಿವಮೊಗ್ಗ ಇವರಿಂದ 77.35ಲಕ್ಷ ರೂ.ಗಳಿಗೆ ಅಂದಾಜು ಪಟ್ಟಿಯನ್ನು ಪಡೆದು ಪಾಲಿಕೆ ವತಿಯಿಂದ ವಿದ್ಯುತ್ ಲೈನ್ ಹಾಗೂ ಬೀದಿ ದೀಪದ ವ್ಯವಸ್ಥೆಯನ್ನು 5ತಿಂಗಳ ಅವಧಿಯಲ್ಲಿ ಕಲ್ಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚನೆ: ಮಹಾನಗರ ಪಾಲಿಕೆಯ ಹಲವು ಬಡಾವಣೆಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು. ನವುಲೆ ಸಮೀಪದ ಇಂದಿರಾಗಾಂಧಿ ಬಡಾವಣೆ, ಹೆಗ್ಗೇರಿ ಲೇಔಟ್, ನಿಸರ್ಗ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಭಿವೃದ್ಧಿ ಶುಲ್ಕವನ್ನು ಸರಿಯಾಗಿ ನಿರ್ವಹಿಸದಿರುವುದು, ಕಂದಾಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದನ್ನು ಗಮನಿಸಿ ಇಂಜಿನಿಯರ್‍ಗಳಿಗೆ ಎಚ್ಚರಿಕೆ ನೀಡಿದರು. ಬಡಾವಣೆಗಳ ಅಭಿವೃದ್ಧಿ ಕಡತಗಳನ್ನು ಪರಿಶೀಲನೆಗೆ ನಿಯಮಿತವಾಗಿ ಸಲ್ಲಿಸುವಂತೆ ಅವರು ತಿಳಿಸಿದರು.

error: Content is protected !!