ಶಿವಮೊಗ್ಗ : ಜೂನ್ 12 : ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಜೂನ್ 16ರಮದು ಬೆಳಿಗ್ಗೆ 10.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಬೆಂಗಳೂರು ವಿಭಾಗ ಮಟ್ಟದ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ಸಮಾರಂಭವನ್ನು ಏರ್ಪಡಿಸಿದೆ.
ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯನ್ನು ವ್ಯಾಸಂಗ ಮಾಡಿ, ಅತಿ ಹೆಚ್ಚು ಅಂಕಗಳಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸದುದ್ಧೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಕನ್ನಡ ಮಾಧ್ಯಮ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಗೌರವಿಸಲಾಗುವುದು.
ಪ್ರಸ್ತುತ ರಾಜ್ಯದಲ್ಲಿ 2018ರಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಗುವುದು. ಈ ಪುರಸ್ಕಾರವು ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕಪಡೆದ ಐವರು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
ಕನ್ನಡ ಮಾಧ್ಯಮ ಪ್ರಶಸ್ತಿಯನ್ನು ರಾಜ್ಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಸ್.ಎಸ್.ಎಲ್.ಸಿ. -701 ಮತ್ತು ಪಿ.ಯು.ಸಿ-594ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1295ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಬೆಂಗಳೂರು ವಿಭಾಗದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 197 ವಿದ್ಯಾರ್ಥಿಗಳು ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 167ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 364ವಿದ್ಯಾರ್ಥಿಗಳಿಗೆ ಗೌರವಿಸಲಾಗುವುದು.
ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ರೂ.25,000/-, ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಥಮಸ್ಥಾನ ರೂ.10,000/- ದ್ವಿತೀಯ ಸ್ಥಾನ ರೂ.9,000/- ಹಾಗೂ ತೃತೀಯ ಸ್ಥಾನ ರೂ.8,000/- ಹಾಗೂ ಪ್ರಮಾಣಪತ್ರದೊಂದಿಗೆ ವಿದ್ಯಾರ್ಥಿಗಳು ಹಾಗೂ ಅವರ ಇಬ್ಬರು ಪೋಷಕರು ಸೇರಿ ಒಟ್ಟು ತಲಾ ಮೂವರಿಗೆ ಅವರು ಓದಿದ ತಾಲೂಕು ಕೇಂದ್ರದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದುಹೋಗುವ ಪ್ರಯಾಣ ವೆಚ್ಚವನ್ನು ಪ್ರಾಧಿಕಾರದ ವತಿಯಿಂದ ಭರಿಸಲಾಗುವುದು. ಬೆಂಗಳೂರು ವಿಭಾಗದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ರಾಜ್ಯ ಸಾರಿಗೆ ಹಾಘೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡುವರು. ಶಾಸಕ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ವಿಷ್ಣುನಾಯ್ಕ್ ಅವರು ಆಶಯ ನುಡಿ ಮಾತನಾಡುವರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಮಹಾಪೌರರಾದ ಶ್ರೀಮತಿ ಲತಾಗಣೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್.ಕುಮಾರ್, ಸಾಂಸದ ಬಿ.ವೈ.ರಾಘವೇಂದ್ರ, ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.

error: Content is protected !!