ಶಿವಮೊಗ್ಗ : ಜೂನ್ 11 : ಬಾಲಕಾರ್ಮಿಕ ಪದ್ದತಿ ನಾಗರಿಕ ವ್ಯವಸ್ಥೆಯ ಕ್ರೂರ ವ್ಯವಸ್ಥೆಯಾಗಿದ್ದು, ಅದರ ಅಮೂಲಾಗ್ರ ನಿರ್ಮೂಲನೆಗೆ ನಾಗರಿಕ ಸಮಾಜದಲ್ಲಿರುವ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಾದುದು ಇಂದಿನ ತುರ್ತು ಅಗತ್ಯ ಎಂದು 2ನೇ ಹೆಚ್ಚುವರಿ ನ್ಯಾಯಾಧೀಶ ಕೂಡು ಒಕ್ಕಲಿಗರು ಮಹಾದೇವಪ್ಪ ಗಂಗಪ್ಪ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಮುಲ್, ಹಾಗೂ ವಾರ್ತಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಜಾಗೃತಿ ಮತ್ತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲೆಗಳಲ್ಲಿ ಶಿಕ್ಷಣ ಕಲಿಕೆಗೆ ದಾಖಲಾಗಿರುವ ಮಕ್ಕಳೇ ಭಾಗ್ಯವಂತರು. ಶಿಕ್ಷಣದ ಮುಖ್ಯವಾಹಿನಿಗೆ ಬಾರದೇ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾದ ಅನೇಕರು ನಮ್ಮ ನಡುವೆ ಇದ್ದಾರೆ. ಅವರು ಬಲಿಷ್ಟರ ಕೈಗೆ ಸಿಲುಕಿ ತಮ್ಮ ಅಮೂಲ್ಯ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಮಾತ್ರವಲ್ಲ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದವರು ನುಡಿದರು.
ಅಪ್ರಾಪ್ತರನ್ನು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ ಎಂದು ಅರಿತು ಬಾಲಕರನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಹಾಗೂ ಅಕ್ಷಮ್ಯ. ಸಂವಿಧಾನದ ಆಶಯದಂತೆ 14ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವುದು ಕೂಡ ಕಡ್ಡಾಯವಾಗಿದೆ. ಸರ್ಕಾರದ ಈ ನಿರ್ಧಾರದಲ್ಲಿ ಸಾರ್ವಜನಿಕರು ಕೈಜೋಡಿಸಬೇಕೆಂದವರು ನುಡಿದರು.
ಸಣ್ಣಮಕ್ಕಳನ್ನು ಅಪಾಯಕಾರಿ ಹಾಗೂ ಅಪಾಯಕಾರಿಯಲ್ಲದ ಸ್ಥಳಗಳಲ್ಲಿ ದುಡಿಯಲು ಒತ್ತಾಯಿಸುವುದು ಕೂಡ ಅಪರಾಧ. ಅದು ಸಾಬೀತಾದಲ್ಲಿ ದಂಡ ಹಾಗೂ ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ. ಇದನ್ನರಿತು ಸಾರ್ವಜನಿಕರು ಹಾಗೂ ಪೋಷಕರು ಸಹಕರಿಸಬೇಕು. ಮಕ್ಕಳು ಹಾಗೂ ಸಾರ್ವಜನಿಕರು ಇಂತಹ ಪ್ರಕರಣಗಳು ಕಂಡಲ್ಲಿ ಸಹಾಯವಾಣಿ 1098ಕ್ಕೆ ಉಚಿತವಾಗಿ ಕರೆಮಾಡಿ ದೂರು ದಾಖಲಿಸಬಹುದಾಗಿದ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್ ಅವರು ಮಾತನಾಡಿ, ಈ ದೇಶದಲ್ಲಿ ವಾಸಿಸುವ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಕಾರ್ಮಿಕರಾಗಿ ದುಡಿಯುತ್ತಿರುವ ಪ್ರತಿ ಮಕ್ಕಳಿಗೆ ರಕ್ಷಣೆ ಹಾಗೂ ಶಿಕ್ಷಣ ದೊರೆಯುವಂತಾಗಬೇಕು. ಅಂತಹ ಬಾಲಕಾರ್ಮಿಕರನ್ನು ಗುರುತಿಸಿ ಶಿಕ್ಷಣದ ಮುಖ್ಯವಾಹಿನಿಗೆ ಕರೆತರಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ಮಾತನಾಡಿ, ಶಾಲೆಯಿಂದ ಹೊರಗುಳಿದ ಪ್ರತಿ ಮಗುವಿನ ಬಗ್ಗೆ ಶಿಕ್ಷಕರು ಗಮನಹರಿಸಬೇಕು. ಜೊತೆಗೆ ಅದೇ ಶಾಲೆಯ ವಿದ್ಯಾರ್ಥಿಗಳು ಹಾಗೂ ಮನೆಯ ಸಮೀಪದ ವಾಸಿಗಳು ಮಗುವಿನ ಕಾರ್ಯಚಟುವಟಿಕೆಗಳ ಕುರಿತು ಗಮನಿಸಿದಲ್ಲಿ ಶಿಕ್ಷಕರ ಗಮನಸೆಳೆಯಬೇಕು ಎಂದ ಅವರು ಮಕ್ಕಳು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ದುಡಿಸಿಕೊಳ್ಳುತ್ತಿರುವವರನ್ನು ದಂಡನೆಗೆ ಗುರಿಪಡಿಸಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶ್ರೀಮತಿ ರೇಖಾ ಜಿ.ಎಂ., ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ.ವಿಶ್ವನಾಥ್, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುನಾಥ ಎ.ಎಸ್., ಕಾರ್ಮಿಕ ನಿರೀಕ್ಷಕ ಶಿವಕುಮಾರ್, ಹರೀಶ್‍ಕುಮಾರ್, ಸುರೇಶ ಹೊಳ್ಳ, ಮೂರ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಹೊರತರಲಾದ ಬಿತ್ತಿಪತ್ರವನ್ನು ಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್ ಅವರು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾವನ್ನು ಏರ್ಪಡಿಸಲಾಗಿತ್ತು.

error: Content is protected !!