ಶಿವಮೊಗ್ಗ.ಫೆ.22: ಎಲ್ಲಾ ಸಾಧನೆಗಳ ಹಿಂದೆ ಜಲಸಂಪನ್ಮೂಲ ಇದ್ದೇ ಇದೆ. ನೀರಿಲ್ಲದೆ ನಾವಿಲ್ಲ. ಎಲ್ಲಾ ಜೀವಿಗಳಿಗೂ ನೀರು ಅವಶ್ಯಕ. ಪ್ರಾಣಿ, ಪಕ್ಷಿಗಳು ಮೊದಲಾದ ಜೀವಿಗಳಿಗೆ ಸರಹದ್ದು ಇದೆ. ಅವು ಮಿತಬಳಕೆಯ ಪಾಠವನ್ನು ಕಲಿತಿದೆ. ಆದರೆ ಮನುಷ್ಯ ಜೀವಿಗೆ ಸರಹದ್ದು ಇಲ್ಲ. ಬೇಕಾಬಿಟ್ಟಿ ಅತಿಕ್ರಮಣ ಮಾಡುತ್ತಿದ್ದಾರೆ. ಅಂತರ್ಜಲ ಕಡಿಮೆಯಾಗಿದೆ. ಇನ್ನೊಂದು ಟರ್ಕಿಯಂತೆ ಆಗುವ ಮುನ್ನ ಜಲಸಂಪನ್ಮೂಲದ ಅರಿವು ಅತ್ಯಗತ್ಯ ಎಂದು ಖ್ಯಾತ ಪರಿಸರ ತಜ್ಞ ಜಲ,ನೆಲ,ಸಂರಕ್ಷಣೆ, ಜಾಗೃತಿ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆ ನಡೆಸಿ ಕರ್ನಾಟಕದ ಕೆರೆ, ನೀರಾವರಿ ಪರಂಪರೆ ಕುರಿತು ಅಧ್ಯಯನ ಮಾಡಿ ಕಣಿವೆ/ಕೆರೆಗಳ ನಿರ್ಮಾಣ ಮತ್ತು ಮಾರ್ಗದರ್ಶನಕ್ಕಾಗಿ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳ ಪ್ರವಾಸಮಾಡಿ 5 ಸಾವಿರಕ್ಕೂ ಹೆಚ್ಚು ಕೆರೆಗಳ ವೀಕ್ಷಣೆ ಮತ್ತು ಅವುಗಳ ಪುನರ್ನಿರ್ಮಾಣಕ್ಕಾಗಿ ಮಾರ್ಗದರ್ಶನ ಮಾಡಿದ್ದಲ್ಲದೆ ರಾಜ್ಯದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಪರಿಸರ ಸಂಬಂಧಿ ಕಾರ್ಯಾಗಾರಗಳಿಗೆ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿರುವ ಹಾಗೂ ಖ್ಯಾತ ನಟ ಯಶ್ರವರ ‘ಯಶೋಮಾರ್ಗ’ ಜಲಕಾಯಕದ ಮುಖ್ಯ ಮಾರ್ಗದರ್ಶಕರಾಗಿರುವ ಶಿವಾನಂದ ಕಳವೆ ಅವರೊಂದಿಗೆ ಶಿರಸಿ ತಾಲ್ಲೂಕಿನ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ಪರಿಸರ ಪ್ರೇಮಿ ಪ್ರಕಾಶ್ ಪ್ರಭು ಹಾಗೂ ಪತ್ರಕರ್ತ ನಾಗರಾಜ್ಶೆಣೈ
ನೀರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. 10 ವರ್ಷಗಳ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದಾಗ 2011 ರಿಂದ ರಾಜ್ಯದಲ್ಲಿ ಬರಗಾಲವನ್ನು ನೋಡುತ್ತಿದ್ದೇವೆ. 2018 ರಲ್ಲಿ ರಾಜ್ಯದಲ್ಲಿ 157 ತಾಲ್ಲೂಕು ಬರಪೀಡಿತವಾಗಿದೆ. ನೀರಿಲ್ಲವಾದರೆ ಅನಾರೋಗ್ಯ ಕಾಡುತ್ತದೆ. ಬಯಲುಸೀಮೆಯಲ್ಲಿ ಅನೇಕ ಜನರು ಗುಳೆ ಹೋಗುತ್ತಿದ್ದರು. ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಹಾಗೂ ಕೃಷಿಯ ಮೇಲೆ ಹಾಗೂ ಸ್ಥಳೀಯ ಆರ್ಥಿಕತೆಯ ಮೇಲೆ ಅಲ್ಲೋಲ ಕಲ್ಲೋಲವಾಗುವಂತಹ ಪರಿಣಾಮ ಬೀರಿತ್ತು. ಬರವನ್ನು ಗೆಲ್ಲಬೇಕಾದರೆ ಮಳೆಯನ್ನು ನೋಡು ಎಂಬುದು ನಾಣ್ಣುಡಿ. ಊರನ್ನು ಬರನಿರೋಧಕಗೊಳಿಸುವುದು ಹೇಗೆ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಹನಿ ಹನಿ ಕೂಡಿಸುವುದು ಮತ್ತು ಜಲಸಂರಕ್ಷಣೆ ಸಮುದಾಯ ಸಹಭಾಗಿತ್ವದಲ್ಲಿ ನಡೆಯಬೇಕು. ಎಲ್ಲರ ಮನೆಯ ಮನಸ್ಸನ್ನು ಗೆಲ್ಲಬೇಕು. ನೀರಿಲ್ಲದೆ ಬದುಕಿಲ್ಲ, ಸೆಕೆಂಡ್ಗೆ ಒಂದು ಹನಿ ನೀರೆಂದರೂ ಒಂದು ವರ್ಷಕ್ಕೆ 15ಸಾವಿರ ಲೀಟರ್ ಆಗುತ್ತದೆ. ಬಳಸಿದ ನೀರಿನ ಮರುಬಳಕೆ, ಮಳೆ ನೀರಿನ ಕೊಯ್ಲು ಮತ್ತು ನೀರಿನ ಮಿತಬಳಕೆಯಿಂದ ಜಲಸಂರಕ್ಷಣೆ ಸಾಧ್ಯ. ನೀರಿಲ್ಲದೆ ನಾವಿಲ್ಲ ಎಂಬ ಎಚ್ಚರದಿಂದ ಪ್ರತಿಯೊಬ್ಬ ಯುವಕ, ಯುವತಿಯರು ಕಾಲಾಳುಗಳಾದಾಗ ನೀರಿನ ಸಂರಕ್ಷಣೆ ಸಾಧ್ಯ ಎಂದರು.
ನಾವು ಅತ್ಯಂತ ವೇಗದ ಜೀವನದಲ್ಲಿದ್ದೇವೆ. ಹಾಗಾಗಿ ಬಿಕ್ಕಟ್ಟುಗಳು ಜಾಸ್ತಿಯಾಗಿದೆ.
ಹೊಸ ಯೋಜನೆಯ ಅವಶ್ಯಕತೆಗಿಂತ ಹಳೆಯ ಯೋಜನೆಗಳನ್ನೇ ಸಮರ್ಪಕವಾಗಿ ನಿರ್ವಹಿಸಬೇಕು. ಮಳೆಯ ಪ್ರಮಾಣ ನೋಡಿದರೆ ಅದನ್ನು ಹಿಡಿದಿಟ್ಟುಕೊಂಡರೆ ಕೆರೆಯ ಅತಿಕ್ರಮಣ ನಿಲ್ಲಿಸಿದರೆ ಕಣಿವೆ ಮತ್ತು ಕೊಳ್ಳಗಳ ಹೂಳು ತೆಗೆದು ಜಲ ಸಂಗ್ರಹ ಮಾಡಿದ್ದಲ್ಲಿ ಅಂತರ್ಜಲ ಮಟ್ಟ ಏರಲಿದೆ. ಮೊದಲು ಒಂದು ಚದರ ಕಿ.ಮೀ.ಗೆ 50 ಜನ ಇದ್ದಲ್ಲಿ ಈಗ 5 ಸಾವಿರ ಜನರಿದ್ದಾರೆ. ಕೊಳವೆ ಬಾವಿಗಳು ಅಪಾಯಕಾರಿಯಾಗಿದೆ. ನೀರಿನ ಬಳಕೆ ಹೆಚ್ಚುತ್ತಾ ಹೋಗುತ್ತಾ ಕೊಳವೆ ಬಾವಿಗಳ ನಿರ್ಮಾಣ ಜಾಸ್ತಿಯಾಗುತ್ತಿದೆ. ನೀರಿನ ಸಂಗ್ರಹಣೆಯ ವಿಧಾನಗಳ ಬಗ್ಗೆ ನಿರ್ಲಕ್ಷ್ಯತನ ಹೆಚ್ಚಿದೆ ಎಂದ ಅವರು ಈ ರಾಜ್ಯದ ಒಟ್ಟು ಕೃಷಿ ಭೂಮಿಯ ಶೇ.70ರಷ್ಟು ಭಾಗದಲ್ಲಿ 700 ಮಿಲಿ ಮೀಟರ್ ಮಳೆಯಾಗುತ್ತಿದೆ ಎಂದರು.
ಜಲಸಂರಕ್ಷಣೆಯ ತಂತ್ರಗಾರಿಕೆಯನ್ನು ಮಾಡುವಲ್ಲಿ ವಿಫಲರಾಗಿದ್ದೇವೆ. ವಿಪರ್ಯಾಸವೆಂದರೆ ಉಚಿತ ವಿದ್ಯುತ್ ಕೊಡುವುದರಿಂದ ನೀರಿನ ಬೆಲೆ ಗೊತ್ತಿಲ್ಲ. 24 ಗಂಟೆ ಮೋಟಾರ್ ಓಡಿಸುತ್ತಾ ಇರುತ್ತೇವೆ. ವಿದ್ಯಾವಂತರೆ ಇದನ್ನು ಮಾಡುತ್ತಿದ್ದಾರೆ. ನಮ್ಮಲ್ಲಿ ಜಲಸಂರಕ್ಷಣೆ ಮತ್ತು ವನ ಸಾಕ್ಷರತೆ ಇಲ್ಲದ್ದರಿಂದ ಜಲಕ್ಷಾಮ ಕಾಡುತ್ತಿದೆ. ಕೆರೆಯಲ್ಲಿ ಹೂಳು ತುಂಬಿದೆ. ಅದು ತೆಗೆಯುವ ಮುನ್ನ ತಲೆಯಲ್ಲಿರುವ ಹೂಳನ್ನು ತೆಗೆಯಬೇಕಾಗಿದೆ. ನದಿಯ ಗುಂಡಿಗಳು ಆಳವಾಗಿಲ್ಲ. ಅದನ್ನು ಬಟ್ಟಲ್ಲನ್ನಾಗಿ ಮಾಡಿದ್ದೇವೆ. ಹಾಗಾಗಿ ಪ್ರವಾಹಗಳನ್ನು ನಾವೇ ಮಾಡಿಕೊಂಡಿದ್ದೇವೆ. ರಾಜ್ಯದಲ್ಲಿ 5 ಸಾವಿರ ಬೋರ್ವೆಲ್ ಯಂತ್ರಗಳಿದ್ದವು. ಈಗ 50 ಸಾವಿರಕ್ಕೂ ಹೆಚ್ಚು ಬೋರ್ವೆಲ್ ಯಂತ್ರಗಳಿವೆ ಎಂದರು.
ಖಾಸಗಿಯವರು 1,500 ಕ್ಕೂ ಹೆಚ್ಚು ಅಡಿ ಆಳ ನೀರಿಗಾಗಿ ಭೂಮಿಯನ್ನು ಅಗೆಯುತ್ತಾರೆ. ಕೆರೆಗಳು, ಕೃಷಿ ಹೊಂಡಗಳು ಮಾಡುವ ಮೂಲಕ ನದಿಯ ಜೀವವನ್ನು ಉಳಿಸುವುದರ ಮೂಲಕ ಜಲಸಂರಕ್ಷಣೆಯಾಗಬೇಕು. ನೀರಿಗಾಗಿ ಅಂತರ್ರಾಜ್ಯ ಕಲಹ, ಕೊಲೆಗಳು ಆಗುತ್ತಿವೆ. ನೀರಿನ ಟ್ಯಾಂಕ್ಗಳೆ ಕಳವಾಗಿದೆ. ಬದಲಾವಣೆ, ಅಭಿವೃದ್ಧಿಯ ವೇಗ ಜಾಸ್ತಿಯಾಗಿದೆ. ಬದಲಾವಣೆ ಮತ್ತು ಸುಧಾರಣೆ ಯಾವುದು ಬೇಕು? ಸುಧಾರಣೆ ಆಗುವುದು ಮುಖ್ಯ. ನೀರು ಬೇಕು ಮಳೆ ಬೇಡ ಎಂಬ ಭಾವನೆಯಿದೆ. ಇಂಜಿನಿಯರ್ಗಳು ಎಲ್ಲರೂ ವಾಟರ್ ಇಂಜಿನಿಯರ್ ಆಗಬೇಕು. ಪ್ರತಿಯೊಬ್ಬ ಪ್ರಜೆಯು ನೀರಿನ ವಿಚಾರದಲ್ಲಿ ಸ್ವಯಂ ನಿಯಂತ್ರಕರಾಗಬೇಕು. ರಾಜ್ಯದಲ್ಲಿ 39,173 ಕೆರೆಗಳಿವೆ. ಸರ್ಕಾರಕ್ಕೆ ಇದರ ಹೂಳೆತ್ತುವುದೇ ಸಮಸ್ಯೆಯಾಗಿದೆ.
ರೆಡಿಮೇಡ್ ಸಿದ್ಧಸೂತ್ರಗಳಿಂದ ಕೆರೆಯ ನೀರನ್ನು ಹಿಡಿದಿಟ್ಟುಕೊಳ್ಳುವುದನ್ನು ಮರೆತ್ತಿದ್ದೇವೆ. ಇರುವ ಹಸಿರಿನ ತುಂಡುಗಳು (ಸಣ್ಣ ಕಾಡುಗಳು) ನಾಶವಾಗದ ಹಾಗೆ ಅವುಗಳಿಗೆ ಧಕ್ಕೆಯಾಗದ ಹಾಗೆ ಯೋಜನೆಗಳನ್ನು ಮಾಡಬೇಕು. ಪ್ರವಾಹದ ನೀರು ಬಳಸಲು ನಾವು ಯೋಚನೆಯನ್ನೇ ಮಾಡಲಿಲ್ಲ. ಬೃಹತ್ ಯೋಜನೆಗಳನ್ನು ಕೈಬಿಡಿ. ಸಣ್ಣ ಸಣ್ಣ ಯೋಜನೆಗಳನ್ನು ಮಾಡಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಅರಿವು ಮೂಡಿಸಿ. ಕಾದು ನೋಡಿ ಕೃಷಿ ಮಾಡಿ ಒಂದೇ ಬೆಳೆಯ ಬದಲು ಅಡಿಕೆಯೊಂದಿಗೆ ಹಲವಾರು ಉಪಬೆಳೆಯನ್ನು ಬೆಳೆಸಿ. ಪಶ್ಚಿಮಘಟ್ಟದ ವೈವಿಧ್ಯತೆಯೇ ವಿಶೇಷವಾಗಿದ್ದು, ನೀರಿನ ಜ್ಞಾನ ಬೆಳೆಸಿಕೊಂಡರೆ ಬರಗಾಲವನ್ನು ಗೆಲ್ಲಬಹುದು. ಜಲವಿದ್ದರೆ ಜೀವವಿರುತ್ತದೆ ಎಂಬುದನ್ನು ಅರಿತುಕೊಳ್ಳಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಜಲಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ವಿಚಾರವಾಗಿ ಜನಜಾಗೃತಿ ಮೂಡಿಸಲು ಅಭಿರುಚಿ ಸಂಸ್ಥೆ ಕುವೆಂಪು ರಂಗಮಂದಿರದಲ್ಲಿ ಫೆ.24 ರಂದು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಜಲಜಾಗೃತಿ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶಿವಾನಂದ ಕಳವೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲರೂ ಬಂದು ಭಾಗವಹಿಸಿ