ಶಿವಮೊಗ್ಗ: ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದಿದ್ದರೂ ಸಮಾಜದಲ್ಲಿ ವೈಚಾರಿಕ ಪ್ರಜ್ಞೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಹವ್ಯಾಸಿ ಖಗೋಳ ತಜ್ಞ ಎಚ್.ಎಸ್.ಟಿ.ಸ್ವಾಮಿ ಹೇಳಿದರು.
ಕಡೇಕಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಶಿವಮೊಗ್ಗ ಜಿಲ್ಲಾ ಸಮಿತಿಯು ಆಯೋಜಿಸಿದ್ದ ಖಗೋಳ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ದಿನ ಆಕಾಶ ವೀಕ್ಷಿಸಿ ನಮಗೆ ಕಾಣುವ ಖಗೋಳದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವ್ಯೋಮಕ್ಕೆ ಸಂಬಂಧಿಸಿ ಅನೇಕ ಮೂಢನಂಬಿಕೆಗಳಿದ್ದು, ಅವುಗಳನ್ನು ನಂಬಬಾರದು. ಧೂಮಕೇತು ಬಂದರೆ ಕೇಡುಕಾಗುತ್ತದೆ. ಗ್ರಹಗಳೇ ಅಲ್ಲದ ರಾಹು ಕೇತುಗಳ ಬಗ್ಗೆ ಅನಗತ್ಯ ಭಯ, ಉಲ್ಕೆ ಬಿದ್ದಾಗ ನೋಡಿದರೆ ಕೆಡುಕು ಸಂಭವಿಸುತ್ತದೆ. ಗ್ರಹಣ ಕಾಲದಲ್ಲಿರುವ ಆಚರಣೆಗಳು ಹೀಗೆ ಹತ್ತು ಹಲವು ಮೂಢನಂಬಿಕೆಗಳನ್ನು ತೊರೆಯಬೇಕು ಎಂದರು.
ಭೂಮಿಯ ಆಚೆಗಿನ ಸೋಜಿಗಮಯ ಜಗತ್ತನ್ನು ಅರಿಯಬೇಕು. ಆ ಕಾರಣ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಖಗೋಳ ಪರಿಚಯ ಮತ್ತು ಆಕಾಶಕಾಯಗಳನ್ನು ಗುರುತಿಸುವ ಜ್ಞಾನ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಸಮಿತಿಯ ಕಾರ್ಯದರ್ಶಿ ಲೋಕೇಶ್ವರಪ್ಪ ಮಾತನಾಡಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಶಿವಮೊಗ್ಗ ಜಿಲ್ಲಾ ಸಮಿತಿಯು ಶಿವಮೊಗ್ಗ ಸುತ್ತಮುತ್ತಲಿನ ಶಾಲೆಗಳಲ್ಲಿ ಜಗದಗಲ ಮುಗಿಲಗಲ ಶೀರ್ಷಿಕೆ ಯಡಿಯಲ್ಲಿ ವ್ಯೋಮ ದರ್ಶನ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ಗ್ರಹಗಳು, ಉಪಗ್ರಹಗಳು, ನಕ್ಷತ್ರ ಪುಂಜಗಳು, ರಾಶಿ ನಕ್ಷತ್ರ ಪುಂಜಗಳು, ನೀಹಾರಿಕೆಗಳು, ಗೆಲಾಕ್ಸಿಗಳು ಚಿತ್ರಗಳನ್ನು ತೋರಿಸುತ್ತ ಅವುಗಳ ಔಚಿತ್ಯ-ರಚನೆ-ದೂರಗಳ ವಿವರ ನೀಡಲಾಯಿತು. ಜಿಲ್ಲಾ ಸಮಿತಿಯ ನಿರ್ದೇಶಕಿ ಎಸ್.ಇ.ಗಾಯಿತ್ರಿ, ಕಡೇಕಲ್ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಚಂದ್ರಿಬಾಯಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಧ್ಯಾಹ್ನದ ಅವಧಿಯಲ್ಲಿ ಮತ್ತೂರಿನ ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಎಚ್.ಎಸ್.ಟಿ.ಸ್ವಾಮಿ, ಶಿವಮೊಗ್ಗ ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ನಾಗರಾಜ್ ಪರಿಸರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಾನ್ಸಿಸ್ ಜಿ.ಬೆಂಜಮಿನ್, ಜಿಲ್ಲಾ ಸಮಿತಿ ನಿರ್ದೇಶಕಿ ಡಾ. ರಶ್ಮಿ ಎಸ್. ಫ್ರಾನ್ಸಿಸ್, ಮತ್ತೂರು ಪ್ರೌಢಶಾಲೆಯ ಮುಖ್ಯಶಿಕ್ಷಕ ಸುಧೀಂದ್ರ ಉಪಸ್ಥಿತರಿದ್ದರು.