• ಶಿವಮೊಗ್ಗ, ಫೆಬ್ರವರಿ 19 : ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ದೇಶಕ್ಕೆ ನೀಡಿದ ಕೊಡುಗೆ ವಿಶೇಷವಾಗಿದೆ ಎಂದು ಚಾಣಕ್ಯ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಿನಯ್‌ ಜಾಧವ್‌ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾ ನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
    ಶಿವಾಜಿಯು ಮಹಾರಾಷ್ಟ್ರಕ್ಕೆ ಸೇರಿದವರು ಮಾತ್ರವಲ್ಲ. ಭಾರತ ದೇಶದ ಇತಿಹಾಸದಲ್ಲಿ ಅನೇಕ ಜನರು ತಮ್ಮದೇ ಆದ ಕೊಡುಗೆಗಳನ್ನು ದೇಶಕ್ಕೆ ನೀಡಿದ್ದಾರೆ. ಶಿವಾಜಿ ಮರಾಠ ಸಾಮ್ರಾಜ್ಯ ಮಾತ್ರ ಅಲ್ಲದೇ ಹಿಂದೂ ಸಾಮ್ರಾಜ್ಯವನ್ನು ಕಟ್ಟುತ್ತೇನೆ ಎಂದು ಸಂಕಲ್ಪಮಾಡಿದ್ದರು. ಛತ್ರಪತಿ ಶಿವಾಜಿಯು ಮೊಘಲರ ವಿರುದ್ಧ ಮಾತ್ರವಲ್ಲದೇ ಇಡೀ ದೇಶದ ಸಂಸ್ಕೃತಿಯ ದಾಳಿಯನ್ನು ವಿರೋಧಿಸಿದವರು, ಶಿವಾಜಿಯನ್ನು ಅರ್ಥ ಮಾಡಿಕೊಂಡಿರುವುದು ತುಂಬಾ ತಪ್ಪಾಗಿದೆ. ಅವರ ಇಡೀ ಇತಿಹಾಸವನ್ನು ಒಮ್ಮೆ ತಿಳಿಯಬೇಕು ಎಂದರು. ಶಿವಾಜಿ ಈ ದೇಶದ, ಮಣ್ಣಿನ ಸಂಸ್ಕೃತಿಗೆ ಆದ ದಾಳಿಯನ್ನು ಖಂಡಿಸಿದವರು, ತಾಯಿ ಜೀಜಾಬಾಯಿ ಶಿವಾಜಿ ಅವರನ್ನು ನೊಂದವರ ರಕ್ಷಣೆ ಮಾಡಬೇಕೆಂದು ಹೇಳಿ ಬೆಳೆಸಿದವರು ಎಂದು ಮಾತನಾಡಿದರು.
    ಛತ್ರಪತಿ ಶಿವಾಜಿ ರಾಜನಾಗಿ ಮೆರೆಯುವುದಕ್ಕಾಗಿ ಹುಟ್ಟಿದವರಲ್ಲ, ಅವರು ರಾಜನಾಗಿ ಮೆರೆಯಲೂ ಇಲ್ಲ. ವಿಪರ್ಯಾಸ ನಮ್ಮವರಿಗೇ ಶಿವಾಜಿಯ ಬಗ್ಗೆ ಗೊತ್ತಿಲ್ಲ ಎಂದರು. ಶಿವಾಜಿ ಮಹಾರಾಷ್ಟ್ರದವರು ಆದರೆ ಅವರು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮೇದಾರ ಲಿಂಗೇಶ್ವರಕ್ಕೆ ಜಾಗವನ್ನು ಬಿಟ್ಟುಕೊಟ್ಟ ಶಾಸನ ಸಿಗುತ್ತದೆ ಎಂದರು. ಈ ಸಾಲಿನ ಬಜೆಟ್‌ನಲ್ಲಿ 5 ಕೋಟಿ ನೀಡಿರುವುದು ಸಂತೋಷವೆನಿಸಿದೆ. ಶಿವಾಜಿ ಜಯಂತಿಯನ್ನು ಮಾಡಲೇಬೇಕು, ನಮ್ಮ ಇತಿಹಾಸವನ್ನು ನಾವು ತಿಳಿದುಕೊಳ್ಳಲೇಬೇಕು ಎಂದರು. ಶಿವಾಜಿ ಜಯಂತಿಯು ಶಿವಾಜಿಗೆ ಹಾರ ಹಾಕಿ ಮೆರವಣಿಗೆ ಮಾಡುವುದಕ್ಕೆ ಮಾತ್ರ ಸೀಮಿತವಾಗಬಾರದು. ಶಿವಾಜಿಯ ಅಜ್ಞಾನ ಪೀಠ ಕರ್ನಾಟಕದಲ್ಲಿ ಶುರುವಾಗಲೇಬೇಕು, ಪ್ರತಿ ಗ್ರಾಮದಲ್ಲಿಯೂ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣವಾಗಲೇಬೇಕು ಎಂದರು. ಮುಂದಿನ ಶಿವಾಜಿ ಜಯಂತಿಯು ಬಹಳ ದೊಡ್ಡ ಮಟ್ಟದಲ್ಲಿ ಆಚರಣೆ ಆಗಬೇಕು ಎಂದು ಹೇಳಿದರು. ಮುಂದಿನ ವರ್ಷ ಹೊಸ ಶಕ್ತಿಯನ್ನು ತುಂಬಲಿ, ಆ ಭರವಸೆಯಲ್ಲಿ ಕಾಯುತ್ತೇನೆ ಎಂದರು. ಶಿವಾಜಿ, ರಾಯಣ್ಣ, ಅಂಬೇಡ್ಕರ್‌, ಬುದ್ಧ ಇವರೆಲ್ಲಾ ಒಟ್ಟಾಗಿ ಶ್ರಮಿಸಿದವರು. ಶಿವಾಜಿಯ ಇತಿಹಾಸವನ್ನು ತಿಳಿದು, ಹೆಚ್ಚಿನ ಮಟ್ಟದಲ್ಲಿ ಶಿವಾಜಿಯ ಸಂದೇಶವನ್ನು, ಶ್ರೇಷ್ಠ ಸಾಧನೆಯನ್ನು ಸಾರೋಣ ಎಂದು ಹೇಳಿದರು.
    ತಾಲ್ಲೂಕು ಕಚೇರಿಯ ಉಪ ತಹಶೀಲ್ದಾರ್‌ ಗಣೇಶ್‌ ಅವರು ಮಾತನಾಡಿ, ಛತ್ರಪತಿ ಶಿವಾಜಿಯ ಮೆರವಣಿಗೆಯು ತುಂಬಾ ಸೊಗಸಾಗಿ ಬಂದಿದೆ ಎಂದು ಹೇಳಿ, ಎಲ್ಲಾರಿಗೂ 393 ನೇ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭ ಹಾರೈಸಿದರು. ಇದೇ ತಿಂಗಳ 27 ರಂದು ವಿಮಾನ ನಿಲ್ದಾಣದ ಉದ್ಘಾಟನೆಯಾಗಲಿದೆ ಎಂದು ಇದೇ ವೇಳೆ ಅವರು ಮಾತನಾಡಿದರು.
    ತಾಲ್ಲೂಕು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್‌ನ ಅಧ್ಯಕ್ಷರಾದ ದೇವರಾಜ ಶಿಂಧೆ ಮಾತನಾಡಿ, ಶಿವಾಜಿ ಭರತಖಂಡದ ವೀರ ಪುತ್ರ. ಒಗ್ಗಟ್ಟಾಗಿರಬೇಕು, ನಾವು ಹುಟ್ಟಿದ ಗ್ರಾಮದ ಅಭಿವೃದ್ಧಿ ಆಗಬೇಕು. ನಾವು ಮರಾಠರು ನೆಲ,ಜಲ ಉಳಿಸುವ ಸೈನಿಕರು ಎಂದರು. ಮುಂದಿನ ದಿನಗಳಲ್ಲಿ ಸರ್ಕಾರದ ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳೋಣ ಎಂದು ಹೇಳಿದರು.
    ಇದೇ ವೇಳೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಚುನಾವಣಾ ಸಂಯೋಜಕರಾದ ನವೀದ್‌ ಮಾತನಾಡಿ, ಮತದಾನದ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಸಲುವಾಗಿ, ಭಾರತ ಚುನಾವಣಾ ಆಯೋಗವು ಪ್ರಸ್ತುತಪಡಿಸಿದ ಮತದಾನದ ಮಹತ್ವದ ಸಂದೇಶ ನೀಡುವ ಮತ್ತು ಭಾರತದ ಎಲ್ಲಾ ರಾಜ್ಯ ಭಾಷೆಗಳಲ್ಲಿ ಖ್ಯಾತ ಗಾಯಕರು ಬಹುವರ್ಣ ರಂಜಿತವಾಗಿ ತಯಾರಿಸಲಾದ ಮೇ ಭಾರತ್‌ ಹೂಂ ಗೀತೆಯನ್ನು ಪ್ರಸಾರ ಮಾಡಿದರು. ಎಲ್ಲಾ ಸರ್ಕಾರಿ ಸಬೆ, ಸಮಾರಂಭಗಳಲ್ಲಿ ಈ ಗೀತೆಯನ್ನು ಪ್ರಸಾರ ಮಾಡಲು ಹಾಗೂ ಅತಿ ಹೆಚ್ಚು ವೀಕ್ಷಿಸಲು ಕೋರಿದರು.
    ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ನಗರಾಧ್ಯಕ್ಷರಾದ ದಿನೇಶ್‌ರಾವ್‌ ಚಾವ್ಹಾಣ್‌, ಕ್ಷತ್ರಿಯ ಮರಾಠ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ತಾನಾಜಿ ಬೋಸ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕರಾದ ಉಮೇಶ್‌.ಹೆಚ್‌ ಮತ್ತಿತರರು ಉಪಸ್ಥಿತರಿದ್ದರು.
error: Content is protected !!