ಉಕ್ಕು ಕಾರ್ಖಾನೆ ಉಳಿಸಲು ಎಲ್ಲ ಪ್ರಯತ್ನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಶಿವಮೊಗ್ಗ, ಫೆಬ್ರವರಿ 08: ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು ಉಳಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಹಾಗೂ ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮನ್ನು ಭೇಟಿ ಮಾಡಿದ ವಿ ಐ ಎಸ್ ಎಲ್ ಕಾರ್ಮಿಕರ ನಿಯೋಗದೊಂದಿಗೆ ಮಾತನಾಡಿದರು.
ವಿ ಐ ಎಸ್ ಎಲ್ ಅತ್ಯಂತ ಮಹತ್ವದ ಕಾರ್ಖಾನೆ. ಜಾಗತೀಕರಣದ ಪರಿಣಾಮ ಅನೇಕ ಸಾರ್ವಜನಿಕ ಸಂಸ್ಥೆಗಳು ಮುಚ್ಚಿವೆ . ವಿ ಐ ಎಸ್ ಎಲ್ ಕಾರ್ಖಾನೆಯು ಬಿ.ಎಸ್. ಯಡಿಯೂರಪ್ಪ ಅವರ ಪ್ರಯತ್ನದಿಂದ ಉಳಿದುಕೊಂಡು ಬಂದಿದೆ ಎಂದರು.
ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ನಿಲ್ಲಿಸಲು ಪ್ರಯತ್ನ
ಕೇಂದ್ರ ಸರ್ಕಾರ ಡಿಸ್ಇನ್ವೆಸ್ಟ್ ಮೆಂಟ್ ಯೊಜನೆ ಅಡಿಯಲ್ಲಿ ಈ ಕಾರ್ಖಾನೆ ಮುಚ್ಚಲು ಪ್ರಕ್ರಿಯೆ ಆರಂಭಿಸಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.
ನಮ್ಮ ರಾಜ್ಯದ ಕಬ್ಬಿಣದ ಅದಿರಿಗೆ ಸಾಕಷ್ಟು ಬೆಲೆ ಇದೆ. ಜಿಂದಾಲ್ ಸಂಸ್ಥೆ ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿರಬೇಕಾದರೆ, ಈ ಸಂಸ್ಥೆ ಉಳಿಸಲು ನಾವು ಪ್ರಯತ್ನ ಮಾಡುತ್ತೇವೆ. ಮೊದಲು ಕ್ಲೋಸರ್ ಪ್ರಕ್ರಿಯೆ ನಿಲ್ಲಿಸಲು ಪ್ರಯತ್ನ ಮಾಡಲಾಗುವುದು. ಬೇರೆ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.