ಪತ್ರಿಕೆಗಳನ್ನು ಓದಬೇಡಿ, ಅಧ್ಯಯನಿಸಿ: ಹಾಲಸ್ವಾಮಿ
ಶಂಕರಘಟ್ಟ, ಫೆ. 07: ಪತ್ರಿಕೋದ್ಯಮ ವಿದ್ಯಾರ್ಥಿಗಳು ವೃತ್ತಪತ್ರಿಕೆಗಳನ್ನು ಮಾಹಿತಿಗಾಗಿ ಓದುವ ಜೊತೆಗೆ ಅಧ್ಯಯನ ದೃಷ್ಠಿಯಿಂದ ಗಮನಿಸುವುದು ಸೂಕ್ತ ಮಾದರಿ ಎಂದು ಶಿವಮೊಗ್ಗದ ಸ್ಥಳೀಯ ಟಿವಿ ಚಾನೆಲ್ ‘ಟಿವಿ ಭಾರತ್’ನ ಮುಖ್ಯಸ್ಥರು ಮತ್ತು ಹಿರಿಯ ಪತ್ರಕರ್ತರಾದ ಹಾಲಸ್ವಾಮಿ ವಿದ್ಯಾರ್ಥಿಗಳಿಗೆ ಸಲಹೆಯಿತ್ತರು.
ಕುವೆಂಪು ವಿಶ್ವವಿದ್ಯಾಲಯದ ಆಡಿಯೋ-ವಿಷ್ಯುಯಲ್ ಸ್ಟುಡಿಯೋದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಪತ್ರಿಕೋದ್ಯಮ ಕಲಿಕೆಯ ಕುರಿತು ಸಂವಾದ ನಡೆಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲು ಮುದ್ರಣ ಮಾಧ್ಯಮದಲ್ಲಿ ಕೆಲಸ ಆರಂಭಿಸುವುದು ಓಳಿತು. ಅಲ್ಲಿ ಅಪಾರವಾದ ಬರವಣಿಗೆ ಕೌಶಲ, ವೃತ್ತಿ ತಂತ್ರಗಳು ಕರಗತ ಮಾಡಿಕೊಳ್ಳಲು ಅವಕಾಶಗಳಿರುತ್ತವೆ ಎಂದರು.
ಎಲ್ಲರೊಂದಿಗೆ ಬೆರೆಯುತ್ತಲೆ ನಿಮ್ಮ ಅಸ್ತಿತ್ವವನ್ನು ಮರೆಯುವುದನ್ನು ಮಾಧ್ಯಮದಲ್ಲಿ ಮರೆಯಬಾರದು. ಹೊಸ ವಿಚಾರಗಳನ್ನು ಜನರಿಗೆ ಅರ್ಥಪೂರ್ಣವಾಗಿ ತಲುಪಿಸಲು ಕುವೆಂಪು, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿಯಂತಹ ಮೇರು ಸಾಹಿತಿಗಳ ಪುಸ್ತಕಗಳನ್ನು ಓದುತ್ತಿರಬೇಕು. ಸಾಹಿತ್ಯದ ಓದಿನ ಜೊತೆಗೆ ಪತ್ರಿಕೆಗಳು ರೂಪುಗೊಂಡಿರುವ ಬಗೆ, ಪ್ರವೃತ್ತಿಗಳನ್ನು ಎಚ್ಚರದ ಕಣ್ಣುಗಳಲ್ಲಿ ಗಮನಿಸುತ್ತಿದ್ದರೆ ವೃತ್ತಿಯಲ್ಲಿ ನೆಲೆಯೂರುವುದು, ಯಶ ಕಾಣುವುದು ಸಾಧ್ಯ. ಪತ್ರಿಕೆಗಳ ಕೆಲಸದಲ್ಲಿ ಗಳಿಸುವ ಆಳವಾದ ಜ್ಞಾನದೊಂದಿಗೆ, ಧೈರ್ಯವಾಗಿ, ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತರೆ ದೃಶ್ಯ ಮಾಧ್ಯಮದಲ್ಲಿ ಭವಿಷ್ಯದಲ್ಲಿ ವಿಪುಲ ಅವಕಾಶಗಳು ದೊರೆಯುತ್ತವೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಎಂ. ಆರ್. ಸತ್ಯಪ್ರಕಾಶ್ ಸೇರಿದಂತೆ ಉಪನ್ಯಾಸಕರು, ಸಂಶೋಧನಾರ್ಥಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗಿಯಾಗಿದ್ದರು.