ಶಿವಮೊಗ್ಗ : ಜೂನ್ 06 : ತೋಟಗಾರಿಕೆ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದೊಂದಿಗೆ ಜೂನ್ 07ರಿಂದ 09ರವರೆಗೆ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಮೂರು ದಿನಗಳ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಜೇನು ಮತ್ತು ಸಾವಯವ ತೋಟಗಾರಿಕೆ ಮೇಳವನ್ನು ಏರ್ಪಡಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಮಾತನಾಡಿ, ರಸಾಯನಿಕಯುಕ್ತ ಹಣ್ಣು ತರಕಾರಿಗಳ ಬಳಕೆಯಿಂದಾಗಿ ಜನರ ಆರೋಗ್ಯದ ಮೇಲೆ ತೀವ್ರತರಹದ ಹಾನಿಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸಾವಯವ ಬೆಳೆಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ ಎಂದರು.
ಮಾವು ಸೇರಿದಂತೆ ತರಕಾರಿಗಳನ್ನು ಸಾಂಪ್ರದಾಯಿಕವಾಗಿ ಮಾಗಿಸುವುದು ಹಾಗೂ ಅದರ ಬಳಕೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಲಾಭದಾಯಕ ತೋಟಗಾರಿಕೆ ಬೆಳೆಗಳ ಕುರಿತು ಹಾಗೂ ರೈತರು ಹಾಗೂ ತಜ್ಞರೊಂದಿಗೆ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು ಈ ಮೇಳದ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ ಅವರು ಮಾತನಾಡಿ, ಜಿಲ್ಲೆಯ ರೈತರಿಗೆ ಮಾವು ಬೆಳೆಯನ್ನು ಉತ್ತೇಜಿಸಲು ವಿಫುಲ ಅವಕಾಶವಿದೆ. ಇದರೊಂದಿಗೆ ಜೇನು ಕೃಷಿಗೆ ಸಂಬಂಧಿಸಿದಂತೆಯೂ ಆಸಕ್ತ ರೈತರಿಗೆ ತಜ್ಞರಿಂದ ಮಾಹಿತಿ ನೀಡಲಾಗುವುದು ಎಂದ ಅವರು ಮೆಲ್ಲಿಫೆರಾ ಎಂಬ ಜೇನು ತಳಿಯು ನಮ್ಮ ಮಲೆನಾಡಿನ ಭಾಗಕ್ಕೆ ಹೊಂದಿಕೊಳ್ಳುವಂತಿದ್ದು, ಹೆಚ್ಚಿನ ಇಳುವರಿ ನೀಡುವಂತಹವುಗಳಾಗಿವೆ. ರೈತರು ಜೇನುಕೃಷಿಯ ಉಪಯಕ್ತ ತರಬೇತಿ ಪಡೆದು ಜೇನುಕೃಷಿಗೆ ಮುಂದಾಗುವಂತೆ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ.ಯೋಗೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಾವು ಬೆಳೆದ ಬೆಳೆಗಾರರಿಗೆ ಉತ್ತೇಜನ ನೀಡಲು ಉದ್ಧೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾವು ಬೆಳೆದ ಬೆಳೆಗಾರರ ಹಾಗೂ ಗ್ರಾಹಕರ ಜೊತೆಗೆ ನೇರ ಸಂಪರ್ಕ ಕಲ್ಪಿಸಲು ಇದು ಸಹಕಾರಿಯಾಗಿದೆ ಎಂದರು.
ಈ ಮೇಳದಲ್ಲಿ ರಾಜ್ಯದಲ್ಲಿ ಮಾವು ಬೆಳೆಗೆ ಪ್ರಸಿದ್ಧವಾಗಿರುವ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳ ಸುಮಾರು 20ಕ್ಕೂ ಹೆಚ್ಚಿನ ಮಾವು ತಳಿಗಳನ್ನು ಪ್ರದರ್ಶನ ಹಾಗೂ ನೋಂದಾಯಿಸಿದ ರೈತರು ಸಾಂಪ್ರದಾಯಿಕವಾಗಿ ಮಾಗಿಸಿದ ಮಾವುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅದಕ್ಕಾಗಿ 15ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ರೈತರಿಗೆ ಮಾವಿನ ಹೊಸ ತಳಿಯನ್ನು ಪರಿಚಯಿಸಲಾಗುವುದಲ್ಲದೇ ರಾಜ್ಯ ಹಾಗೂ ದೇಶದಲ್ಲಿ ಬೆಳೆಯಬಹುದಾದ ವಿವಿಧ ತಳಿಗಳು, ಹೈಬ್ರೀಡ್‍ಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದರು.
ಜಿಲ್ಲೆಯಲ್ಲಿ ಬೆಳೆಯುತ್ತಿರುವ ವಿವಿಧ ಹಲಸು ತಳಿಗಳು ಮತ್ತು ವಿವಿಧ ರೀತಿಯ ಹಲಸು ಉಪ ಉತ್ಪನ್ನಗಳು ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ತೂಬುಗೆರೆ ಹಲಸು, ರೈತರ ಸಂಘದಿಂದ ಚಂದ್ರಹಲಸು, ರುದ್ರಾಕ್ಷಿ ಹಲಸು ಮುಂತಾದ ತಳಿಗಳ ಪ್ರದರ್ಶನ ಮಾರಾಟ ಮಾಡಲಾಗುವುದು. ಅದಕ್ಕಾಗಿ ಪ್ರತ್ಯೇಕ ಮೂರು ಮಳಿಗೆಗಳನ್ನು ಒದಗಿಸಲಾಗಿದೆ ಎಂದರು.
ಈ ಮೇಳದಲ್ಲಿ ವಿಶೇಷವಾಗಿ ಜಿಲ್ಲೆಯಲ್ಲಿ ಸಾವಯವವಾಗಿ ಬೆಳೆದ ಉತ್ಪನ್ನಗಳನ್ನು ಹಾಗೂ ರೈತರ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು. ಅಲ್ಲದೇ ಸಾವಯವ ಬೇಸಾಯ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.
ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಲ್ಲಿ ಜೇನುಕೃಷಿಯ ಬಗ್ಗೆ ಆಸಕ್ತಿ ಹೆಚ್ಚಿಸಲು, ರೈತರು ಬೆಳೆದ ಜೇನಿನ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಜೇನುಕೃಷಿಯ ಕುರಿತು ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಜೂನ್ 08ರಂದು ಜಿಲ್ಲಾ ಪಂಚಾಯಿತಿಯ ಸಹ್ಯಾದ್ರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಸಾವಯವ ಕೃಷಿ ದೃಢೀಕರಣ ಮತ್ತು ಮಾರುಕಟ್ಟೆ ಎಂಬ ವಿಷಯದ ಕುರಿತು, ಮಧ್ಯಾಹ್ನ 12.45ರಿಂದ ಪ್ರಗತಿಪರ ಸಾವಯವ ಕೃಷಿಕರಿಂದ ಅನುಭವ ಹಂಚಿಕೆ. ಜೂನ್ 09ರಂದು ಬೆಳಿಗ್ಗೆ 10.30ರಿಂದ ಜೇನು ಕೃಷಿ ತರಬೇತಿ ಹಾಗೂ 12.45ರಿಂದ ಹಲಸಿನ ಮತ್ತು ಸಿರಿಧಾನ್ಯ ಖಾದ್ಯಗಳ ತಯಾರಿಕೆ ವಿಧಾನಗಳ ಕುರಿತು ತರಬೇತಿ ನೀಡಲಾಗುವುದು. ಆಸಕ್ತರು ಈ ಎಲ್ಲಾ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಡಾ.ಯೋಗೀಶ್ ಅವರು ತಿಳಿಸಿದರು.

error: Content is protected !!