ಶಿವಮೊಗ್ಗ, ಜೂನ್.04 : ನಗರದ ವಿವಿಧ ಕೇಂದ್ರಗಳಲ್ಲಿ ಜೂನ್ 8, 9 ಹಾಗೂ 16 ರಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದ ಸಭೆ ಇಂದು ನಡೆಯಿತು.
ದಿನಾಂಕ 8 ರಂದು 3 ಕೇಂದ್ರಗಳಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು 1261 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದಿನಾಂಕ 9 ರಂದು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ 23 ಕೇಂದ್ರಗಳಲ್ಲಿ 9271 ಅಭ್ಯರ್ಥಿಗಳು ಹಾಗೂ ದಿನಾಂಕ 16 ರಂದು ದ್ವಿತೀಯ ದರ್ಜೆಯ ಸಹಾಯಕರ ಹುದ್ದೆಗಳಿಗೆ 35 ಕೇಂದ್ರಗಳಲ್ಲಿ 13300 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ್ ತಿಳಿಸಿದರು.
ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್‍ಗಳನ್ನು ತರದಂತೆ ಎಚ್ಚರಿಕೆ ವಹಿಸಬೇಕು. ಬೆಳಕು ಗಾಳಿ ಹಾಗೂ ನೀರಿನ ವ್ಯವಸ್ಥೆ ಸರಿಯಾಗಿರುವಂತೆ ಜಾಗೃತೆವಹಿಸಬೇಕು. ಪ್ರಶ್ನೆ ಪತ್ರಿಕೆಗಳನ್ನು ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಭದ್ರಗೊಳಿಸುವಾಗ ವಿಡಿಯೋ ಮಾಡಬೇಕು. ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆ ಬರೆಯುವಾಗ ಕೊಠಡಿಯ ಹೊರ ಭಾಗದಿಂದ ಚಿತ್ರೀಕರಿಸಬೇಕು. ಇದಕ್ಕಾಗಿ ಒಬ್ಬ ಛಾಯಾಗ್ರಹಕನನ್ನು ನೇಮಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಭದ್ರತೆಯ ಕಾರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ನಂತರ ನಡೆದ ಸಭೆಯಲ್ಲಿ ಜೂನ್-11 ರಿಂದ 20ರ ವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಕುರಿತು ಚರ್ಚಿಸಿದ ಅವರು ಶಿವಮೊಗ್ಗದಲ್ಲಿ ಎರಡು ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಒಂದೊಂದು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಅಧಿಕಾರಿಗಳು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

error: Content is protected !!