ಶಂಕರಘಟ್ಟ, ಡಿ. 29: ಕುವೆಂಪು ಅವರ 118 ನೇ ಜನ್ಮದಿನೋತ್ಸವದಂದು ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಪ್ರಕಟಣೆಗೊಳ್ಳುತ್ತಿರುವ ಎರಡು ಆನ್ಲೈನ್ ಸಂಶೋಧನಾ ಜರ್ನಲ್ಗಳನ್ನು ವಿವಿಯ ಕುಲಸಚಿವೆ ಅನುರಾಧ ಜಿ., ಅವರು ಲೋಕಾರ್ಪಣೆಗೊಳಿಸಿದರು.
ಕುವೆಂಪು ವಿವಿಯ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಾಪಕ ಡಾ. ಸತ್ಯಪ್ರಕಾಶ್ ಎಂ. ಆರ್. ಅವರ ಸಂಪಾದಕತ್ವದಲ್ಲಿ “ದಿ ಸೋಶಿಯಲ್ ಸೈನ್ಸ್ ಡೈಲಾಗ್” ಎಂಬ ಸಂಶೋಧನಾ ಜರ್ನಲ್ ಅನ್ನು ಹೊರತರಲಾಗುತ್ತಿದೆ. ಇದು ಸಮಾಜ ವಿಜ್ಞಾನ ವಿಷಯಗಳಲ್ಲಿ ನಡೆಯುತ್ತಿರುವ ಸಂಶೋಧನಾ ಚಟುವಟಿಕೆಗಳನ್ನು ಅರ್ಧವಾರ್ಷಿಕ ಆವೃತ್ತಿಯಲ್ಲಿ ಪ್ರಕಟಿಸುತ್ತಿದ್ದು ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಲೇಖನಗಳನ್ನು ಬರೆಯಬಹುದಾಗಿದೆ.
ವಿವಿಯ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ಡಾ. ರೇಚಲ್ ಬಾರಿ ಅವರ ಸಂಪಾದಕತ್ವದಲ್ಲಿ ‘ಪೂರ್ಣದೃಷ್ಟಿ’ ಎಂಬ ಅರ್ಧವಾರ್ಷಿಕ ಆವೃತ್ತಿಯ, ದ್ವಿಭಾಷಾ ಜರ್ನಲ್ ಅನ್ನು ಪ್ರಕಟಿಸಲಾಗುತ್ತಿದೆ. ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿನ ಸಾಹಿತ್ಯಿಕ ಲೇಖನಗಳನ್ನು ಪ್ರಕಟಿಸುವ ಉದ್ದೇಶದೊಂದಿಗೆ ಜರ್ನಲ್ ಪ್ರಕಟವಾಗುತ್ತಿದೆ. ಎರಡೂ ಜರ್ನಲ್ಗಳು ಓಪನ್ ಆಕ್ಸೆಸ್ ಆಗಿದ್ದು, ಆನ್ಲೈನ್ನಲ್ಲಿ ಲಭ್ಯವಿರುತ್ತವೆ ಮತ್ತು ಉಚಿತವಾಗಿ ಓದಬಹುದಾಗಿದೆ.
ಈ ಸಂದರ್ಭದಲ್ಲಿ ಜರ್ನಲ್ಗಳ ಸಂಪಾದಕರು, ತಾಂತ್ರಿಕ ಸಿಬ್ಬಂದಿ ಹಾಜರಿದ್ದರು.