ಶಿವಮೊಗ್ಗ : ನಗರದ ಶ್ರೀ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಬುಧವಾರ ಸಂಜೆ ಶಬರಿಮಲೈ ಯಾತ್ರೆಗೆ ತೆರಳುವ 300 ಮಂದಿಗೆ ಸರ್ಜಿ ಫೌಂಡೇಶನ್ ಹಾಗೂ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಮೆಡಿಕಲ್ ಕಿಟ್, ವಾಟರ್ ಬಾಟಲ್ ಹಾಗೂ 2023 ರ ಕ್ಯಾಲೆಂಡರ್‌ಗಳನ್ನು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ವಿತರಿಸಿದರು.
ಈ ಸಂದರ್ಭ ಅವರು ಮಾತನಾಡಿ, ಮೈ ನಡುಗುವ ಛಳಿಯಲ್ಲಿ ಮುಂಜಾನೆ ಎದ್ದು ಸ್ನಾನ, ಜಪ ಹಾಗೂ ಭಜನೆಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ನೆನೆಯುತ್ತ ಗುರುಸ್ವಾಮಿಗಳು ಹಾಗೂ ಭಕ್ತರು ಮಾಡುತ್ತಿರುವ ಈ ಧಾರ್ಮಿಕ ಕಾರ್ಯಕ್ರಮ ಎಲ್ಲರೂ ಭಕ್ತಿ ಮಾರ್ಗದಲ್ಲಿ ನಡೆಯಲು ಪೂರಕವಾಗಿದೆ. ನಿತ್ಯವೂ ಭಗವಂತನನ್ನು ಪ್ರಾರ್ಥಿಸುವುದರಿಂದ, ಭಜಿಸುವುದರಿಂದ, ಅನುಷ್ಠಾನ ಮಾಡುವುದರಿಂದ, ಉಪವಾಸ ವ್ರತಗಳನ್ನು ಕೈಗೊಳ್ಳುವ ಮೂಲಕ ಭಗವಂತನ ಜಪಿಸಿದರೆ ಆತ್ಮದಲ್ಲಿ ದೇವರನ್ನು ಕಾಣಲು ಸಾಧ್ಯವಿದೆ ಎಂದು ಹೇಳಿದರು.
ಪ್ರತಿ ವರ್ಷವೂ ಶಿವಮೊಗ್ಗದಲ್ಲಿ ಸಾವಿರಾರು ಅಯ್ಯಪ್ಪ ಸ್ವಾಮಿ ಭಕ್ತರು ಶಬರಿ ಮಲೈಗೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ತೆರಳುತ್ತಾರೆ. ಅಲ್ಲದೇ ಪಾದಯಾತ್ರೆ ಮಾಡುವ ಸಂದರ್ಭ ಭಕ್ತರಿಗೆ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯಗಳು ಆಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಸರ್ಜಿ ಫೌಂಡೇಶನ್ನಿನಿಂದ ಒಆರ್‌ಎಸ್ ಪ್ಯಾಕೆಟ್, ಜ್ವರ, ಶೀತ, ಸುಸ್ತು, ಮೈ ಕೈ ನೋವು, ಬೇದಿ ಸೇರಿದಂತೆ ಹಲವು ರೀತಿಯ ಔಷಧಿಗಳನ್ನು ಕಿಟ್‌ನಲ್ಲಿ ನೀಡಲಾಗಿದೆ. ಜೊತೆಗೆ ಔಷಧಿಯನ್ನು ತೆಗೆದುಕೊಳ್ಳುವ ಮಾಹಿತಿಯ ಚೀಟಿಯನ್ನೂ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಒದಗಿಸಲಾಗಿದೆ. ಯಾವುದೇ ಸಂದೇಹಗಳಿದ್ದರೆ ತಕ್ಷಣ ನಮ್ಮ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಭಗವಂತನ ಆಶೀರ್ವಾದದೊಂಂದಿಗೆ ಎಲ್ಲ ಯಾತ್ರಾರ್ತಿಗಳು ಸುಖಕರವಾಗಿ ಸ್ವಾಮಿಯ ದರ್ಶನ ಮಾಡಿಕೊಂಡು ಬರುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಬರೀಶ್ ಗುರುಸ್ವಾಮಿ, ಧರ್ಮ ಲಿಂಗಂ ಗುರುಸ್ವಾಮಿ, ಆನಂದ ಗುರುಸ್ವಾಮಿ, ಎಸ್.ಮಣಿ ಗುರುಸ್ವಾಮಿ,ಜಗದೀಶ್ ಗುರುಸ್ವಾಮಿ ಅವರನ್ನು ಗೌರವಿಸಲಾಯಿತು ಹಾಗೂ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ಸರ್ಜಿ ಫೌಂಡೇಶನ್ನಿನ ಟ್ರಸ್ಟಿಗಳಾದ ಹರ್ಷ ಸರ್ಜಿ, ಈಶ್ವರ್ ಸರ್ಜಿ ಅವರನ್ನು ಸನ್ಮಾನಿಸಲಾಯಿತು.