ವಿಧಾನಪರಿಷತ್ತಿನಲ್ಲಿ ನನ್ನ ಇ-ತ್ಯಾಜ್ಯ ಕುರಿತ ಚುಕ್ಕೆ ಗುರುತಿನ ಪ್ರಶ್ನೆಗೆ ಮಾನ್ಯ ಪರಿಸರ, ವಿಜ್ಞಾನ ಹಾಗೂ ಜೀವಿಶಾಸ್ತ್ರ ಸಚಿವರಾದ ಶ್ರೀ ಆನಂದ್ ಸಿಂಗ್ರವರು ಉತ್ತರಿಸುತ್ತಾ, ರಾಜ್ಯದಲ್ಲಿರುವಂಥ ಇ-ತ್ಯಾಜ್ಯ ಘಟಕಗಳೆಷ್ಟು, ಅವುಗಳ ನಿರ್ವಹಣೆ ಹೇಗಾಗುತ್ತದೆ, ಎಷ್ಟು ಟನ್ ಇ-ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂಬ ಮಾಹಿತಿಗಳನ್ನು ಒದಗಿಸಿದರು. ಮುಂದುವರೆದು, ಈ ಘಟಕಗಳಲ್ಲಿ ಪ್ರತಿ ವರ್ಷ ಬೆಂಗಳೂರು ನಗರ, ಶಿವಮೊಗ್ಗ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎಷ್ಟು ಇ- ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ, ಕಳೆದ ಮೂರು ವರ್ಷಗಳಲ್ಲಿ ಎಷ್ಟು Tonne Per Annum ಸಂಗ್ರಹಣೆಯಾಗಿದೆ ಎಂಬ ಮಾಹಿತಿಗಳನ್ನು ಒದಗಿಸಿದರು.
ಭಾರತವು ಇ-ತ್ಯಾಜ್ಯ ಉತ್ಪಾದನೆಯಲ್ಲಿ 5ನೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ್ದು, ರಾಜ್ಯಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ತವರೂರಾಗಿರುವ ಬೆಂಗಳೂರು ನಗರವು ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಟಿ.ವಿ. ಮೊಬೈಲ್, ಫ್ರಿಡ್ಜ್, ಸ್ಮಾರ್ಟ್ ಫೋನ್, ವಾಷಿಂಗ್ ಮೆಷಿನ್, ಪ್ರಿಂಟರ್, ಕೀ ಬೋರ್ಡ್, ಏರ್ ಕಂಡೀಷನರ್ ಸೇರಿದಂತೆ 23 ಬಗೆಯ ಉಪಕರಣಗಳಿದ್ದು, ಇದರ ಜೊತೆಗೆ ಎಲೆಕ್ಟ್ರಾನಿಕ್ ತ್ಯಾಜ್ಯಗಳಾದ ಟ್ಯೂಬ್ ಲೈಟ್ಸ್, ಸಿ.ಎಫ್.ಎಲ್. ಬಲ್ಬ್, ಮುಂತಾದವುಗಳಲ್ಲಿರುವ ಆರ್ಸೆನಿಕ್, ಅಮೋನಿಯಂ ಮುಂತಾದ ಹಾನಿಕಾರಕ ತ್ಯಾಜ್ಯಗಳು ಸೇರಿಕೊಳ್ಳುತ್ತಿವೆ. ಇವುಗಳು ಅತೀ ದೊಡ್ಡ ಸಂಖ್ಯೆಯಲ್ಲಿ ಇ-ತ್ಯಾಜ್ಯಗಳಾಗಿ ಹೊರಹೊಮ್ಮುತ್ತಿರುವುದರಿಂದ ಇದರಲ್ಲಿರುವ ಅಪಾಯಕಾರಿ ವಿಷಾನಿಲಯಗಳು ಹೊರಗಡೆ ಬಂದು ವಾತಾವರಣದಲ್ಲಿ ಹಾಗೂ ಮಣ್ಣಿನಲ್ಲಿ ಸೇರುವುದರಿಂದ ಪರಿಸರಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಹಾನಿಯಾಗುತ್ತಿದೆ. ಇದು ನಮ್ಮ ಈಗಿನ ಮತ್ತು ಮುಂದಿನ ಪೀಳಿಗೆಯ ಪ್ರಶ್ನೆಯಾಗಿದ್ದು ಪರಿಸರ ಮತ್ತು ಆರೋಗ್ಯ ಎರಡರ ಕಡೆಯೂ ಕಾಳಜಿ ವಹಿಸಬೇಕಾದ ಅಗತ್ಯತೆ ಇದ್ದು ನಾವೆಲ್ಲರೂ ಅದಕ್ಕೆ ಧನಿಯಾಗಬೇಕಾಗಿದೆ
ಬಹಳ ಪ್ರಮುಖವಾಗಿ ಸೋಲಾರ್ ಹಾಗೂ ಇವಿ (Electric Vehicles) ವೆಹಿಕಲ್ಸ್ಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ಇವುಗಳಿಗೆ ವಿದ್ಯುತ್ ಸಂಗ್ರಹ ಮಾಡುವ ಸಲುವಾಗಿ ಅಳವಡಿಸುವಂಥ ಬ್ಯಾಟರಿಗಳು ಮುಂದಿನ ಎರಡು ಮೂರುವರ್ಷಗಳಲ್ಲಿ ಬಹಳ ದೊಡ್ಡ ಪ್ರಮಾಣದ ಇ-ತ್ಯಾಜ್ಯವಾಗಿ ಹೊರಬರಲಿವೆ. ಆದಕಾರಣ, ಈಗಿನಿಂದಲೇ ಇ ತ್ಯಾಜ್ಯ ವಸ್ತುಗಳ ನಿಯಂತ್ರಣ ಮತ್ತು ನಿರ್ವಹಣೆ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂಬ ಬಗ್ಗೆ ನನ್ನ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತಂದಿರುತ್ತದೆ.
ಇ-ತ್ಯಾಜ್ಯವನ್ನು ಬೆಂಗಳೂರು ಸೇರಿದಂತೆ ಎಲ್ಲ ನಗರ ಜಿಲ್ಲೆಗಳಲ್ಲೂ ಆವರಿಸುವ ಮೊದಲು ನಾವೆಲ್ಲರೂ ಜಾಗೃತರಾಗುವುದು ಅನಿವಾರ್ಯ ಮತ್ತು ಮುಖ್ಯವಾಗುತ್ತದೆ. ಖಾಸಗೀ ಸಹಭಾಗಿತ್ವದೊಂದಿಗೆ ಪಿ.ಪಿ.ಪಿ. ಮಾದರಿಯಲ್ಲಿ ತಾಜ್ಯಗಳ ಸಂಗ್ರಹಣೆ, ಬೇರ್ಪಡಿಸುವಿಕೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ಕೈಗೊಂಡು ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಾವೆಲ್ಲರೂ ಸಾಗೋಣ. ಇ-ತ್ಯಾಜ್ಯದ ಬಗ್ಗೆ ಬಹಳ ದೊಡ್ಡ ಮಟ್ಟದಲ್ಲಿ ವಿಧಾನ ಪರಿಷತ್ತಿನಲ್ಲಿ ಚರ್ಚೆಯಾಗಿದೆ ಎನ್ನುವುದು ನನ್ನ ಅನಿಸಿಕೆ. ಸರ್ಕಾರದ ಕಾಲಕಾಲಕ್ಕೆ ರೂಪಿಸುವಂಥ ನಿಯಮಗಳಲ್ಲಿ ಇ-ತ್ಯಾಜ್ಯ ವಿಲೇವಾರಿ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಬೇಕೆನ್ನುವುದು ನನ್ನ ಕೋರಿಕೆಯಾಗಿರುತ್ತದೆ.
ನನ್ನ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಯನ್ನು ಮಾನ್ಯ ಸಚಿವರು ತುಂಬುಹೃದಯದಿಂದ ಸ್ವಾಗತಿಸಿದ್ದು ನನ್ನ ಕಳಕಿಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಅಲ್ಲದೆ, ತಕ್ಷಣವೇ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ನಾನು ನೀಡಿರುವಂಥ ಸಲಹೆಗಳ ಬಗ್ಗೆ ಸೂಕ್ತವಾದ ಕ್ರಮವನ್ನು ವಹಿಸುವುದಾಗಿ, ಈ ಸಂಬಂಧ ಫೆಬ್ರವರಿ ತಿಂಗಳಿನಲ್ಲಿ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿರುತ್ತಾರೆ.