ಶಿವಮೊಗ್ಗ, ಜೂನ್ 01 : ರೈತರಿಗೆ ಕೃಷಿಯಲ್ಲಿ ನಿಶ್ಚಿತ ಆದಾಯ ದೊರಕಿಸಿಕೊಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯಲ್ಲಿ ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಇವರ ಸಹಯೋಗದೊಂದಿಗೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಜಿಲ್ಲೆಯ ಎಲ್ಲಾ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಬೆಳೆ ವಿಮೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಅರ್ಹ ರೈತರು ನಿಗಧಿಪಡಿಸಿದ ಅವಧಿಯೊಳಗಾಗಿ ವಿಮಾ ನೋಂದಣಿ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕುಗಳ ವ್ಯವಸ್ಥಪಾಕರುಗಳ ಸಭೆ ನಡೆಸಿ, ವ್ಯಾಪಕ ಪ್ರಚಾರ ಕೈಗೊಂಡು ಅತಿಹೆಚ್ಚಿನ ರೈತರು ನೋಂದಾಯಿಸಿಕೊಳ್ಳಲು ಪ್ರೇರಣೆ ನೀಡುವಂತೆ ಕ್ರಮಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಕೃತ ಹಾಗೂ ರಾಷ್ಟ್ರೀಕೃತವಲ್ಲದ ಸಹಕಾರಿ ಬ್ಯಾಂಕುಗಳಿಂದ ಬೆಳೆಸಾಲ ಪಡೆದ ಸಾಲಗಾರ ರೈತರಿಗೆ ಬ್ಯಾಂಕುಗಳಲ್ಲಿಯೇ ಕಡ್ಡಾಯವಾಗಿ ಬೆಳೆವಿಮೆ ಮಾಡಿಸಲಾಗುತ್ತದೆ. ಆದರೆ, ಸಾಲಗಾರರಲ್ಲದ ರೈತರು ಬೆಳೆವಿಮೆಗೆ ಹೆಸರನ್ನು ನೋಂದಾಯಿಸಿಕೊಳ್ಳಲು ಬ್ಯಾಂಕುಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಾರರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಮೂಲಕ ಬೆಳೆಹಾನಿಗೆ ಸಂಬಂಧಿಸಿದಂತೆ ಕೃಷಿ, ಕಂದಾಯ, ತೋಟಗಾರಿಕೆ, ಪಂಚಾಯತ್ ಅಭಿವೃದ್ದಿ ಇಲಾಖೆಯ ನಿಯೋಜಿತ ಅಧಿಕಾರಿಗಳ ತಂಡವು ತಂತ್ರಜ್ಞಾನಾಧಾರಿತ ಅಂದರೆ, ಮೊಬೈಲ್ ಆ್ಯಪ್ ಬಳಸಿ, ಜಿ.ಪಿ.ಎಸ್.ಆಧಾರದ ಮೇಲೆ ಕೈಗೊಳ್ಳಲಾಗುವ ಬೆಳೆ ಕಟಾವು ಪ್ರಯೋಗಗಳಿಂದ ಬಂದ ಮಾಹಿತಿಯನ್ನಾಧರಿಸಿ ಮೊತ್ತ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು ಎಂದ ಅವರು, ವಿಮಾ ಮೊತ್ತ ಪಾವತಿಸುವ ರೈತರು ಬಿತ್ತನೆಗೂ ಮೊದಲು ಹಣ ಪಾವತಿಸಬಹುದಾಗಿದೆ. ಅಲ್ಲದೇ ಹಣ ಪಾವತಿಯ ನಂತರವೂ ಬೆಳೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಶಿವಮೊಗ್ಗ ತಾಲೂಕಿನ ಹಾರ್ನಳ್ಳಿ, ಹೊಳಲೂರು-1, ಕುಂಸಿ, ನಿಧಿಗೆ-1, ಶಿವಮೊಗ್ಗ-1 ಮತ್ತು ಶಿವಮೊಗ್ಗ-2 ಹೋಬಳಿ, ಭದ್ರಾವತಿ ತಾಲೂಕಿನ ಭದ್ರಾವತಿ-2 ಮತ್ತು ಕೂಡ್ಲಿಗೆರೆ ಹೋಬಳಿ, ಶಿಕಾರಿಪುರ ತಾಲೂಕಿನ ಅಂಜನಾಪುರ, ಹೊಸೂರು ಮತ್ತು ತಾಳಗುಂದ ಹೋಬಳಿ ಹಾಗೂ ಸೊರಬ ತಾಲೂಕಿನ ಆನವಟ್ಟಿ ಹೋಬಳಿಗಳು ಮಳೆ ಆಶ್ರಿತ ರಾಗಿ ಹಾಗೂ ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಯನ್ನು ಮಳೆ ಆಶ್ರಿತ ಮೆಕ್ಕೆಜೋಳ ಬೆಳೆಯನ್ನು ನಿಗಧಿಪಡಿಸಲಾಗಿದೆ.
ಶಿವಮೊಗ್ಗ ತಾಲೂಕಿನ 40ಗ್ರಾಮ ಪಂಚಾಯಿತಿಗಳಲ್ಲಿ ನೀರಾವರಿ ಆಶ್ರಯದಲ್ಲಿ ಭತ್ತ, 13ಪಂಚಾಯಿತಿಗಳಲ್ಲಿ ಮಳೆ ಆಶ್ರಿತ ಭತ್ತ, 11ಪಂಚಾಯಿತಿಗಳಲ್ಲಿ ನೀರಾವರಿ ಆಶ್ರಿತ ಮೆಕ್ಕೆಜೋಳ ಮತ್ತು 33ಪಂಚಾಯಿತಿಗಳಲ್ಲಿ ಮಳೆಆಶ್ರಿತ ಮೆಕ್ಕೆಜೋಳ ಬೆಳೆಯನ್ನು ನಿಗಧಿಪಡಿಸಲಾಗಿದೆ.
ಭದ್ರಾವತಿ ತಾಲೂಕಿನ 40ಪಂಚಾಯಿತಿಗಳಲ್ಲಿ ನೀರಾವರಿ ಆಶ್ರಯದಲ್ಲಿ ಭತ್ತ ಮತ್ತು 18ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಳೆಆಶ್ರಿತ ಮೆಕ್ಕೆಜೋಳ, ತೀರ್ಥಹಳ್ಳಿ ತಾಲೂಕಿನ 38ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಾವರಿ ಮತ್ತು ಮಳೆ ಆಶ್ರಿತ ಭತ್ತ, ಸಾಗರ ತಾಲೂಕಿನ 36ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಾವರಿ ಆಶ್ರಿತ ಭತ್ತ, 34ಪಂಚಾಯಿತಿಗಳಲ್ಲಿ ಮಳೆ ಆಶ್ರಿತ ಭತ್ತ ಹಾಗೂ 11ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಮುಸುಕಿನ ಜೋಳ ಬೆಳೆಗಳನ್ನು ನಿಗಧಿಪಡಿಸಲಾಗಿದೆ.
ಹೊಸನಗರ ತಾಲೂಕಿನ 29ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಾವರಿ ಭತ್ತ, 30ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಳೆಆಶ್ರಿತ ಭತ್ತ ಹಾಗೂ 06ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಳೆಆಶ್ರಿತ ಮೆಕ್ಕೆಜೋಳ, ಶಿಕಾರಿಪುರ ತಾಲೂಕಿನ 46ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಾವರಿ ಭತ್ತ, 03ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಭತ್ತ, 27ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಾವರಿ ಆಶ್ರಿತ ಹಾಗೂ 45ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಳೆಆಶ್ರಿತ ಮೆಕ್ಕೆಜೋಳ ಹಾಗೂ ಸೊರಬ ತಾಲ್ಲೂಕಿನ 41 ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಾವರಿ ಭತ್ತ ಹಾಗೂ 40ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಭತ್ತ, 07ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಾವರಿ ಆಶ್ರಿತ ಮತ್ತು 41ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಮೆಕ್ಕೆಜೋಳ ಬೆಳೆಯನ್ನು ವಿಮೆಗೆ ಆಯ್ಕೆ ಮಾಡಲಾಗಿದೆ.
ಎಲ್ಲಾ ವಿಮಾ ಪರಿಹಾರ ಮೊತ್ತವು ಪ್ರತಿ ಹೆಕ್ಟೇರ್‍ಗೆ ನೀರಾವರಿ ಆಶ್ರಿತ ಭತ್ತ ರೂ.86,000/-, ಮಳೆ ಆಶ್ರಿತ ಭತ್ತ ರೂ.55,000/-, ನೀರಾವರಿ ಆಶ್ರಿತ ಮೆಕ್ಕೆಜೋಳ ರೂ.59,000/-, ಮಳೆ ಆಶ್ರಿತ ಮೆಕ್ಕೆಜೋಳ ರೂ.50,000/-, ಮಳೆ ಆಶ್ರಿತ ಜೋಳ ರೂ.34,000/- ಹಾಗೂ ಮಳೆ ಆಶ್ರಿತ ರಾಗಿ ರೂ.38,000/-ವನ್ನು ನಿಗದಿಪಡಿಸಲಾಗಿದೆ.
ಹವಾಮಾನ, ಮಳೆ ಪ್ರಮಾಣ ಹಾಗೂ ಬಿರುಗಾಳಿ ಮುಂತಾದ ಪ್ರಕೃತಿ ವಿಕೋಪವನ್ನು ಒಳಗೊಂಡ ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಬೆಳೆಸಾಲ ಪಡೆಯುವ ಹಾಗೂ ಬೆಳೆಸಾಲ ಪಡೆಯದ ರೈತರು ಘೋಷಣೆಗಳನ್ನು ನೀಡಲು ಅಂತಿಮ ದಿನಾಂಕ ನಿಗಧಿಗೊಳಿಸಲಾಗಿದೆ. ನೀರಾವರಿ ಮತ್ತು ಮಳೆ ಆಶ್ರಿತ ಭತ್ತ ಬೆಳೆದ ರೈತರು ಆಗಸ್ಟ್ 14, ನೀರಾವರಿ ಮತ್ತು ಮಳೆ ಆಶ್ರಿತ ಮೆಕ್ಕೆಜೋಳ ಬೆಳೆದ ರೈತರು ಜುಲೈ 31, ಜೋಳ ಹಾಗೂ ರಾಗಿ ಬೆಳೆದ ರೈತರು ಆಗಸ್ಟ್ 14ರೊಳಗಾಗಿ ಪ್ರತಿ ಬೆಳೆಗೂ ಪ್ರತ್ಯೇಕವಾಗಿ ನಿಗಧಿಪಡಿಸಿದ ಮೊತ್ತವನ್ನು ಸಲ್ಲಿಸಬೇಕು.
ತೋಟಗಾರಿಕೆ ವಿಮೆ ;
ಪ್ರಸಕ್ತ ಸಾಲಿನಲ್ಲಿ ಅಡಿಕೆ, ಕಾಳುಮೆಣಸು ಮತ್ತು ಮಾವು ತೋಟಗಾರಿಕೆ ಬೆಳೆಗಳಿಗೆ ವಿಮಾ ಯೋಜನೆಯನ್ನು ಎಸ್.ಬಿ.ಐ. ಜನರಲ್ ಇನ್ಶೂರೆನ್ಸ್ ಕಂಪನಿ ಇವರ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹವಾಮಾನಾಧಾರಿತ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಜಿಲ್ಲೆಯ ಎಲ್ಲಾ ರೈತರು ಜೂನ್ 30ರೊಳಗಾಗಿ ವಿಮಾ ಮೊತ್ತ ಪಾವತಿಸಿ, ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅಡಿಕೆ ಬೆಳೆ ಪ್ರತಿ ಎಕರೆಗೆ ರೂ.2560/-, ಕಾಳುಮೆಣಸು ರೂ.940/- ಹಾಗೂ ಮಾವು ಬೆಳೆಗೆ ರೂ.1600/-ಗಳ ವಿಮಾ ಮೊತ್ತ ಪಾವತಿಸಬೇಕು. ಈ ವಿಮಾ ಅವಧಿಯ ಜುಲೈ 01ರಿಂದ 2020ರ ಜೂನ್ 30ರವರೆಗೆ ಅನ್ವಯಗೊಳ್ಳಲಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಡಾ.ಯೋಗೇಶ್ ಅವರು ತಿಳಿಸಿದ್ದಾರೆ.
ರೈತರು ಹಾಗೂ ತೋಟಗಾರಿಕೆ ಬೆಳೆಗಾರರು ಇಲಾಖಾ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವಂತೆ ಹಾಗೂ ನಿಗಧಿಪಡಿಸಿದ ಅವಧಿಯೊಳಗಾಗಿ ವಿಮಾಕಂತನ್ನು ಪಾವತಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಉಪವಿಭಾಗಾಧಿಕಾರಿ ಪ್ರಕಾಶ್ ಮತ್ತು ಜಂಟಿ ಕೃಷಿ ನಿರ್ದೇಶಕ ಡಾ.ಕಿರಣ್‍ಕುಮಾರ್, ತೋಟಗಾರಿಕೆ ಉಪನಿರ್ದೇಶಕ ಡಾ.ಯೋಗೇಶ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!