ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿನ ಚುನಾವಣೆ ಮತ್ತು ಈಗ ವಿಪರೀತ ಚಳಿಯ ವಾತಾವರಣದಿಂದಾಗಿ ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣಲು ಸಾಧ್ಯವಾಗಲಿಲ್ಲ. ಚಳಿಗಾಲದಲ್ಲಿ ದಾಸ್ತಾನಿನ ಸಮಸ್ಯೆಗಳನ್ನು ಎದುರಿಸುವುದರಿಂದ ಸಾಮಾನ್ಯವಾಗಿ ಪಾನ್ ಮಸಾಲ ಕಂಪೆನಿಗಳು ಪೂರ್ಣ ಸಾಮಥ್ರ್ಯದಲ್ಲಿ ಉತ್ಪಾದನೆಯನ್ನು ಮಾಡುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಅಡಿಕೆಗೆ ಬೇಡಿಕೆ ಕುಸಿಯುವುದು ಸಾಮಾನ್ಯ. ಇದರ ಪರಿಣಾಮ ಮಲೆನಾಡು ಭಾಗದ ಕೆಂಪಡಿಕೆಯ ಮಾರುಕಟ್ಟೆಯನ್ನೂ ಬಾಧಿಸುತ್ತದೆ. ಕಳೆದ ಒಂದು ತಿಂಗಳಿಂದ ತೀವ್ರ ಕುಸಿತ ಕಂಡಿದ್ದ ಕೆಂಪಡಿಕೆ ಎರಡು ದಿನಗಳಿಂದ ಚೇತರಿಕೆಗೊಳ್ಳುತ್ತಿದೆ ಮತ್ತು ಉತ್ತರ ಭಾರತದ ವರ್ತಕರಿಂದ ಉತ್ತಮ ಬೇಡಿಕೆಗಳು ಬರುತ್ತಿವೆ.

ಕಳೆದ ಎರಡು ತಿಂಗಳಿಗೂ ಮೇಲ್ಪಟ್ಟು ಕೆಂಪಡಿಕೆ ಉತ್ತರ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ರವಾನೆಯಾಗಿರುವುದಿಲ್ಲ. ಇದರಿಂದ ಅಲ್ಲಿ ಕೆಂಪಡಿಕೆ ದಾಸ್ತಾನು ಅಗತ್ಯಕ್ಕಿಂತ ಕಡಿಮೆಯಾಗಿದೆ. ಸಹಕಾರಿ ಸಂಘಗಳ ನಿರಂತರ ಅನುಸರಣಾ ಕ್ರಮಗಳಿಂದಾಗಿ ಕನಿಷ್ಠ ಆಮದು ಬೆಲೆಯನ್ನು ಹೆಚ್ಚಿಸಿ ಆದೇಶ ಹೊರಡಿಸುವಂತೆ, ವಾಣಿಜ್ಯ ಸಚಿವಾಲಯದಿಂದ ಕೃಷಿ ಸಚಿವಾಲಯಕ್ಕೆ ಶಿಫಾರಸ್ಸನ್ನು ಕಳುಹಿಸಲಾಗಿದೆ. ಶೀಘ್ರ ಆದೇಶ ನೀಡುವುದಾಗಿ ಕೇಂದ್ರ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆಯವರು ಆಶ್ವಾಸನೆ ನೀಡಿದ್ದಾರೆ. ಕೇಂದ್ರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವಿದೇಶಿ ಅಡಿಕೆಯ ಆಮದಿಗೆ ತಡೆ ಬಿದ್ದಿದೆ. ಅದಕ್ಕಾಗಿ ಮಾಮ್‍ಕೋಸ್ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತದೆ. ಸಂಕ್ರಾಂತಿ ಹಬ್ಬದ ನಂತರ ಚಳಿ ಕಡಿಮೆ ಆಗಿ ಬೇಡಿಕೆ ಉತ್ತಮಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಅಕಾಲಿಕ ಮಳೆ ಹಾಗೂ ಹವಮಾನ ವೈಪರೀತ್ಯದಿಂದಾಗಿ ಅಡಿಕೆ ಬೆಲೆ ಕುಸಿತ ಕಂಡಿದೆ. ಸಂಕ್ರಾತಿ ಹಬ್ಬದ ನಂತರ ಮಾರುಕಟ್ಟೆ ಚೇತರಿಕೆ ಕಾಣುವ ಎಲ್ಲಾ ಲಕ್ಷಣಗಳು ಇರುವುದಾಗಿ ಅಡಿಕೆ ಮಾರುಕಟ್ಟೆ ತಜ್ಞರ ಅಭಿಪ್ರಾಯ. ರೈತರು ಗಾಳಿ ಸುದ್ಧಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ರೈತರು ಹಣದ ಅವಶ್ಯಕತೆ ಇರುವಷ್ಟೇ ಅಡಿಕೆಯನ್ನು ಸಹಕಾರ ಸಂಘಗಳಲ್ಲಿ ಮಾರಾಟ ಮಾಡುವುದರ ಮೂಲಕ ಮಾರುಕಟ್ಟೆಯಲ್ಲಿ ಆಗಬಹುದಾದ ಚೇತರಿಕೆಯ ಲಾಭದ ಸದುಪಯೋಗ ಪಡೆಯಬಹುದು.

ಮಾಮ್‍ಕೋಸ್ ನಂತಹ ಸಹಕಾರ ಸಂಘಗಳು ಅಡಿಕೆ ಮಾರುಕಟ್ಟೆಯ ಧಾರಣೆಯಲ್ಲಿ ಇಳಿಮುಖವಾಗದಂತೆ ನಿರಂತರ ಪ್ರಯತ್ನ ಮಾಡುತ್ತಿವೆ.

error: Content is protected !!