ಶಿವಮೊಗ್ಗ, ಮೇ.29 : ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಒತ್ತಡದ ಜೀವನಶೈಲಿಯಿಂದ ಜನರಲ್ಲಿ ಅನೇಕಾನೇಕ ಮಾನಸಿಕ ಸಮಸ್ಯೆಗಳು ಕಾಣಿಸುತ್ತಿರುವುದನ್ನು ನಾವು ಗಮನಿಸಿರುತ್ತೇವೆ. ಅವುಗಳಲ್ಲಿ ಖಿನ್ನತೆ, ಹೊಂದಾಣಿಕೆ ಸಮಸ್ಯೆ ಹೀಗೆ ಮುಂದುವರೆದು ಸ್ಕಿಜೋಫ್ರೇನಿಯವರೆಗೂ ಬೆಳೆದ ಉದಾಹರಣೆಗಳು ನಮ್ಮ ಸುತ್ತಮುತ್ತ ಕಾಣುತ್ತೇವೆ. ಅಂತಹ ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆತರೆ ಖಂಡಿತ ಸಾಮಾನ್ಯರಂತೆ ಜೀವಿಸುವುದರಲ್ಲಿ ಯಾವ ಅನುಮಾನವು ಇಲ್ಲ. ಆದರೆ ಭಾರತದಂತಹ ಹಿಂದುಳಿದ ರಾಷ್ಟ್ರಗಳಲ್ಲಿ ಜನ ಮಾನಸಿಕ ಸಮಸ್ಯೆಗಳನ್ನ ಪಾಪದ ಫಲ, ದೇವರ ಶಾಪ, ಭೂತ ಚೇಷ್ಠೆ ಇನ್ನು ಮುಂತಾದ ಮೂಢನಂಬಿಕೆಯ ದೃಷ್ಠಿಕೋನದಲ್ಲಿ ನೋಡಿ ರೋಗಿಗಳನ್ನ ನರಕಕ್ಕೆ ತಳ್ಳಲಾಗುತ್ತಿದೆ.
ಹೆಚ್ಚುತ್ತಿರುವ ಸ್ಕಿಜೋಫ್ರೇನಿಯದಂತಹ ಸಮಸ್ಯೆಯನ್ನು ನಿಯಂತ್ರಿಸುವ ಸಲುವಾಗಿ ವಿಶ್ವಸಂಸ್ಥೆ ಪ್ರತಿ ವರ್ಷ ಮೇ ತಿಂಗಳ 24ರಂದು ವಿಶ್ವ ಸ್ಕಿಜೋಫ್ರೇನಿಯ ದಿನಾಚರಣೆಯನ್ನ ಆಚರಣೆಯನ್ನು ಆಚರಣೆಗೆ ತಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನ ಕೈಗೊಂಡಿದೆ.
ಈ ಕಾಯಿಲೆಯು ಪ್ರೌಢಾವಸ್ಥೆ ಅಂದರೆ 15-25ರ ವಯಸ್ಸಿನವರು ಹಾಗೂ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ಜೀವನದಲ್ಲಿ ತೀವ್ರವಾದ ಸಂಕಟಗಳಿಗೆ ಸಿಲುಕಿದಾಗ ಈ ಖಾಯಿಲೆ ಬರುವ ಸಂಭವ ಹೆಚ್ಚು. ಈ ಖಾಯಿಲೆಗೆ ತುತ್ತಾದ ವ್ಯಕ್ತಿಯು ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾನೆ. ಋಣಾತ್ಮಾಕ ಆಲೋಚನೆ, ನಿರಾಸಕ್ತಿ, ಶುಭ್ರತೆ ಹಾಗೂ ಆರೋಗ್ಯದ ನಿರ್ಲಕ್ಷ್ಯ, ತನ್ನಷ್ಟಕ್ಕೆ ತಾನೆ ನಗುವುದು, ವ್ಯಕ್ತಿಯ ಮಾತು ಹಾಗೂ ನಡವಳಿಕೆಯಲ್ಲಿ ಆಕ್ರಮಣ ಪ್ರವೃತ್ತಿ, ಅತಿಯಾದ ಅನುಮಾನ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ರೋಗಿಯು ಎಲ್ಲಾ ಸಮಯದಲ್ಲೂ ಈ ಮೇಲಿನ ರೀತಿಯೆ ಇರಬೇಕೆಂದಿಲ್ಲ ಈ ಲಕ್ಷಣಗಳು ಆಗಾಗ ಕಾಣಿಸಿಕೊಳ್ಳಬಹುದು. ಇನ್ನು ತೀವ್ರವಾದಂತೆ ವ್ಯಕ್ತಿ ತೀವ್ರ ಭ್ರಮೆಗೊಳಗಾಗುತ್ತಾನೆ. ಯಾರದ್ದೋ ಮಾತು ಕೇಳಿದಂತೆ, ಏನನ್ನೋ ಸ್ಪರ್ಶಿಸಿದಂತೆ, ಏನೋ ನೋಡಿದಂತೆ, ವಾಸನೆಯನ್ನು ಗ್ರಹಿಸಿದಂತೆ, ತನ್ನನ್ನು ತಾನು ಸಾಧಕನೆಂದು ಭಾವಿಸಿ ಭ್ರಮೆಗೊಳಗಾಗುತ್ತಾನೆ.
ಕೆಲವೊಮ್ಮೆ ಸುಳ್ಳುಗಳನ್ನು ಸತ್ಯವೆಂದು ಭಾವಿಸುತ್ತಾರೆ, ತಮ್ಮನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಎಂದು ಭಾವಿಸುವುದು, ಒಮ್ಮೆಲೆ ಮಾತು ನಿಲ್ಲಿಸುವುದು, ಪ್ರಶ್ನೆಗಳಿಗೆ ಅಸಂಬದ್ಧ ಉತ್ತರ ನೀಡುವುದು, ಸರಳ ಕೆಲಸಗಳಲ್ಲೂ ಗಮನ ಹರಿಸಲು ಕಷ್ಟವಾಗುವುದು, ಒಂಟಿಯಾಗಿರುವುದು, ಮುಖ ಭಾವರಹಿತವಾಗುವುದು, ಯಾವಾಗಲೂ ಒಂದೇ ದ್ವನಿಯಲ್ಲಿ ಮಾತನಾಡುವುದು ಈ ಲಕ್ಷಣಗಳನ್ನು ಸಹ ಕಾಣಬಹುದಾಗಿದೆ.
ಈ ಕಾಯಿಲೆಗೆ ನಿಖರ ಕಾರಣವನ್ನು ಗುರುತಿಸಲು ಸಂಶೋಧಕರಿಗೂ ಇನ್ನೂ ಸಾಧ್ಯವಾಗಿಲ್ಲ. ಸಂಶೋಧಕರು ಕೆಲವು ಕಾರಣಗಳನ್ನು ಊಹಿಸಿದ್ದಾರೆ. ಮೆದುಳಿನ ರಚನೆ, ವಂಶವಾಹಿ, ಮದ್ಯ ಸೇವನೆ, ಅತಿಯಾದ ಔಷಧಿಗಳ ಸೇವನೆ, ಗರ್ಭಿಣಿಯರು ಪೌಷ್ಠಿಕ ಆಹಾರ ತೆಗೆದುಕೊಳ್ಳದಿದ್ದಲ್ಲಿ ಮಗುವಿಗೆ ಚಿತ್ತವಿಕಲತೆ ಕಾಣಿಸಿಕೊಳ್ಳಬಹುದು.
ಈ ಖಾಯಿಲೆಗೆ ನಿರಂತರ ಚಿಕಿತ್ಸೆಯನ್ನು ನೀಡುವುದರಿಂದ ರೋಗಿಯನ್ನು ಪೂರ್ಣ ಪ್ರಮಾಣ ಆರೋಗ್ಯವಂತನಾಗಿ ಹಾಗೂ ಎಲ್ಲರಂತೆ ಜೀವಿಸುವ ಹಾಗೆ ಮಾಡಬಹುದಾಗಿದ್ದು ಖಾಯಿಲೆ ವಾಸಿಯಾಗುವ ಅವಧಿ ರೋಗಿಗಳಿಂದ ರೋಗಿಗೆ ಭಿನ್ನವಾಗಿರುತ್ತದೆ. ಭಾರತದ ಜನಸಂಖ್ಯೆಯ ಒಂದು ಭಾಗ ಈ ಖಾಯಿಲೆಯಿಂದ ಬಳಲುತ್ತಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದ್ದು ಜನತೆ ಇಂತಹ ಸಮಸ್ಯೆಗಳ ಬಗ್ಗೆ ಶಿಕ್ಷಿತರಾಗಿ ಹೋರಾಡಬೇಕಾಗಿದೆ.

ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಸಮಾಜ ಹಾಗೂ ಕುಟುಂಬದ ಸಹಕಾರ ಹಾಗೂ ಪ್ರೀತಿ ಅವಶ್ಯಕವಾಗಿ ಬೇಕು, ಸೂಕ್ತ ವೈದ್ಯರಿಂದ ಚಿಕಿತ್ಸೆ, ಪೂರಕ ಪರಿಸರ, ಸಾಮಥ್ರ್ಯಕ್ಕೆ ಅನುಗುಣವಾದ ಕೆಲಸ-ಮನರಂಜನೆ, ಸರಿಯಾದ ನಿದ್ರೆ- ಆಹಾರ ಹಾಗೂ ಮಾದಕ ವಸ್ತುಗಳಿಂದ ಅಂತರ ಕಾಯ್ದುಕೊಳ್ಳುವುದು ಇಂತಹ ಸಲಹೆಯನ್ನು ಪಾಲಿಸಿದರೆ ರೋಗಿಯು ಗುಣಮುಖವಾಗುವುದರಲ್ಲಿ ಯಾವ ಅನುಮಾನವು ಇಲ್ಲ.

error: Content is protected !!