ಶಿವಮೊಗ್ಗ : ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗಕ್ಕೆ 2025 ರವರೆಗೆ ಮೂರು ವರ್ಷಗಳ ಅವಧಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್.ಬಿ.ಎ) ಮಾನ್ಯತೆ ಲಭಿಸಿದೆ.

ಸೆಪ್ಟೆಂಬರ್ 02 ರಿಂದ ಮೂರು ದಿನಗಳ ಕಾಲ ವಿಭಾಗಕ್ಕೆ ಭೇಟಿ ನೀಡಿದ್ದ ರಾಷ್ಟ್ರೀಯ ಮಾನ್ಯತಾ ಮಂಡಳಿ‌ ನೀಡಿದ್ದ ವರದಿಯ ಆಧಾರದಲ್ಲಿ ಮಂಡಳಿಯು ಮೂರು ವರ್ಷಗಳ ಅವಧಿಗೆ ಎನ್.ಬಿ‌.ಎ ಮಾನ್ಯತೆ ನೀಡಿ‌ ಸೋಮವಾರ ಸಂಜೆ ಅಧಿಕೃತವಾಗಿ ಘೋಷಿಸಿದೆ.

ಎನ್.ಬಿ.ಎ ಮಾನ್ಯತೆಯಿಂದಾಗಿ ಮತ್ತಷ್ಟು ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಲಿದ್ದು, ವಿದ್ಯಾ ಸಂಸ್ಥೆಯ ಉನ್ನತಿಕರಣಕ್ಕೆ ಸಾಧ್ಯವಾಗಲಿದೆ. ಮುಂದೆ ನ್ಯಾಕ್ ಅಟೊನೊಮಸ್ ನಂತಹ ಅನೇಕ ಮುಂದಣ ಹೆಜ್ಜೆ ನಮ್ಮ ಮುಂದಿದೆ.

  • ಡಾ.ಕೆ.ನಾಗೇಂದ್ರಪ್ರಸಾದ್, ಪ್ರಾಂಶುಪಾಲರು

ಈಗಾಗಲೇ ಕಾಲೇಜಿನ ಏಳು ಬಿ.ಇ ಎಂಜಿನಿಯರಿಂಗ್ ವಿಭಾಗಗಳು ಎನ್.ಬಿ‌.ಎ ಮಾನ್ಯತೆ ಪಡೆದಿದೆ. ಎನ್.ಬಿ‌.ಎ ಮಾನ್ಯತೆಯಿಂದಾಗಿ ಅಂತರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಕಾಲೇಜಿನ ಪ್ರತಿಯೊಂದು ಹಂತಗಳಲ್ಲಿ ಉತ್ತೇಜಿಸಲು ಸಹಕಾರಿಯಾಗಲಿದೆ. ಕಂಪನಿಗಳು ತಮ್ಮ ಸಂದರ್ಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲಿದೆ. ನಾವೀನ್ಯತೆ, ಉದ್ಯಮಶೀಲತೆ ಮತ್ತು ಸಂಶೋಧನಾ ಪ್ರಕ್ರಿಯೆಗಳಿಗೆ ಕೇಂದ್ರದ ಹಾಗೂ ರಾಜ್ಯ ಸರ್ಕಾರದ ವಿವಿಧ ಅನುದಾನಗಳನ್ನು ಪಡೆಯಲು ಅನುವು ಮಾಡಿಕೊಡಲಿದೆ. ನಿರಂತರ ಕಲಿಕೆ, ಗುಣಮಟ್ಟದ ಸುಧಾರಣೆ, ನಾವೀನ್ಯ ಯೋಚನೆಗಳ ಮೂಲಕ ಸಾರ್ವಜನಿಕವಾಗಿ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಹಕಾರಿಯಾಗಿದೆ.

ಇಂತಹ ಅಭೂತಪೂರ್ವ ಸಾಧನೆಗಾಗಿ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಡಳಿತ ಮಂಡಳಿ ಅಭಿನಂದನೆಯನ್ನು ಸಲ್ಲಿಸಿದೆ‌.

error: Content is protected !!