*ಕೆಎಫ್‍ಡಿ ನಿಯಂತ್ರಣ ಕ್ರಮ ವಹಿಸಲು ಡಿಸಿ ಸೂಚನೆ*
ಶಿವಮೊಗ್ಗ ಡಿಸೆಂಬರ್ 02 : ತಾಲ್ಲೂಕು ಮತ್ತು ಗ್ರಾ.ಪಂ ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿಗಳು ಪ್ರತಿ ವಾರ ಸಭೆ ಸೇರಿ ಕೆಎಫ್‍ಡಿ(ಕ್ಯಾಸನೂರ್ ಫಾರೆಸ್ಟ್ ಡಿಸೀಸ್) ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿ.1 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಎಫ್‍ಡಿ ನಿಯಂತ್ರಣದ ನಿಟ್ಟಿನಲ್ಲಿ ವಹಿಸಬೇಕಾದ ಮುಂಜಾಗ್ತಾ ಕ್ರಮದ ಬಗ್ಗೆ ಏರ್ಪಡಿಸಲಾಗಿದ್ದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾ.ಪಂ ಇಓ ಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಈಗಾಗಲೇ ಕೋವಿಡ್ ಸಮಯದಲ್ಲಿನ ಟಾಸ್ಕ್‍ಫೋರ್ಸ್ ಸಮಿತಿಗಳ ಮೂಲಕ ಹಾಗೂ ಗ್ರಾ.ಪಂ ಮಟ್ಟದಲ್ಲಿ ಪಿಡಿಓ, ಪಿಹೆಚ್‍ಸಿ ಗಳು ಇತರೆ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳೊಡಗೂಡಿ ಗ್ರಾಮ ಸಭೆಗಳಲ್ಲಿ ಕೆಎಫ್‍ಡಿ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರತಿ ವಾರ ಸಭೆ ನಡೆಸಿ, ವರದಿ ನೀಡಬೇಕೆಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಕಾರ್ಯಕ್ರಮಾಧಿಕಾರಿ ಕೆಎಫ್‍ಡಿ ನಿರ್ವಹಣೆ ಕುರಿತು ಈಗಿನಿಂದಲೇ ಸರ್ವೇಕ್ಷಣಾ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು. ಗ್ರಾಮವಾರು ಮ್ಯಾಪಿಂಗ್ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಈಗಿನಿಂದಲೇ ಆರಂಭಿಸಬೇಕು, ವಿಶೇಷವಾಗಿ ತೀರ್ಥಹಳ್ಳಿಯಲ್ಲಿ ಹೆಚ್ಚಾಗಿ ಕಂಡುಬರುವ ಪ್ರದೇಶದಲ್ಲಿ ಅರಿವು ಮತ್ತು ಸೂಕ್ತ ಕ್ರಮ ವಹಿಸಬೇಕೆಂದರು.
ಕ್ಯಾಸನೂರ್ ಫಾರೆಸ್ಟ್ ಡಿಸೀಸ್ ಅಥವಾ ಮಂಗನಕಾಯಿಲೆ ಸೋಂಕಿತ ಉಣ್ಣಿಹುಳು(ಣiಛಿಞ) ತಾನು ಆಶ್ರಯ ಪಡೆಯುವ ಮಂಗಗಳು, ರಾಸುಗಳಿಗೆ ಸೋಂಕನ್ನು ಹರಡುತ್ತದೆ. ಈ ಪ್ರಾಣಿಗಳಿಂದ ಮನುಷ್ಯನಿಗೆ ಸೋಂಕು ತಗುಲುತ್ತದೆ. ಈ ಸೋಂಕು ಸಾಮಾನ್ಯವಾಗಿ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸೊರಬ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತದೆ. ಅಕ್ಕಪಕ್ಕದ ತಾಲ್ಲೂಕುಗಳು ಮತ್ತು ಜಿಲ್ಲೆಗಳಲ್ಲಿ ಸಹ ಕಾಣಿಸಿಕೊಳ್ಳುತ್ತದೆ.
ಡಿಸೆಂಬರ್ ಮಾಹೆಯ 3 ಮತ್ತು 4 ನೇ ವಾರದಿಂದ ಈ ಉಣ್ಣಿಹುಳುಗಳ ವಿಕಸನ ಆರಂಭವಾಗಿ ಮಾರ್ಚ್‍ಲ್ಲಿ ಹೆಚ್ಚಾಗಿ ಏಪ್ರಿಲ್‍ಗೆ ಕಡಿಮೆ ಆಗುತ್ತದೆ. ಆದ್ದರಿಂದ ಈಗಿನಿಂದಲೇ ಆರೋಗ್ಯ ಇಲಾಖೆ, ಪಶುಪಾಲನಾ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸಂಬಂಧಿಸಿ ಇಲಾಖೆಗಳು ಸಮನ್ವಯ ಸಾಧಿಸಿ ಕೆಎಫ್‍ಡಿ ನಿರ್ವಹಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ಪಶುಪಾಲನಾ ಇಲಾಖೆಯವರು ಸಾಕುಪ್ರಾಣಿಗಳಲ್ಲಿ ಉಣ್ಣಿ ಹುಳು ನಿಯಂತ್ರಣ ಕ್ರಮಗಳಾದ ರಾಸುಗಳಿಗೆ ನಿವಾರಕ(ರೆಪೆಲೆಂಟ್)ಗಳ ಬಳಕೆ, ರಾಸುಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಲು ಸೂಚನೆ ನೀಡುವುದು, ಅರಣ್ಯ ಪ್ರದೇಶದಲ್ಲಿ ಮೇಯುವುದನ್ನು ತಡೆಯುವುದು, ಮಂಗಗಳ ಸಾವಾದಲ್ಲಿ ಮಾರ್ಗಸೂಚಿಯನ್ವಯ ಮರಣೋತ್ತರ ಪರೀಕ್ಷೆ ಮಾಡಿಸುವುದು, ಈ ಸೋಂಕಿನ ಕುರಿತು ಐಇಸಿ ಚಟುವಟಿಕೆ ಸೇರಿದಂತೆ ಉಣ್ಣಿಹುಳು ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮ ವಹಿಸಬೇಕು.
ಅರಣ್ಯ ಇಲಾಖೆಯವರು ಮಂಗನ ಸಾವಾದಲ್ಲಿ ಗುರುತಿಸಿ, ವರದಿ ನೀಡಿ,ವಿಲೇವಾರಿಗೆ ಸೂಕ್ತ ಕ್ರಮ ಜರುಗಿಸುವುದು ಸೇರಿದಂತೆ ಕೆಎಫ್‍ಡಿ ನಿರ್ವಹಣೆ ಕುರಿತು ಮಾಹಿತಿ, ಶಿಕ್ಷಣ ನೀಡುವುದು, ವಿಚಕ್ಷಣೆ, ಇತರೆ ಕ್ರಮ ವಹಿಸಬೇಕು.
ಪಂಚಾಯಿತಿ ಮಟ್ಟದಲ್ಲಿ ಕೆಎಫ್‍ಡಿ ಸೋಂಕು ನಿರ್ವಹಣೆ ಕುರಿತು ಅರಿವು ಹೆಚ್ಚಿಸಬೇಕು ಹಾಗೂ ಗ್ರಾ.ಪಂ ಪಿಡಿಓ, ಆಶಾ ಕಾರ್ಯಕರ್ತೆಯರು ಒಳಗೊಂಡು
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಕೇವಲ ಜಿಲ್ಲೆ ಮಾತ್ರವಲ್ಲ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೆಎಫ್‍ಡಿ ಸ್ಥಿತಿಗತಿ ಮತ್ತು ಇದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಹಿಸುತ್ತಿರುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದ ಅವರು ಕೆಎಫ್‍ಡಿ ನಿಯಂತ್ರಣ ಸಂಬಂಧ ಎಲ್ಲ ಅಂತರ ಇಲಾಖೆ, ಸಂಸ್ಥೆಗಳು ಸಮನ್ವಯ ಸಾಧಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಕೆಎಫ್‍ಡಿ ಅಂತರ ಜಿಲ್ಲಾ ಸಮನ್ವಯದಲ್ಲಿ ಇಲಾಖೆಗಳ ಪಾತ್ರದ ಕುರಿತು ವಿವರಿಸಿದರು.
ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ, ಸಾಗರ ಉಪವಿಭಾಗದ ಅರಣ್ಯ ಅಧಿಕಾರಿ ಯೋಗೇಶ್, ಜಿ.ಪಂ ಉಪಕಾರ್ಯದರ್ಶಿ ಜಯಲಕ್ಷ್ಮಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಶಿವಯೋಗಿ ಯಲಿ, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.