ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಯಶಸ್ವಿ ಮುನ್ನಡೆ
ಶಿವಮೊಗ್ಗ: ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮತ್ತಷ್ಟು ಯಶಸ್ಸು ಸಾಧಿಸಲು ಪ್ರೋತ್ಸಾಹ ಅತ್ಯಂತ ಅಗತ್ಯ. ನಗರದ ಆರ್ಥಿಕ ಸ್ಥಿತಿ ಬಲಪಡಿಸುವಲ್ಲಿ ಮಹಿಳಾ ಉದ್ಯಮಿಗಳ ಕೊಡುಗೆಯು ಅಪಾರವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ನಗರದ ಕಂಟ್ರಿ ಕ್ಲಬ್ ಆವರಣದಲ್ಲಿ ಗೆಳತಿ ಸಂಘದ ವತಿಯಿಂದ ಆಯೋಜಿಸಿದ್ದ ಗೆಳತಿ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸ್ವಂತ ಆಲೋಚನೆ ಹಾಗೂ ಸಾಮಾರ್ಥ್ಯದಿಂದ ಉದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಪ್ರೋತ್ಸಾಹ ಹಾಗೂ ಸ್ಫೂರ್ತಿ ಯಶಸ್ಸಿನ ಹಾದಿಯಲ್ಲಿ ನಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮಹಿಳಾ ಉದ್ಯಮಿಗಳು ಒಟ್ಟುಗೂಡಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ. ಎಲ್ಲ ಸಂಘ ಸಂಸ್ಥೆಗಳು ಮಹಿಳಾ ಉದ್ಯಮಿಗಳಿಗೆ ಸೂಕ್ತ ವೇದಿಕೆಗಳನ್ನು ಒದಗಿಸುವ ಕೆಲಸ ಮಾಡಬೇಕು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಮುಂದಿನ ದಿನಗಳಲ್ಲಿ ಆಯೋಜಿಸಲಿರುವ ಬೃಹತ್ ಮೇಳದಲ್ಲಿಯು ಗೆಳತಿ ಸಂಸ್ಥೆಯು ನಮ್ಮ ಜತೆ ಕೈಜೋಡಿಸಬೇಕು ಎಂದರು.
ಸ್ವೇಧ ಸಂಸ್ಥೆ ಅಧ್ಯಕ್ಷೆ ಲಕ್ಷ್ಮೀ ದೇವಿ ಗೋಪಿನಾಥ್ ಮಾತನಾಡಿ, ಮಹಿಳೆಯರು ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳಲು ಹಾಗೂ ಮನೋಬಲ ವೃದ್ಧಿಸಲು ಸಹಕಾರಿ ಆಗುವ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಅಭಿನಂದನೀಯ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸದಸ್ಯರು ಜತೆಗೂಡಿ ಬೃಹತ್ ಮೇಳಗಳನ್ನು ನಡೆಸುವಂತಾಗಲಿ ಎಂದು ಆಶಿಸಿದರು.
ಗೆಳತಿ ಸಂಘದ ಅಧ್ಯಕ್ಷೆ ಶಿಲ್ಪಾ ಗೋಪಿನಾಥ್ ಮಾತನಾಡಿ, ಕೆಲವೇ ಸದಸ್ಯರ ಮುಂದಾಳತ್ವದಲ್ಲಿ ಆರಭವಾದ ಗೆಳತಿ ಸಂಘವು ಪ್ರಸ್ತುತ 120ಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ಪ್ರಸ್ತಕ ಸಾಲಿನಲ್ಲಿ ಎಲ್ಲ ಸದಸ್ಯರು ಒಟ್ಟುಗೂಡಿ ಚಿಕ್ಕದಾಗಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಮೇಳ ಆಯೋಜಿಸುವ ಕಲ್ಪನೆ ಮೂಡಿತ್ತು. ಆದರೆ ಎಲ್ಲರ ಸಹಕಾರ ಹಾಗೂ ಭಾಗವಹಿಸುವಿಕೆಯಿಂದ ಮೊದಲ ಬಾರಿಗೆ ಬೃಹತ್ ಮೇಳ ಆಯೋಜಿಸಲು ಸಾಧ್ಯವಾಯಿತು ಎಂದು ಹೇಳಿದರು.
ಗೆಳತಿ ಸಂಘದ ಸಂಸ್ಥಾಪಕ ಅಧ್ಯಕ್ಷೆ ಉಷಾಧಾರಾ ಭೂಪಾಳಂ ಮಾತನಾಡಿ, ಮನರಂಜನೆ, ಸರಳ ಕ್ವಿಜ್ ಕಾರ್ಯಕ್ರಮ ಸೇರಿದಂತೆ ವೈವಿಧ್ಯ ಚಟುವಟಿಕೆಗಳನ್ನು ಆಯೋಜಿಸಲು ಗೆಳತಿ ಆರಂಭವಾಗಿತ್ತು. ಇದೀಗ ಗೆಳತಿ ಸಂಘವು ಮಹಿಳಾ ಉದ್ಯಮಿಗಳಿಗೆ ಅವಕಾಶ ಒದಗಿಸಲು ವಿಶೇಷ ಮೇಳ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದು ತಿಳಿಸಿದರು.
ಕಂಟ್ರಿ ಕ್ಲಬ್ ಸಂಸ್ಥಾಪ ಅಧ್ಯಕ್ಷ ಶಶಿಧರ್ ಭೂಪಾಳಂ ಅವರು ಗೆಳತಿ ಮೇಳ ಆಯೋಜನೆಗೆ ಶುಭಕೋರಿ ಸಂತಸ ವ್ಯಕ್ತಪಡಿಸಿದರು. ಗೆಳತಿ ಸಂಘದ ಕಾರ್ಯದರ್ಶಿ ಶಬರಿ ಕಡಿದಾಳ್, ಖಜಾಂಚಿ ಸಿಂಧು ಭರತ್ ಭೂಪಾಳಂ, ಜಿ.ವಿಜಯ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್*
ಸುಂದರ, ಆಕರ್ಷಕ ವೈವಿಧ್ಯಮಯ ಸೀರೆಗಳು, ಮಹಿಳೆಯರಿಗೆ ಇಷ್ಟವಾಗಬಲ್ಲ ವೈವಿಧ್ಯಮಯ ಡಿಸೈನ್ ಉಡುಪುಗಳು, ಅಲಂಕಾರಿಕಾ ವಸ್ತುಗಳು, ಡಿಸೈನ್ ಬಳೆಗಳು . . . ಇವೆಲ್ಲ ಕಂಡು ಬಂದಿದ್ದು ಶಿವಮೊಗ್ಗ ನಗರದ ಕಂಟ್ರಿ ಕ್ಲಬ್ನಲ್ಲಿ ಗೆಳತಿ ಸಂಘ ಆಯೋಜಿಸಿದ್ದ ಗೆಳತಿ ಮೇಳದಲ್ಲಿ.
ವಿವಿಧ ಡಿಸೈನರ್ ಸೀರೆಗಳು, ಕುರ್ತಿಸ್, ರೇಷ್ಮೆ, ಬೆಳ್ಳಿ ಆಭರಣಗಳು, ಕಾಟನ್, ಡಿಸೈನರ್ ಬ್ರೌಸ್, ಗೃಹ ಅಲಂಕಾರ ವಸ್ತುಗಳು, ವೈವಿಧ್ಯ ಆಕರ್ಷಕ ಅಲಂಕಾರಿಕ ಗಿಡಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಆಯೋಜಿಸಲಾಗಿತ್ತು.
ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಉದ್ದೇಶದಿಂದ ಒದಗಿಸುವ ಆಶಯದಿಂದ ಗೆಳತಿ ಮೇಳ ಆಯೋಜಿಸಲಾಗಿತ್ತು. ಗೆಳತಿ ಸಂಘದ ಸದಸ್ಯರು ಸೇರಿದಂತೆ ಮೈಸೂರು, ಚಿಕ್ಕಮಗಳೂರು, ಬೆಂಗಳೂರು, ಮಂಗಳೂರು, ಕೊಪ್ಪ, ತೀರ್ಥಹಳ್ಳಿ ಸೇರಿದಂತೆ ಆಗಮಿಸಿದ್ದ ಮಹಿಳಾ ಉದ್ಯಮಿಗಳು 20ಕ್ಕೂ ಹೆಚ್ಚು ಸ್ಟಾಲ್ಗಳನ್ನು ಹಾಕಿದ್ದರು.
ವಿವಿಧ ರೀತಿಯ ಆಟೋಟಗಳು ಆಯೋಜಿಸಲು ವ್ಯವಸ್ಥೆ ಮಾಡಲಾಗಿತ್ತು. ಹಸಿವು ನೀಗಿಸಲು ಆಹಾರ ಸ್ಟಾಲ್ಗಳು ಇದ್ದವು. ಚಕ್ಕಲಿ, ನಿಪ್ಪಟ್, ವಿಧವಿಧವಾದ ಚಾಟ್ಸ್, ಜ್ಯೂಸ್, ವೈನ್, ಕೇಕ್, ಪಾನಿಪೂರಿ ಐಸ್ಕ್ರೀಮ್, ಕಚೋರಿ, ಸಮೋಸ, ನಾನ್ ವೆಜ್ ಆಹಾರ ಖಾದ್ಯಗಳು ಲಭ್ಯವಿದ್ದವು.