ತೃತೀಯ ಲಿಂಗಿಗಳಿಗೆ ವೃದ್ಧಾಶ್ರಮ ತೆರೆಯಲು ಸರಕಾರ ಸ್ಪಂದಿಸಲಿ : ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಮನವಿ
ಶಿವಮೊಗ್ಗ : ತೃತೀಯ ಲಿಂಗಿಗಳಿಗೆ ಶಿಕ್ಷಣ ನೀಡುವುದು ಹಾಗೂ ವೃದ್ಧಾಪ್ಯದಲ್ಲಿ ಆಸರೆಯಾಗುವ ನಿಟ್ಟಿನಲ್ಲಿ ಆಶ್ರಯ ನಿರ್ಮಾಣ ಮಾಡಬೇಕು ಕನಸಿದ್ದು ಸರಕಾರ ಸ್ಪಂದಿಸಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಮನವಿ ಮಾಡಿದರು.
ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭಾನುವಾರ ಸಂಜೆ ಭೇಟಿ ಕೊಟ್ಟಿದ್ದ ಸಂದರ್ಭ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಈಗಾಗಲೇ ಸರಕಾರ ಮೀಸಲಾತಿಯನ್ನು ನೀಡುವ ಮೂಲಕ ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದೆ. ಇದೇ ನಿಟ್ಟಿನಲ್ಲಿ ಜಾನಪದ, ರಂಗಭೂಮಿ, ಕರಕುಶಲ ಕಲೆ ಹಾಗೂ ಸ್ವಾವಲಂಬಿ ಜೀವನ ಮಾಡುವಂತೆ ಆಸರೆಯಾಗುವಂತೆ ಬದುಕು ಕಟ್ಟಿಕೊಡಬೇಕೆಂಬ ಆಸೆ ಇದೆ. ಸರಕಾರ ಈ ನಿಟ್ಟಿನಲ್ಲಿ ಸ್ಪಂದಿಸಲಿ ಎಂದು ಆಗ್ರಹಿಸಿದರು.
ಹಳ್ಳಿಯ ನನ್ನ ಮನೆಗೆ ಬಾಗಿಲಿಗೆ ಪದ್ಮಶ್ರೀ ಬರುವಂತೆ ಮಾಡಿದ ಕೇಂದ್ರ ಸರಕಾರ, ತೃತೀಯ ಲಿಂಗಿಗಳಿಗೆ ಗೌರವನ್ನು ನೀಡಿದೆ. ಭಾರತದಲ್ಲಿ ಯಾರೂ ಕೀಳಲ್ಲ, ಮೇಲಲ್ಲ, ಯಾರೂ ದೊಡ್ಡವರಲ್ಲ, ಸಣ್ಣವರಲ್ಲ, ಎಲ್ಲರೂ ಸಮಾನರು. ಎಲ್ಲರ ಆತ್ಮದಲ್ಲಿ ಪರಮಾತ್ಮ ಇದ್ದಾನೆ. ಎಲ್ಲರನ್ನೂ ಗೌರವ ಹಾಗು ಸಮಾನತೆಯಿಂದ ನೋಡಿದರೆ ನಾವು ನಂಬಿದ ದೈವದ ಆಶೀರ್ವಾದ ಲಭ್ಯವಾಗುತ್ತದೆ. ಎಲ್ಲರೂ ದೇವರಿಲ್ಲ, ನಾವು ಶ್ರದ್ಧೆ, ನಿಷ್ಠೆ, ಸಮಯ ಪ್ರಜ್ಞೆಯಿಂದ ಮಾಡುವ ಕಾಯಕದಲ್ಲಿ ದೇವರಿದ್ದಾನೆ ಎಂದರು.
ನಾನು ಹೆಚ್ಚೇನು ಓದಲಿಲ್ಲ. ಯಾವುದೇ ಪದವಿಗೂ ಆಸೆ ಪಡಲಿಲ್ಲ, ಆದರೆ, ಗುಲ್ಬರ್ಗ ವಿಶ್ವ ವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ. ನಾನು ದೇವರನ್ನು ಎಂದೂ ಪೂಜಿಸಲಿಲ್ಲ, ಛಲದಿಂದ ಮುನ್ನಡೆದ ನನ್ನ ಕಲೆ, ಮತ್ತು ಕಾಯಕದಲ್ಲಿ ದೇವರನ್ನು ಕಂಡಿದ್ದೇನೆ. ಹಾಗಾಗಿ ಮನುಷ್ಯ ಎಂದೂ ಎದೆಗುಂದದೆ ಧೈರ್ಯದಿಂದ ಮುನ್ನಡೆಯಬೇಕು ಎಂದರು.
ಡಾ.ಧನಂಜಯ ಸರ್ಜಿ ವೃತ್ತಿಯ ಜೊತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರಿಂದ ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ದೊರೆಯುವಂತಾಗಲಿ ಎಂದು ಆಶಿಸಿದರು.
ಆರ್ಎಸ್ಎಸ್ನ ಪ್ರಮುಖರಾದ ಪಟ್ಟಾಭಿರಾಮ್ ಜೀ ಮಾತನಾಡಿ, ನಮ್ಮ ಭಾರತೀಯ ಪರಂಪರೆಯೇ ಒಂದು ವಿಶೇಷ. ಡಾ.ಮಂಜಮ್ಮ ಜೋಗತಿ ಅವರ ಸಾಧನೆ ನಿಜಕ್ಕೂ ದೇಶ ಹೆಮ್ಮೆಪಡುವಂತದ್ದು. ಅವರಿಗೆ ಜನ್ಮತಃ ಸಣ್ಣ ಸಮಸ್ಯೆ ಇದ್ದಿರಬಹುದು, ಆದರೆ ಅದ್ಯಾವುದಕ್ಕೂ ಅವರು ತಲೆಕೆಡಿಕೊಳ್ಳದೇ ಇಡಿ ದೇಶ ಬೆರಗಾಗುವಂತಹ ಸಾಧನೆ ಮಾಡಿದ್ದಾರೆ. ಇದು ಎಲ್ಲರಿಗೂ ಆದರ್ಶವಾಗಲಿ. ಭಗವಂತ ನಮಗೆ ಜನ್ಮ ನೀಡಿದ್ಧಾನೆಂದರೆ ಯಾವುದೋ ಸಾಧನೆ ಮಾಡಲಿಕ್ಕೇ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ ಮಾತನಾಡಿ, ಪದ್ಮ ಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಅವರು ತಮ್ಮೊಳಗಿನ ನೋವುಗಳನ್ನು ನುಂಗಿಕೊಳ್ಳುತ್ತಾ ಅಪರೂಪದ ಸಾಧನೆ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ, ಆದರ್ಶವಾಗಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಸೇವೆ ದೇಶಕ್ಕೆ ದೊರೆಯುವಂತಾಗಲಿದೆ ಎಂದು ಹಾರೈಸಿದರು.
ಇದೇ ಸಂದರ್ಭ ನೀವು ನಮ್ಮ ಹೆಮ್ಮೆ ನೆನಪಿನ ಕಾಣಿಕೆ ನೀಡಿ ಅವರನ್ನು ಗೌರವಿಸಲಾಯಿತು. ಆರ್ಸ್ಎಸ್ನ ಪ್ರಮುಖರಾದ ಪಟ್ಟಾಭಿರಾಮ್, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ, ನಿರ್ದೇಶಕಿ ನಮಿತಾ ಸರ್ಜಿ,ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ ಹಾಜರಿದ್ದರು.
ಶಿವಮೊಗ್ಗದ ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭಾನುವಾರ ಸಂಜೆ ಭೇಟಿ ಕೊಟ್ಟಿದ್ದ ಸಂದರ್ಭ ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಅವರನ್ನು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ ಸನ್ಮಾನಿಸಿದರು.