ವೈವಿಧ್ಯ ಸಂಸ್ಕೃತಿ ಪರಂಪರೆಯ ಭಾರತ

ಸಾಗರ: ಭಾರತ ದೇಶದ ವೈವಿಧ್ಯಮಯ ಸಂಸ್ಕೃತಿ ಪರಂಪರೆ ವಿಶೇಷತೆಗಳಿಂದ ಕೂಡಿದೆ. ಆಹಾರ, ಕೃಷಿ, ಕಲೆ, ಐತಿಹಾಸಿಕ ಶ್ರೇಷ್ಠತೆಯು ವಿಶ್ವದ ಗಮನ ಸೆಳೆದಿದೆ ಎಂದು ಅಮೇರಿಕಾ ನಿವಾಸಿ, ಉದ್ಯಮಿ ಕಮಲ್ ಗೋಯಲ್ ಹೇಳಿದರು.
ತಾಲೂಕಿನ ಆನಂದಪುರ ಸಮೀಪದ ಹೊಸಗುಂದದ ಇತಿಹಾಸ ಪ್ರಸಿದ್ಧ ಶ್ರೀ ಉಮಾಮಹೇಶ್ವರ ದೇವಾಲಯ ಮತ್ತು ಪರಿವಾರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಹೊಸಗುಂದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೊಸಗುಂದ ವಾಸ್ತುಶೈಲಿ, ಸಂಸ್ಕೃತಿ ಅಧ್ಯಯನಕ್ಕೆ ವಿಫುಲ ಅವಕಾಶಗಳಿವೆ. ಧಾರ್ಮಿಕ ಕ್ಷೇತ್ರದ ಶ್ರೇಷ್ಠ ಪರಂಪರೆ, ಸನಾತನ ಆಚರಣೆಗಳು ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಲು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಸಿ.ಎಂ.ಎನ್.ಶಾಸ್ತ್ರಿ ಮಾತನಾಡಿ, ಹೊಸಗುಂದ ಉತ್ಸವದ ಮೂಲಕ ಸ್ಥಳೀಯ ಕಲಾವಿದರಿಗೆ ವೇದಿಕೆ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ವರ್ಷ ಹೊಸಗುಂದ ಉತ್ಸವ ಯಶಸ್ವಿಯಾಗಿ ನಡೆಯುತ್ತಿದ್ದು, ನೂರು ದೀಪಗಳಿಂದ ಆರಂಭವಾದ ದೀಪೋತ್ಸವ ಇದೀಗ ಪ್ರತಿ ವರ್ಷ ಲಕ್ಷ ದೀಪೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಶೃಂಗೇರಿಯ ಜಗದ್ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಹೊಸಗುಂದದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಸ್ಥಳೀಯರು ಹಾಗೂ ಭಕ್ತಾಧಿಗಳ ಸಹಕಾರದಿಂದ ಎಲ್ಲ ಕಾರ್ಯಗಳು ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಸಂಗೀತ, ಸಾಹಿತ್ಯ, ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹಿಸಲು ಇಂತಹ ವೇದಿಕೆಗಳು ಅವಶ್ಯಕ. ಇದರಿಂದ ವೈವಿಧ್ಯಮಯ ಕಲಾ ಸಂಸ್ಕೃತಿಯ ಪರಿಚಯ ಎಲ್ಲರಿಗೂ ಆಗುತ್ತದೆ. ಸೇವಾ ಟ್ರಸ್ಟ್ ಕೂಡ ಸ್ಥಳೀಯ ಕಲಾವಿದರಿಗೆ ಪ್ರಾಮುಖ್ಯತೆ ನೀಡುವ ಕೆಲಸ ಮಾಡುತ್ತಿದೆ ಎಂದರು.
ಹೊಸಗುಂದ ಉತ್ಸವ ಪ್ರಯುಕ್ತ ವಿಶೇಷ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ಸದ್ಗುರು ಭಜನಾ ಮಂಡಳಿ ಸಾಗರ ಅವರಿಂದ ಭಜನಾ ಸೇವೆ, ನಿರ್ಮಲಾ ಸುರೇಶ್ ಸಂಗಡಿಗರಿಂದ ಶ್ರೀ ರಾಮ ನೃತ್ಯ ಸೇವೆ, ಕಲಾಸಿಂಚನ ಸಾಂಸ್ಕೃತಿಕ ವೇದಿಕೆ ಸಾಗರ ಅವರಿಂದ ಜಾನಪದ ಸಮೂಹ ಗಾಯನ ಸೇವೆ, ಪ್ರಣಮ್ಯ ಎಂ.ಜಂಬೆಕೊಪ್ಪ ಅವರಿಂದ ಭರತನಾಟ್ಯ ಸೇವೆ ಹಾಗೂ ಜಯಂತಿ ಹೆಗ್ಡೆ ಹಾಗೂ ಸಂಗಡಿಗರಿಂದ ಅಂಟಿಕೆ ಪಿಂಟಿಕೆ ಜಾನಪದ ಹಾಡು ಸೇವೆ ನಡೆಯಿತು.
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಸ್ಥಾಪಕ ಟ್ರಸ್ಟಿ ಶೋಭಾ ಎನ್.ಶಾಸ್ತ್ರಿ, ಜ್ಯೋತಿ ಕೋವಿ, ಪ್ರಗತಿಪರ ಕೃಷಿಕರು ಜಯಲಕ್ಷ್ಮೀ ಮೇದರವಳ್ಳಿ, ಲೋಕೇಶ್ ಐಗಿನಬೈಲು, ಸುರೇಶ್ ಕೆ.ವಿ, ದಿನೇಶ್, ಎನ್.ಡಿ.ಹೆಗ್ಡೆ, ಲತಾ ಹೊಸಗುಂದ, ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಬಾಕ್ಸ್
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ನವೆಂಬರ್ 22ರ ಸಂಜೆ 6 ಗಂಟೆಯಿಂದ ಶ್ರೀ ಉಮಾಮಹೇಶ್ವರನಿಗೆ ವೈಭವದ ಲಕ್ಷ ದೀಪೋತ್ಸವ ನಡೆಯಲಿದೆ. ರಾತ್ರಿ 8ಕ್ಕೆ ಅನನ್ಯ ಅಶ್ವತ್ಥ್ ಹೆಗ್ಡೆ ಇವರಿಂದ ನೃತ್ಯ ಸೇವೆ, ಮಾರಿಕಾಂಬ ಯಕ್ಷಗಾನ ಮಂಡಳಿ ಹಾರೇಕೊಪ್ಪ ಇವರಿಂದ ಕಂಸವಧೆ ಯಕ್ಷಗಾನ ಸೇವೆ ನಡೆಯಲಿದೆ. ಹೊಸಗುಂದದಲ್ಲಿ ಶ್ರೀ ಸಂಕಲ್ಪಸಿದ್ಧಿ ಉಮಾಮಹೇಶ್ವರ ದೇವಸ್ಥಾನ, ಪರಿವಾರ ದೇವಾಲಯಗಳಾದ ಶ್ರೀ ಮಹಿಷ ಮರ್ಧಿನಿ, ಶ್ರೀ ವೀರಭದ್ರ, ಶ್ರೀ ಲಕ್ಷ್ಮೀ ಗಣಪತಿ, ಶ್ರೀ ಕಂಚಿ ಕಾಳಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ದೀಪಾಲಂಕಾರ ಹಾಗೂ ದೀಪೋತ್ಸವ ಇರಲಿದೆ.

error: Content is protected !!