ಮೇ. 28 ಶಿವಮೊಗ್ಗ : ಜಿಲ್ಲೆಯಲ್ಲಿ ಪ್ರಸ್ತುತ 93ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಮುಂಗಾರು ಆರಂಭ ವಿಳಂಬವಾಗುವ ಲಕ್ಷಣ ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಅವರು ವಿವಿಧ ಇಲಾಖೆಗೆ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.
ಈಗಾಗಲೇ ಜಿಲ್ಲೆಯಲ್ಲಿ 93ಗ್ರಾಮಗಳಿಗೆ 2942 ಟ್ಯಾಂಕರ್ ಟ್ರಿಪ್ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಶಿಕಾರಿಪುರದಲ್ಲಿ 22 ಹಾಗೂ ಹೊಸನಗರ ತಾಲೂಕಿನಲ್ಲಿ ಎರಡು ಬೋರ್ವೆಲ್ಗಳು ಸೆರಿದಂತೆ ಒಟ್ಟು 24ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ಮೂಲಕ ಭದ್ರಾವತಿ ತಾಲೂಕಿನ 3ಗ್ರಾಮ, ಹೊಸನಗರದ 13, ಸಾಗರದ 55, ಶಿಕಾರಿಪುರದ 10, ಶಿವಮೊಗ್ಗದ 7 ಹಾಗೂ ಸೊರಬದ 6ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.
ನಗರಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಇದುವರೆಗೆ ತೊಂದರೆ ಉಂಟಾಗದಿದ್ದರೂ, ನಿಗಾ ವಹಿಸಬೇಕು. ಟ್ಯಾಂಕರ್ ಮೂಲಕ ನೀರು ಪೂರೈಕೆ ಸೇರಿದಂತೆ ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಗಳು: ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಶಿವಮೊಗ್ಗ ತಾಲೂಕಿನ ಬುಳ್ಳಾಪುರ ಹಾಗೂ ಇತರೆ 17 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ತ್ವರಿತಗೊಳಿಸಬೇಕು. ಇನ್ನುಳಿದಂತೆ ಭದ್ರಾವತಿ ತಾಲೂಕಿನ ಯಡೇಹಳ್ಳಿ ಮತ್ತು ಇತರ 8ಗ್ರಾಮಗಳ ಯೋಜನೆ, ಸಾಗರ ತಾಲೂಕಿನ ಸಾಗರ ಹಾಗೂ ಇತರ 28 ಗ್ರಾಮಗಳ ಯೋಜನೆ ಮತ್ತು ಸಾಗರ ತಾಲೂಕಿನ ಗೌತಮಪುರ ಹಾಗೂ ಇತರ 127 ಜನವಸತಿಗಳ ಯೋಜನೆ ಅನುಷ್ಟಾನಕ್ಕೆ ಎದುರಾಗಿರುವ ಸ್ಥಳದ ತೊಡಕನ್ನು ಆದಷ್ಟು ಬೇಗನೆ ಬಗೆಹರಿಸುವಂತೆ ಅವರು ಸೂಚನೆ ನೀಡಿದರು.
ಕೃಷಿ ಚಟುವಟಿಕೆ: ಹಿಂಗಾರು ಮಳೆ ಜಿಲ್ಲೆಯಲ್ಲಿ ಸಂಪೂರ್ಣ ಕೈಕೊಟ್ಟಿರುವುದರಿಂದ ಈ ಬಾರಿ ಯಾವುದೇ ಮಳೆಯಾಧಾರಿತ ಹಿಂಗಾರು ಬಿತ್ತನೆ ಆಗಿರುವುದಿಲ್ಲ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮೇವು ಲಭ್ಯವಿದೆ. ಮೇವಿನ ಕಿಟ್ಗೆ ಯಾವುದೇ ಬೇಡಿಕೆ ಬಂದಿರುವುದಿಲ್ಲ. ಮುಂಗಾರು ಬಿತ್ತನೆಗೆ 35ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ಅಗತ್ಯವಿದ್ದು, ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ 36ಸಾವಿರ ಮೆ.ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ. ಮಳೆ ಪ್ರಾರಂಭವಾದ ತಕ್ಷಣ ಬಿತ್ತನೆ ಬೀಜ ವಿತರಣೆ ಕಾರ್ಯ ಆರಂಭವಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್ ಮಾಹಿತಿ ನೀಡಿದರು.
ಕೆಲವು ಪಡಿತರ ಅಂಗಡಿಗಳಲ್ಲಿ ಬಯೋ ಮೆಟ್ರಿಕ್ಗಾಗಿ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಯಾವುದೇ ರೀತಿಯ ಶುಲ್ಕ ವಿಧಿಸದಂತೆ ಎಚ್ಚರಿಕೆ ನೀಡಲಾಗಿದೆ. ಇದೇ ರೀತಿ ಜಿಲ್ಲೆಯ 900ಗ್ರಾಮಗಳಲ್ಲಿ ರುದ್ರಭೂಮಿಗೆ ಸ್ಥಳದ ಸಮಸ್ಯೆ ಇದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಿವರಾಮೇಗೌಡ, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ ಎಚ್.ಟಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.