ಶಿವಮೊಗ್ಗ, ಮಾರ್ಚ್ 26 : ನೈಸರ್ಗಿಕ ಕೃಷಿಯು ಕಡಿಮೆ-ವೆಚ್ಚದ ಕೃಷಿ ಯಿಂದ ಸುಸ್ಥಿರತೆಯೆಡೆಗೆ ರೈತರನ್ನು ಉತ್ತೇಜಿಸುವುದರೊಂದಿಗೆ, ರಾಸಾಯನಿಕ ಗೊಬ್ಬರಗಳು ಮತ್ತು ಕೈಗಾರಿಕಾ ಕೀಟನಾಶಕಗಳ ಬಳಕೆಯನ್ನು ತೊಡೆದುಹಾಕುತ್ತದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕಾ ವಿಶ್ವ ವಿದ್ಯಾಲಯದ ವಿಸ್ತರಣಾಧಿಕಾರಿ ಡಾ.ಕೆ.ಟಿ ಗುರುಮೂರ್ತಿ ತಿಳಿಸಿದ್ದರು.
ಅವರು ಇಂದು ಶಿವಮೊಗ್ಗದ ನವುಲೆ ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಭಾಗಗಳಲ್ಲಿ ಕೃಷಿಕರ ಏಳಿಗೆಗಾಗಿ ಶ್ರಮಿಸುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕೃಷಿಸಖಿಯರಿಗೆ ಆಯೋಜಿಸಲಾಗಿದ್ದ ನೈಸರ್ಗಿಕ ಕೃಷಿಯ ಬಗ್ಗೆ 5 ದಿನಗಳ ಸಾಮಥ್ರ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೈಸರ್ಗಿಕ ಬೇಸಾಯವು ಮಣ್ಣಿನ ಫಲವತ್ತತೆ ಮತ್ತು ಬಲವನ್ನು ಸುಧಾರಿಸುವ ಮೂಲಕ ಹವಾಮಾನ ವೈಪರೀತ್ಯದ ವಿರುದ್ಧ ಬೆಳೆಗಳನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ವಿ.ಕೆ. ಯ ಮುಖ್ಯಸ್ಥರಾದ ಡಾ. ಗಿರಿಜೇಶ್, ಜಿ.ಕೆ. ನೈಸರ್ಗಿಕ ಕೃಷಿಯ ಪ್ರಾಮುಖ್ಯತೆ, ಅವಶ್ಯಕತೆ ಹಾಗೂ ರೈತರಿಗೆ ಅದರಿಂದಾಗುವ ಉಪಯೋಗಗಳು, ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ಕಲಿಸುವಂತಹ ವಿಷಯಗಳ ಬಗ್ಗೆ ತಿಳಿಸಿದರು.
ಡಾ. ಗಣೇಶ್ ನೈಸರ್ಗಿಕ ಕೃಷಿಯಲ್ಲಿ ಮುಖ್ಯವಾಗಿ ಬೇವು, ಗೋಮೂತ್ರ, ಹುದುಗಿಸಿದ ಮೊಸರು, ನೀರು, ದಶಪರ್ಣಿ ಇತ್ಯಾದಿಗಳ ಸಾರ, ಬೇವು-ಗೋಮೂತ್ರದ ಸಾರ, ಮಿಶ್ರ ಎಲೆಗಳ ಸಾರ ಮತ್ತು ಮೆಣಸಿನಕಾಯಿ ಬೆಳ್ಳುಳ್ಳಿ ಸಾರ ಇತ್ಯಾದಿಗಳನ್ನು ಸ್ವಾಭಾವಿಕವಾಗಿ ಕೀಟಗಳ ನಿರ್ವಹಣೆಯಲ್ಲಿ ಕಡಿಮೆ ಖರ್ಚಿನಲ್ಲಿ ರೈತರೇ ತಯಾರಿಸಬಹುದಾಗಿದೆ ಎಂದು ತಿಳಿಸಿದರು.