ಶಿವಮೊಗ್ಗ: ಒಂದು ದೇಶದ ಆರ್ಥಿಕ ಶಕ್ತಿ ಸದೃಢ ಆಗಿರಬೇಕಾದರೆ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗೊಳ್ಳಬೇಕು. ಪ್ರವಾಸೋದ್ಯಮ ಸ್ಥಳಗಳಿಗೆ ಸರ್ಕಾರ ಪೂರಕವಾದ ಅಗತ್ಯವಾದ ವ್ಯವಸ್ಥೆಗಳನ್ನು ಕಲ್ಪಿಸಲು ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಿ.ಎಂ.ಶಂಕರಪ್ಪ ಹೇಳಿದರು.

ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ವತಿಯಿಂದ ಅಂಡಮಾನ್ ಪ್ರವಾಸ ಚಾರಣಕ್ಕೆ ಹೊರಟಿರುವ 50 ಜನರ ತಂಡವನ್ನು ಬಿಳ್ಕೋಡುಗೆ ನೀಡಿ ಮಾತನಾಡಿದರು.

ಈಗಾಗಲೇ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ಪ್ರವಾಸವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ವ್ಯವಸ್ಥೆಯೊಂದಿಗೆ ಚಾರಣದ ಜತೆ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಪ್ರವಾಸದಿಂದ ನಮ್ಮಲ್ಲಿ ಹೊಸ ಚೈತನ್ಯದ ಜತೆಯಲ್ಲಿ ವಿಶೇಷ ಸ್ಥಳಗಳ ಪರಿಚಯ ಆಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಅಭಿವೃದ್ಧಿ ವೇದಿಕೆಯಿಂದ ಆಯೋಜಿಸುತ್ತಿರುವ ಪ್ರವಾಸವು ಸುರಕ್ಷತೆ ಹಾಗೂ ಸೂಕ್ತ ವ್ಯವಸ್ಥೆಗಳನ್ನು ಒಳಗೊಂಡಿದ್ದು, ಪ್ರವಾಸ ಚಾರಣ ನಡೆಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಪ್ರವಾಸೋದ್ಯಮಕ್ಕೆ ಪ್ರಸ್ತಕ ಸಾಲಿನ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂ. ಹಣ ಮೀಸಲಿಟ್ಟು, ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಿರುವುದು ಸ್ವಾಗತಾರ್ಹ. ಪ್ರವಾಸಿಗರು ಪ್ಲಾಸ್ಟಿಕ್ ಬಳಕೆ ಮಾಡಬಾರದು. ಪ್ರವಾಸಿ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರವಾಸಿ ಸ್ಥಳಗಳ ಸಂರಕ್ಷಣೆ ಮಾಡಿದಾಗ ವಿದೇಶಿ ಪ್ರವಾಸಿಗರು ನಮ್ಮ ಸ್ಥಳಗಳಿಗೆ ಹೆಚ್ಚಾಗಿ ಬರುತ್ತಾರೆ. ಸ್ಥಳೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಈಗಾಗಲೇ ಗೋವಾ, ಅಂಡಮಾನ್ ಸಂಸದರ ಭೇಟಿ ಮಾಡಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿ ವೇದಿಕೆಯ ಅ.ನಾ.ವಿಜಯೇಂದ್ರ ಮಾತನಾಡಿ, ಚಾರಣ ಪ್ರವಾಸ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು ಎಂದು ಅಭಿಪ್ರಾಯಪಟ್ಟರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಡಾ. ನಾಗಭೂಷಣ, ಅ.ಮ.ಪ್ರಕಾಶ್, ಆರತಿ ಹಾಗೂ ಚಾರಣಿಗರು ಉಪಸ್ಥಿತರಿದ್ದರು.

error: Content is protected !!