” ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರಗಳು ವಿದ್ಯಾರ್ಥಿಗಳಿಗೆ ಸಮುದಾಯ ಸೇವೆಯ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಸರ್ವತೋಮುಖ ಬೆಳವಣಿಗೆಗಳಿಗೆ ಕಾರಣವಾಗುತ್ತವೆ” ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಕೆ.ಸಿ.ವೀರಣ್ಣನವರು ಅಭಿಪ್ರಾಯಪಟ್ಟರು. ಅಯನೂರು ಸಮೀಪದ ಕಾಚಿಕೊಪ್ಪ ಗ್ರಾಮದಲ್ಲಿ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದಿಂದ ಆಯೋಜಿಸಿದ್ದ ಒಂದು ವಾರದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು “ವಿಕಸಿತ ಭಾರತಕ್ಕಾಗಿ ಗ್ರಾಮ ವಿಕಾಸ” ಎಂಬ ಧ್ಯೇಯ ವಾಕ್ಯದೊಂದಿಗೆ ಜರುಗಿದ ಶಿಬಿರದ ಆಶಯ ಹಾಗೂ ಕಾರ್ಯಕ್ರಮಗಳನ್ನು ಶ್ಲಾಘಿಸಿ ಶಿಬಿರವು ಪ್ರಧಾನ ಮಂತ್ರಿಗಳ ವಿಕಸಿತ ಭಾರತ @2047 ಆಶಯಕ್ಕೆ ಅತ್ಯಂತ ಪೂರಕವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಡೀನ್ ಪ್ರೊ.ಗಣೇಶ ಉಡುಪರವರು ಶಿಬಿರಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಿದ ಕಾಚಿಕೊಪ್ಪ ಗ್ರಾಮಸ್ಥರನ್ನು ಶ್ಲಾಘಿಸಿ ಹೈನುಗಾರಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ಸಲುವಾಗಿ ಕರುಗಳ ಸಾಕಣೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲು ಕರೆ ನೀಡಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರಮೇಶ್ ಹಾಗೂ ಅಲೆಂಬಿಕ್ ಫಾರ್ಮಾ ಕಂಪನಿಯ ಮುಖ್ಯ ವ್ಯವಸ್ಥಾಪಕರಾದ ಡಾ.ಸಂಜಯ್ ಟೋಕೆಯವರು ಆಹ್ವಾನಿತ ಅತಿಥಿಗಳಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀ ಶಿವಕುಮಾರ್, ಮುಖಂಡರಾದ ನಾಗರಾಜಪ್ಪ, ಗುರುಬಸಪ್ಪ ಮಹೇಶ್ವರಪ್ಪ, ವಿರೂಪಾಕ್ಷಪ್ಪ ಮತ್ತು ಮಂಜಪ್ಪ ಉಪಸ್ಥಿತರಿದ್ದರು. ಒಂದು ವಾರ ಜರುಗಿದ ವಿಶೇಷ ಶಿಬಿರದಲ್ಲಿ ಸರ್ಕಾರಿ ಆಯುರ್ವೇದ ಬೋಧನಾ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ, ಶಂಕರ ಕಣ್ಣಾಸ್ಪತ್ರೆಯಿಂದ ಕಣ್ಣು ತಪಾಸಣೆ, ಮೆಗ್ಗಾನ್ ಬೋಧನಾ ಆಸ್ಪತ್ರೆ ಮತ್ತು ರಕ್ತನಿಧಿಯಿಂದ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಭಾರತೀಯ ದಂತವೈದ್ಯಕೀಯ ಸಂಘದಿಂದ ಉಚಿತ ದಂತ ತಪಾಸಣೆ, ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಬರಡುರಾಸು ತಪಾಸಣಾ ಶಿಬಿರ, ಉಣ್ಣೆಮುಕ್ತ ಗ್ರಾಮ ಅಭಿಯಾನ, ಪಶುವೈದ್ಯಕೀಯದಲ್ಲಿ ಆಯುರ್ವೇದ ಚಿಕಿತ್ಸೆ, ಹಾಲಿನ ಡಿಗ್ರೀ ಉತ್ತಮಪಡಿಸುವ ಪ್ರಾತ್ಯಕ್ಷತೆ, ಹಾಲಿನ ಉತ್ಪನ್ನಗಳ ತಯಾರಿಕೆ, ಕೆಚ್ಚಲುಬಾವು ಪತ್ತೆ ಹಚ್ಚುವ ಹಾಗೂ ಕಲಬೆರಕೆ ಕಂಡು ಹಿಡಿಯುವ ಪ್ರಾತ್ಯಕ್ಷತೆ, ಅಣಬೆ ಬೇಸಾಯ ಪ್ರಾತ್ಯಕ್ಷತೆ ಮುಂತಾದ ಉಪಯುಕ್ತ ಕಾರ್ಯಕ್ರಮಗಳನ್ನು ಗ್ರಾಮಸ್ಥರ ಉಪಯೋಗಕ್ಕಾಗಿ ಹಮ್ಮಿಕೊಳ್ಳಲಾಗಿತ್ತು. ಪ್ರತಿನಿತ್ಯ ಕೃಷಿ, ಪಶುಸಂಗೋಪನೆ, ವ್ಯಕ್ತಿತ್ವ ವಿಕಸನ, ಮಹಿಳಾ ಸಬಲೀಕರಣ, ಸೈಬರ್ ಕ್ರೈಮ್ ಮುಂತಾದ ವಿಷಯಗಳ ಕುರಿತು ಉಪನ್ಯಾಸ ಏರ್ಪಡಿಸಲಾಯಿತು. ಪ್ರತಿ ಮುಂಜಾನೆ ಶಿವಗಂಗಾ ಯೋಗ ಕೇಂದ್ರದ ರಾಷ್ಟ್ರಪ್ರಶಸ್ತಿ ವಿಜೇತ ಯೋಗ ಶಿಕ್ಷಕರಾದ ಡಾ.ಸಿ.ವಿ.ರುದ್ರಾರಾಧ್ಯ ಮತ್ತು ತಂಡದವರಿಂದ ಯೋಗಾಭ್ಯಾಸ ಶಿಬಿರವನ್ನೂ ನಡೆಸಲಾಯಿತು. ಪಶುವೈದ್ಯಕೀಯ ಮಹಾವಿದ್ಯಾಲಯದ 80 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ವಿಶೇಷ ಶಿಬಿರವನ್ನು ಶಿಬಿರಾಧಿಕಾರಿಗಳಾದ ಡಾ.ಹರೀಶ್ ಎಂ, ಡಾ.ರವಿಕುಮಾರ್ ಪಿ ಹಾಗೂ ಸಜಶಿಬಿರಾಧಿಕಾರಿಗಳಾದ ಡಾ.ವೆಂಕಟೇಶ್, ಡಾ.ಪರಮೇಶ್ ಮತ್ತು ಕ್ರೀಡಾಧಿಕಾರಿ ನಾಗರಾಜ್ ಇವರು ಸಂಯೋಜಿಸಿದರು.