ಶಿವಮೊಗ್ಗ, : ಸಣ್ಣ ಶಾಲೆ, ದೊಡ್ಡ ಶಾಲೆ ಎಂಬುದಿರುವುದಿಲ್ಲ. ದೊಡ್ಡ ಮತ್ತು ಮಾದರಿ ಶಾಲೆಯಾಗಿಸುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಕೇವಲ ಶಿಕ್ಷಣದಲ್ಲಿ ಏಕಾಗ್ರತೆ ವಹಿಸಿ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಇಂದು ನಗರದ ಹರಿಗೆಯ 75 ವರ್ಷ ತುಂಬಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಊಟದ ತಟ್ಟೆ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿದ್ದಾಗ ಮಕ್ಕಳ ಗಮನ ಕೇವಲ ಓದಿನ ಮೇಲೆ ಇರಬೇಕು. ಶಿಕ್ಷಣ ಒಂದು ಶಕ್ತಿ. ಶಿಕ್ಷಣದಿಂದ ಮಾತ್ರ ಸರ್ವತೋಮುಖ ಅಭಿವೃದ್ದಿ ಸಾಧ್ಯ. ಬಹಳಷ್ಟು ಪೋಷಕರು ಕಷ್ಟುಪಟ್ಟು ಮಕ್ಕಳನ್ನು ಓದಿಸುತ್ತಾರೆ. ಮಕ್ಕಳೂ ಕೂಡ ತಂದೆ-ತಾಯಿ ಮತ್ತು ಶಿಕ್ಷಕರಿಗೆ ಗೌರವ ನೀಡಿ ಕಷ್ಟಪಟ್ಟು ಓದಿ ಮುಂದೆ ಬರಬೇಕು. ಕೋಟಿ ಕೊಟ್ಟರೂ ವಿದ್ಯೆಗೆ ಸರಿಸಾಟಿ ಇಲ್ಲ. ಆದ ಕಾರಣ ಶೇ.100 ರಷ್ಟು ಏಕಾಗ್ರತೆ ವಿದ್ಯಾಭ್ಯಾಸದಲ್ಲಿ ಇರಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಎಲ್ಲ ವಿದ್ಯಾರ್ಥಿಗಳು ಕನಿಷ್ಟ ಸ್ನಾತಕೋತ್ತರ ಪದವಿ ಪಡೆಯಬೇಕು. ಸರ್ಕಾರದಿಂದ ಎಲ್ಕೆಜಿಯಿಂದ ಹಿಡಿದು ಪದವಿಗಳು ಮುಗಿಯುವವರೆಗೆ ವಿದ್ಯಾರ್ಥಿವೇತನ ಸೇರಿದಂತೆ ಅನೇಕ ಸೌಲಭ್ಯಗಳು ದೊರೆಯುತ್ತವೆ. ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು, ಶೈಕ್ಷಣಿಕ ಸಾಧನೆಯೊಂದಿಗೆ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು.
ಕೆಎಸ್ಸಿಡಬ್ಲ್ಯುಸಿಯು ಜಿಲ್ಲಾ ಕಾರ್ಯದರ್ಶಿ ಸುಂದರ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಹರಿಗೆಯ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿ 75 ವರ್ಷದ ತುಂಬಿದೆ. 1ಪ್ರಸ್ತುತ ಇಲ್ಲಿ 45 ವಿದ್ಯಾರ್ಥಿಗಳು ಓದುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಕಾರ್ಮಿಕರ ಮಕ್ಕಳಾಗಿದ್ದಾರೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಒಳ್ಳೊಳ್ಳೆ ಹುದ್ದೆಯಲ್ಲಿದ್ದಾರೆ. ಇಂತಹ ಸರ್ಕಾರಿ ಶಾಲೆಗೆ ನಮ್ಮ ಸಂಘದ ವತಿಯಿಂದ ಒಂದು ಕಿರು ಸೇವೆ ಸಲ್ಲಿಸಬೇಕೆಂದು ಉದ್ದೇಶಿಸಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದಾಗ ಅವರು ಈ ಕಾರ್ಯವನ್ನು ಉತ್ತೇಜಿಸಿ, ಇಲ್ಲಿಗೆ ಇಂದು ಆಗಮಿಸಿ ಎಲ್ಲರಲ್ಲಿ ಸ್ಪೂರ್ತಿ ತುಂಬಿ ಮಾದರಿಯಾಗಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳು ಬಹಳ ಧೈರ್ಯವಂತರು. ಅವರಲ್ಲಿ ಉತ್ತಮ ಆತ್ಮವಿಶ್ವಾಸ ಇರುತ್ತದೆ. ಕಾರ್ಮಿಕರ ಜೀವನಕ್ಕೆ ದಾರಿದೀಪವಾದ ಸರ್.ಎಂ.ವಿಶ್ವೇಶ್ವರಯ್ಯನವರು ಕೂಡ ಅತಿ ಕಷ್ಟದಲ್ಲಿ ಶಾಲೆ ಕಲಿತು ಮುಂದೆ ಬಂದವರು. ಅಂತಹವರನ್ನು ಆದರ್ಶವಾಗಿಟ್ಟುಕೊಂಡು, ಶಿಕ್ಷಣದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಆಶಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಸಂಘಗಳ ನಡುವೆ ಎಂದಿಗೂ ಅವಿನಾಭಾವ ಸಂಬಂಧ ಇದೆ. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಇತರೆ ಯೋಜನೆಗಳಿದ್ದು ಇದರ ಸದುಪಯೋಗ ಪಡೆಯಬೇಕು. ಮಕ್ಕಳು ಮೊಬೈಲ್ಗಳಿಗೆ ದಾಸರಾಗದೇ ಓದಿನ ಕಡೆ ಹೆಚ್ಚು ಗಮನ ಹರಿಸಿ ಉತ್ತಮ ಸಾಧನೆ ತೋರಬೇಕೆಂದರು.
ಕೆಎಸ್ಸಿಡಬ್ಲ್ಯುಸಿಯು ಜಿಲ್ಲಾ ಗೌರವ ಸಲಹೆಗಾರ ಎಂ.ಭೂಪಾಲ್, ಕೆಎಸ್ಸಿಡಬ್ಲ್ಯುಸಿಯು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಜೆ.ಸಂಜಯ್ಕುಮಾರ್ ಮೇಸ್ತ್ರಿ, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ಮೇಸ್ತ್ರಿ, ಜಿಲ್ಲಾ ಕಾರ್ಯದರ್ಶಿ ಆರ್ಮುಗಂ, ಎಸ್ಡಿಎಂಸಿ ಅಧ್ಯಕ್ಷ ಶ್ರೀಧರ್, ಹರ್ಷಿತಾ ಫೌಂಡೇಷನ್ ಅಧ್ಯಕ್ಷೆ ಜ್ಯೋತಿ, ಶಾಲಾ ಮುಖ್ಯೋಪಾಧ್ಯಾಯಿನಿ ಲತಾ, ಇತರೆ ಸಹ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
7ನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. 7ನೇ ತರಗತಿ ವಿದ್ಯಾರ್ಥಿ ಸೃಜನ್ ಅನಿಸಿಕೆ ಹಂಚಿಕೊಂಡರು. ಶಿಕ್ಷಕಿ ಹೆಚ್.ಎಸ್.ಸುನೀತಾ ನಿರೂಪಿಸಿದರು. ಶಿಕ್ಷಕಿ ಉಮಾದೇವಿ ಸ್ವಾಗತಿಸಿದರು.