ಶಿವಮೊಗ್ಗ, ಜನವರಿ 29 : : ಮುಂದಿನ ದಿನಗಳಲ್ಲಿ ಆಗಬಹುದಾದ ರೈಲು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ತಾಲೂಕಿನ ಕುಂಸಿ ರೈಲ್ವೇ ನಿಲ್ದಾಣವನ್ನು 2.60ಕೋಟಿ ರೂ.ಗಳ ವೆಚ್ಚದ ಹಾಗೂ ಸಾಗರ ತಾಲೂಕಿನ ಅರಸಾಳು ರೈಲ್ವೇ ನಿಲ್ದಾಣವನ್ನು 1.30ಕೋಟಿ ರೂ.ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಇಂದು ಚಾಲನೆ ನೀಡಿದರು.
ಅವರು ಇಂದು ಕುಂಸಿ ಮತ್ತು ಅರಸಾಳು ರೈಲ್ವೇ ನಿಲ್ದಾಣಗಳ ಆವರಣದಲ್ಲಿ ಏರ್ಪಡಿಸಿದ್ದ ನಿಲ್ದಾಣ ಕಾಮಗಾರಿಗಳ ಸುಧಾರಣೆ, ಮೇಲ್ಸೇತುವೆ ನಿರ್ಮಾಣ, ನಿರೀಕ್ಷಣಾ ಕೊಠಡಿ, ನೀರು, ವಿದ್ಯುತ್, ಶೌಚಾಲಯ ನಿರ್ಮಾಣ, ಪ್ಲಾಟ್‍ಫಾರ್ಮ್ ವಿಸ್ತೀರ್ಣ, ಪ್ಲಾಟ್‍ಫಾರ್ಮ್ ಶೆಲ್ಟರ್ ಸ್ಥಳಾವಕಾಶ ಸೇರಿದಂತೆ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮಲೆನಾಡಿನ ಜನರ ಬಹುದಿನಗಳ ಆಶಯದಂತೆ ಹಾಗೂ ಅವರ ಅಗತ್ಯತೆಗಳನ್ನು ಮನಗಂಡು ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕುಂಸಿಯಲ್ಲಿ ಇಂಟರ್‍ಸಿಟಿ ರೈಲು ನಿಲುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಇನ್ನೊಂದು ವಾರದಲ್ಲಿ ಆದೇಶ ಬರುವ ನಿರೀಕ್ಷೆ ಇದೆ ಎಂದವರು ನುಡಿದರು.
ಅಂತೆಯೇ ಬಾಳೆಕೊಪ್ಪ-ಮರಸ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಭಾಗದ ಜನರ ಆಶೋತ್ತರಗಳು ಹಾಗೂ ರೈಲ್ವೇ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಫೆಬ್ರವರಿ 03ರಿಂದ ಬೆಂಗಳೂರು – ಶಿವಮೊಗ್ಗ ನಡುವೆ ವಾರದ ನಾಲ್ಕು ದಿನಗಳ ಕಾಲ ಜನಶತಾಬ್ಧಿ ಎಕ್ಸ್‍ಪ್ರೆಸ್ ರೈಲು ಸಂಚರಿಸಲಿದೆ. ವಾರದ ಉಳಿದ ದಿನಗಳಲ್ಲಿ ಅದೇ ರೈಲನ್ನು ಮೈಸೂರಿಗೆ ಸಂಚರಿಸಲು ಕ್ರಮ ಕೈಗೊಳ್ಳುವಂತೆ ನೈಋತ್ಯ ರೈಲ್ವೇ ವಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದವರು ನುಡಿದರು.
ಹೊಸಹಳ್ಳಿ-ತಮ್ಮಡಿಹಳ್ಳಿ-ಕುಂಸಿ-ಅರಸಾಳು ಸೇರಿದಂತೆ ಸುತ್ತಮುತ್ತಲ ಸುಮಾರು 50ಕ್ಕೂ ಹೆಚ್ಚಿನ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಈ ಪ್ರದೇಶದ ವ್ಯಾಪ್ತಿಗೊಳಪಡುವ ಅಚ್ಚುಕಟ್ಟು ಪ್ರದೇಶಗಳ ಜಮೀನುಗಳಿಗೆ ನೀರು ಹಾಯಿಸುವ ಸಲುವಾಗಿ ರೂ.300/-ಕೋಟಿ ರೂ.ಗಳ ವೆಚ್ಚದಲ್ಲಿ ಕುಮುಧ್ವತಿ ಅಥವಾ ತುಂಗಾನದಿಯಿಂದ ನೀರನ್ನು ಹರಿಸಲು ಏತನೀರಾವರಿ ಯೋಜನೆಯನ್ನು ಕೈಗೊಳ್ಳಲು ಯತ್ನಿಸಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ – ಶೃಂಗೇರಿ – ಕೊಪ್ಪ ಮಾರ್ಗವಾಗಿ ಮಂಗಳೂರು ಸಂಚಾರಕ್ಕೆ ಅನುಕೂಲವಾಗುವಂತೆ ಸರ್ವೇ ಕಾರ್ಯಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಅಧೀಕೃತವಾಗಿ ಕೇಂದ್ರವು ಶೀಘ್ರದಲ್ಲಿ ಮಂಡಿಸಲಿರುವ ಬಜೆಟ್‍ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದರು.
ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿರುವ ಅರಸಾಳು ರೈಲ್ವೇ ನಿಲ್ದಾಣದಿಂದಾಗಿ ಈ ಭಾಗದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಅಲ್ಲದೇ ಮಂಗಳೂರು ಸಂಪರ್ಕ ಸಾಧಿಸಿದಲ್ಲಿ ಈ ಭಾಗದಲ್ಲಿ ಆರ್ಥಿಕ ವ್ಯವಹಾರ ವೃದ್ಧಿಯಾಗುವ ನಿರೀಕ್ಷೆಯಿದ್ದು, ಜನಸಾಮಾನ್ಯರ ಬದುಕಿಗೆ ಆಸರೆಯಾಗಲಿದೆ ಎಂದರು.
ಜಿಲ್ಲೆಯ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗಾಗಿ ಸ್ವದೇಶಿ ದರ್ಶನ್ ಯೋಜನೆಯಡಿಯಲ್ಲಿ 42ಕೋಟಿ ರೂ.ಗಳ ವೆಚ್ಚದಲ್ಲಿ ಮಹತ್ವದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಕೆ.ಬಿ.ಅಶೋಕನಾಯ್ಕ್, ಮಾಜಿ ಶಾಸಕ ಸ್ವಾಮಿರಾವ್, ನೈಋತ್ಯ ರೈಲ್ವೇ ಜನರಲ್ ಮ್ಯಾನೇಜರ್ ಅಜಯ್ ಕುಮಾರ್‍ಸಿಂಗ್, ಅಪರ್ಣಗಾರ್ಗಿ, ಜಿ.ಪಂ.ಸದಸ್ಯ ತಮ್ಮಡಿಹಳ್ಳಿ ನಾಗರಾಜ್ ಸೇರಿದಂತೆ ಕುಂಸಿ ಮತ್ತು ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ರೈಲ್ವೇ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!