ಶಿವಮೊಗ್ಗ, ಜುಲೈ 17 : ಅರೋಗ್ಯ ಇಲಾಖೆಯು ಆಗಸ್ಟ್ 08ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನಾಗಿ ಆಚರಿಸುತ್ತಿದ್ದು, ಜಿಲ್ಲೆಯ ಒಟ್ಟು 4,94ಲಕ್ಷ ಮಕ್ಕಳಿಗೆ ಜಂತುಹುಳು ನಿಯಂತ್ರಣ ಮಾತ್ರೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ ಅವರು ಹೇಳಿದರು.
ಅವರು ಇಂದು ಆಗಸ್ಟ್ 08ರಂದು ಆಚರಿಸಲಾಗುತ್ತಿರುವ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಾದ್ಯಂತ 1-19ವರ್ಷದೊಳಗಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜಿನ ಮಕ್ಕಳಿಗೂ ಜಂತುಹುಳು ನಿವಾರಣಾ ಮಾತ್ರೆಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಈ ಆಂದೋಲನದಲ್ಲಿ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನರಹಿತ ಶಾಲೆಗಳ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮಾತ್ರೆ ವಿತರಿಸಲು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದವರು ನುಡಿದರು.
ಜಂತುಹುಳುಗಳ ಸೋಂಕಿನಿಂದಾಗಿ ಮಕ್ಕಳು ರಕ್ತಹೀನತೆ, ಪೌಷ್ಠಿಕಾಂಶದ ಕೊರತೆ, ಹಸಿವೆಯಾಗದಿರುವುದು, ನಿಶಕ್ತಿ ಮತ್ತು ಆತಂಕ, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆಯಾಗುವುದು ಇಂತಹ ಹಲವು ರೀತಿಯ ಅಪಾಯಕಾರಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇದರಿಂದ ಹೊರಬರಲು ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಜಂತುಹುಳು ಮಾತ್ರೆ ನೀಡುವುದು ಸೂಕ್ತವಾದುದ್ದಾಗಿದೆ ಎಂದವರು ನುಡಿದರು.
1-5ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ, 6-19ವರ್ಷದೊಳಗಿನ ಮಕ್ಕಳಿಗೆ ಆಯಾ ಶಾಲೆಗಳಲ್ಲಿ, ದಾಖಲಾಗದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರೆಗಳನ್ನು ವಿತರಿಸಲಾಗುವುದು. ಆಲ್ಬೆಂಡಾಝೋಲ್ ಎಂಬುದು ಸುರಕ್ಷಿತವಾಗಿರುವ ಔಷಧವಾಗಿದೆ ಎಂದು ತಿಳಿಸಿರುವ ಅವರು, ಮಕ್ಕಳಲ್ಲಿ ಏಕಾಗ್ರತೆ, ಕಲಿಕಾ ಸಾಮಥ್ರ್ಯ ಹಾಗೂ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಹಾಜರಾತಿ ಸುಧಾರಿಸಲು ಪರೋಕ್ಷವಾಗಿ ನೆರವಾಗಲಿದೆ ಎಂದವರು ತಿಳಿಸಿದರು.
ಮಕ್ಕಳು ಜಂತುಹುಳುಗಳ ಬಾದೆಯಿಂದ ಹೊರಗಿರಲು ಬರಿಗಾಲಿನಲ್ಲಿ ಹೊರಗಡೆ ಆಟವಾಡುವುದು, ಕೈಗಳನ್ನು ತೊಳೆಯದೇ ಆಹಾರ ಸೇವಿಸುವುದು, ಬಯಲು ಶೌಚ ಮಾಡುವುದು ಸೂಕ್ತವಲ್ಲ ಎಂದ ಅವರು, ಎಲ್ಲರೂ ತಮ್ಮ ಮನೆಯ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಗಮನಹರಿಸಬೇಕೆಂದವರು ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ಮಕ್ಕಳಿಗೆ ವಯೋಮಿತಿಯನ್ನಾಧರಿಸಿ ನಿಗದಿಪಡಿಸಿದ ಪ್ರಮಾಣದಲ್ಲಿ ಮಾತ್ರೆಗಳನ್ನು ವಿತರಿಸಲಾಗುತ್ತದೆ. 1-5ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಹಾಗೂ 2-3ವರ್ಷದೊಳಗಿನ ಮಕ್ಕಳಿಗೆ ಒಂದು ಮಾತ್ರೆಯನ್ನು ಎರಡು ಚಮಚಗಳ ನಡುವೆ ಇಟ್ಟು ಜಜ್ಜಿ, ನಂತರ ಮಾತ್ರೆಯನ್ನು ಸೇವಿಸಲು ಸೂಚಿಸಲಾಗುವುದು. 6-19ವರ್ಷದೊಳಗಿನ ಮಕ್ಕಳಿಗೆ ಪೂರ್ಣಮಾತ್ರೆಯನ್ನು ಅಗಿದು ಸೇವಿಸಲು ಸೂಚಿಸಲಾಗುವುದು ಎಂದವರು ನುಡಿದರು.
ಪೋಷಕರು ಮತ್ತು ಸಾರ್ವಜನಿಕರು ತಮ್ಮ ಮಕ್ಕಳಿಗೆ ತಪ್ಪದೇ ಮಾತ್ರೆಯನ್ನು ಕೊಟ್ಟು ಅವರ ಅಮೂಲ್ಯ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವಂತೆ ಹಾಗೂ ಶಾಲಾ-ಕಾಲೇಜುಗಳ ಮುಖ್ಯಸ್ಥರು ಮಾತ್ರೆ ವಿತರಣೆಗೆ ಅಗತ್ಯ ಕ್ರಮ ವಹಿಸುವಂತೆ ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಪ್ರತಿ ಶಾಲೆಗಳಲ್ಲಿ ಇಬ್ಬರು ಉಸ್ತುವಾರಿ ಶಿಕ್ಷಕರನ್ನು ಹಾಗೂ ತಾಲೂಕು ಮಟ್ಟದಲ್ಲಿ ತಜ್ಞ ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಇರಲಿದ್ದಾರೆ. ನಿಗಧಿಪಡಿಸಿದ ದಿನದಂದು ಗುಳಿಗೆ ಸ್ವೀಕರಿಸದ ಮಕ್ಕಳಿಗೆ ಆಗಸ್ಟ್ 16ರಂದು ವಿತರಿಸಲಾಗುವುದು ಎಂದು ತಿಳಿಸಿರುವ ಅವರು, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಸದುದ್ದೇಶದ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಡಾ.ನಾಗರಾಜ್, ಡಾ.ಶಮಾ ಸೇರಿದಂತೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.