*ಅರ್ಹ ಮಕ್ಕಳೆಲ್ಲ್ಲ ಕೋವಿಡ್ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಕರೆ*
ಶಿವಮೊಗ್ಗ ಮಾರ್ಚ್ 16: ಯಶಸ್ವೀ ಕೋವಿಡ್ ಲಸಿಕಾರಣದಿಂದಾಗಿ ಮೂರನೇ ಅಲೆಯನ್ನು ನಾವು ಸುಲಭವಾಗಿ ಎದುರಿಸಲು ಸಾಧ್ಯವಾಯಿತು. ಆದ್ದರಿಂದ ಎಲ್ಲ 12 ರಿಂದ 14 ವರ್ಷದೊಳಗಿನ ಮಕ್ಕಳು ಕಾರ್ಬಿವ್ಯಾಕ್ಸ್ ಲಸಿಕೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಇವರ ಸಹಯೋಗದಲ್ಲಿ ಇಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ ಇಲ್ಲಿ ಏರ್ಪಡಿಸಲಾಗಿದ್ದ
12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಕಾರ್ಬಿವ್ಯಾಕ್ಸ್ ಲಸಿಕಾ ಅಭಿಯಾನ ಮತ್ತು 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುನ್ನೆಚ್ಚರಿಕಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 12 ರಿಂದ 14 ವರ್ಷದೊಳಗಿನ 64,387 ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ 40 ಸಾವಿರ ಕಾರ್ಬಿವ್ಯಾಕ್ಸ್ ಲಸಿಕೆ ಇದ್ದು ಲಸಿಕೆ ನೀಡಲು ಮೈಕ್ರೊಪ್ಲಾನ್ ತಯಾರಿಸಲಾಗಿದೆ ಎಂದರು.
ಕೋವಿಡ್‍ನ ಮೊದಲ ಎರಡು ಅಲೆಗಳು ಭೀಕರವಾಗಿದ್ದವು. ಆಗ ಲಸಿಕೆ ಇಲ್ಲದ ಕಾರಣ ಅನೇಕ ಅವಘಡಗಳು ಸಂಭವಿಸಿದವು. ಆದರೆ ಮೂರನೇ ಅಲೆಯಲ್ಲಿ ಅಂತಹ ಅಪಾಯಗಳು ಕಾಣಲಿಲ್ಲ. ಇದಕ್ಕೆ ಕಾರಣ ಕೋವಿಡ್ ಲಸಿಕೆ. ಪ್ರಧಾನಮಂತ್ರಿಯವರು 2021 ರ ಜ.16 ರಂದು ಲಸಿಕಾಕರಣಕ್ಕೆ ಚಾಲನೆ ನೀಡಿದರು. ಶಿವಮೊಗ್ಗದಲ್ಲಿ 09 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತೆಯರಿಗೆ ಲಸಿಕೆ ಪ್ರಾರಂಭಿಸಲಾಯಿತು.
ನಂತರ ಮುಂಚೂಣಿ ಕಾರ್ಯಕರ್ತರಿಗೆ, ಆನಂತರ 60 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರೀಕರಿಗೆ ಲಸಿಕೆ ನೀಡಲು ಪ್ರಾರಂಭಿಸಲಾಯಿತು. 2021 ರ ಏಪ್ರಿಲ್ 1 ರಿಂದ ಎಲ್ಲ 45 ವರ್ಷ ಮೇಲ್ಪಟ್ಟ ನಾಗರೀಕರಿಗೆ ಲಸಿಕೆ ನೀಡಲಾರಂಭಿಸಲಾಯಿತು. 2021 ರ ಜೂನ್ 27 ರಿಂದ ಎಲ್ಲ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಲಸಿಕೆ ಆರಂಭಿಸಲಾಯಿತು. 2022 ರ ಜ.03 ರಿಂದ 15 ರಿಂದ 17 ವರ್ಷದ ವಿದ್ಯಾರ್ಥಿಗಳಿಗೆ ಹಾಗೂ ಇಂದಿನಿಂದ 12 ರಿಂದ 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕಾರ್ಬಿವ್ಯಾಕ್ಸ್ ಲಸಿಕಾ ಅಭಿಯಾನ ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರಿಗೆ ಮುನ್ನೆಚ್ಚರಿಕಾ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಅರ್ಹರೆಲ್ಲರೂ ಈ ಲಸಿಕೆಯನ್ನು ಪಡೆಯಬೇಕೆಂದು ಕರೆ ನೀಡಿದರು.
ಕೆಎಸ್‍ಎಸ್‍ಐಡಿಸಿ ಉಪಾಧ್ಯಕ್ಷ ಎಸ್.ದತ್ತಾತ್ರಿ ಮಾತನಾಡಿ, ಕೋವಿಡ್ ಮೂರನೇ ಅಲೆ ಅಷ್ಟು ಸಮಸ್ಯೆಯಾಗದಿರುವುದಕ್ಕೆ ಮುಖ್ಯ ಕಾರಣ ಲಸಿಕೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಯಶಸ್ವಿಯಾಗಿ ಲಸಿಕಾಕರಣ ಕಾರ್ಯಕ್ರಮ ಆಗುತ್ತಿದೆ. ನಮ್ಮ ದೇಶದಲ್ಲಿ ವ್ಯವಸ್ಥಿತವಾಗಿ ಲಸಿಕಾಕರಣ ಕಾರ್ಯಕ್ರಮ ನಡೆಯುತ್ತಿರುವುದರಿಂದ ಮೂರನೇ ಅಲೆಯಲ್ಲಿ ಅಂತಹ ಸಂಕಷ್ಟ ಬಂದಿಲ್ಲ. ಎಲ್ಲ ಅರ್ಹ ಮಕ್ಕಳು ಲಸಿಕೆ ಪಡೆಯಬೇಕೆಂದ ಅವರು ಜಿಲ್ಲೆಯಲ್ಲಿ ಯಶಸ್ವಿಯಾಗಿ ಲಸಿಕಾಕರಣ ನಡೆಸಿದ ಡಿಹೆಚ್‍ಓ, ಆರ್‍ಸಿಹೆಚ್‍ಓ ಸೇರಿದಂತೆ ಎಲ್ಲ ಅಧಿಕಾರಿಗಳು/ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ ಲಸಿಕಾಕರಣದ ಕುರಿತು ಮಾಹಿತಿ ನೀಡಿ, ಆರೋಗ್ಯ ಕಾರ್ಯಕರ್ತರಿಗೆ ಮೊದಲನೇ ಡೋಸ್ ಶೇ.96 ಮತ್ತು ಎರಡನೇ ಡೋಸ್ ಶೇ.98 ಮತ್ತು ಮುನ್ನೆಚ್ಚರಿಕಾ ಡೋಸ್ ಶೇ.39 ಆಗಿದೆ. ಮುಂಚೂಣಿ ಕಾರ್ಯಕರ್ತೆಯರಿಗೆ 1ನೇ ಡೋಸ್ ಶೇ.90, ಎರಡನೇ ಡೋಸ್ ಶೇ.99 ಮತ್ತು ಮುನ್ನೆಚ್ಚರಿಕೆ ಡೋಸ್ ಶೇ.18 ಆಗಿದೆ.
18 ರಿಂದ 44 ವಯಸ್ಸಿನ ನಾಗರೀಕರಿಗೆ ಮೊದಲನೇ ಡೋಸ್ ಶೇ.95 ಮತ್ತು ಎರಡನೇ ಡೋಸ್ ಶೇ.88 ಆಗಿದೆ. 45 ರಿಂದ 59 ವರ್ಷದೊಳಗಿನ ನಾಗರೀಕರಿಗೆ 1ನೇ ಡೋಸ್ ಶೇ100 ಮತ್ತು 2ನೇ ಡೋಸ್ ಶೇ. 95 ಆಗಿದೆ. 15 ರಿಂದ 17 ವರ್ಷದ ವಿದ್ಯಾರ್ಥಿಗಳಿಗೆ 1ನೇ ಡೋಸ್ ಶೇ.84 ಮತ್ತು 2ನೇ ಡೋಸ್ ಶೇ.84 ಆಗಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 1ನೇ ಡೋಸ್ ಶೇ.101 ಮತ್ತು 2ನೇ ಡೋಸ್ ಶೇ.96 ಹಾಗೂ ಮುನ್ನೆಚ್ಚರಿಕಾ ಡೋಸ್ ಶೇ.9 ಆಗಿದ್ದು, ಜಿಲ್ಲೆಯ ಒಟ್ಟು 400 ಕೇಂದ್ರಗಳಲ್ಲಿ ಲಸಿಕಾರಣ ನಡೆಯುತ್ತಿದೆ ಎಂದರು.
ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಬಿಇಓ ನಾಗರಾಜ್ ಹಾಗೂ ಇತರೆ ವೈದ್ಯರು ಹಾಜರಿದ್ದರು. ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಸ್ವಾಗತಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ವಂದಿಸಿದರು.