ಪಶುವೈದ್ಯಕೀಯ ವೃತ್ತಿ ಒಂದು ಉತ್ತಮ ವೃತ್ತಿ. ಈ ವೃತ್ತಿ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸಿ ಇ ಟಿ ಪರೀಕ್ಷೆಯಲ್ಲಿ 1000 ಕ್ಕಿಂತ ಕಡಿಮೆ ಸ್ಥಾನವಿರಬೇಕು. ಅದಲ್ಲದೇ ರಾಜ್ಯ ಸರ್ಕಾರವು ವಿವಿಧ ವರ್ಗಗಳಿಗೆ ನೀಡುವ ಮೀಸಲಾತಿಯು ಈ ಶಿಕ್ಷಣದ ಪ್ರವೇಶಕ್ಕೆ ಅನ್ವಯವಾಗುತ್ತದೆ.
ವೃತ್ತಿ ಶಿಕ್ಷಣವಾಗಿಯೂ ಪಶುವೈದ್ಯಕೀಯ ಸ್ನಾತಕ ಪದವಿ ಕಡಿಮೆ ಖರ್ಚಿನಲ್ಲಿ ಮುಗಿಸಬಹುದಾದ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿರುವ ಸ್ನಾತಕ ಶಿಕ್ಷಣ. ಪಶುವೈದ್ಯನಾದರೆ ಸಮಾಜದ ಉನ್ನತಿಯಲ್ಲಿ ನೇರವಾಗಿ ಭಾಗಿಯಾಗಬಹುದು. ಉತ್ತಮ ಗುಣಮಟ್ಟದ ಪಶು (ಜಾನುವಾರು, ಕುರಿ, ಆಡು, ನಾಯಿ, ಬೆಕ್ಕು, ಕುದುರೆ, ವನ್ಯ ಜೀವಿಗಳು ಇನ್ನೂ ಅನೇಕ) ಚಿಕಿತ್ಸೆಯನ್ನು ನೀಡುವುದರ ಜೊತೆ ದೇಶದ ಆರ್ಥಿಕ ಅಭಿವೃಧ್ಧಿಗೆ ಪೂರಕವಾದ ಮಾಂಸ, ಮೊಟ್ಟೆ, ಉಣ್ಣೆ ಮತ್ತು ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬಹುದು. ಪಶುವೈದ್ಯರು ಮನುಷ್ಯರಿಗೆ ಮಾರಕವಾದ ಹಲವಾರು ಕಾಯಿಲೆಗಳಾದ ಬ್ರುಸೆಲ್ಲಾ, ಹುಚ್ಚು ನಾಯಿ ರೋಗ, ಕ್ಷಯ, ಹಕ್ಕಿ ಜ್ವರ ಮತ್ತು ಹೆಚ್1 ಎನ್1 ಇತ್ಯಾದಿ ರೋಗಗಳನ್ನು ತಡೆಗಟ್ಟಿ ಪರೋಕ್ಷವಾಗಿ ಮಾನವ ಆರೋಗ್ಯ ರಕ್ಷಣೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬಲ್ಲರು.
ಪಶುವೈದ್ಯಕೀಯ ಸ್ನಾತಕ ಶಿಕ್ಷಣ ಪಡೆದವರಿಗೆ ಈ ಕೆಳಗಿನ ಕ್ಷೇತ್ರಗಳಲ್ಲಿ ಉದ್ಯೋಗದ ಪಡೆಯುವ ಅವಕಾಶ ಇದೆ. ಸ್ನಾತಕೋತ್ತರ ಪದವಿ ಪಡೆದರೆ ಅವಕಾಶಗಳು ಜಾಸ್ತಿ.
- ಕರ್ನಾಟಕ ಸರ್ಕಾರದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಗಳ ಹುದ್ದೆಗಳು.
- ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿಯಲ್ಲಿ ಪಶುವೈದ್ಯಾಧಿಕಾರಿಗಳ ಹುದ್ದೆಗಳು.
- ಸಂಶೋಧನಾ ರಂಗದಲ್ಲಿ ವಿಜ್ಞಾನಿಗಳಾಗಲು ಅವಕಾಶಗಳು.
- ಖಾಸಗೀ ಪಶುವೈದ್ಯಕೀಯ ವೃತ್ತಿ ಮತ್ತು ಮುದ್ದು ಪ್ರಾಣಿಗಳ ಚಿಕಿತ್ಸೆ.
- ಕುಕ್ಕುಟ ಉಧ್ಯಮಗಳಲ್ಲಿ ಉತ್ತಮ ಹುದ್ದೆ ಹುದ್ದೆಗಳು.
- ಕೋಳಿ, ಜಾನುವಾರು, ಕುರಿ ಮತ್ತು ಆಡು ಸಾಕಣಾ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗಾವಕಾಶ.
- ಔಷಧ ತಯಾರಿಕಾ ಕಂಪನಿಗಳಲ್ಲಿ ಅವಕಾಶ.
- ಬ್ಯಾಂಕ್‍ಗಳಲ್ಲಿ ಕ್ಷೇತ್ರಾಧಿಕಾರಿಗಳಾಗಿ ಉದ್ಯೋಗಾವಕಾಶ ಹುದ್ದೆಗಳು.
- ಜೀವ ವಿಮೆ ಕಂಪನಿಗಳಲ್ಲಿ ಉದ್ಯೋಗಾವಕಾಶ ಹುದ್ದೆಗಳು.
- ಕುದುರೆ ಸಾಕಣಾ ಕ್ಲಬ್‍ಗಳಲ್ಲಿ ಕುದುರೆಗಳ ಆರೋಗ್ಯ ರಕ್ಷಣೆಯನ್ನು ನೋಡಿಕೊಳ್ಳುವ ಅವಕಾಶ.
- ವನ್ಯ ಜೀವಿ ಧಾಮ ಮತ್ತು ಮೃಗಾಲಯದಲ್ಲಿ ಪಶುವೈದ್ಯರ ಹುದ್ದೆಗಳು.
- ಸೇನೆಯಲ್ಲಿ ಪಶುವೈದ್ಯರ ಹುದ್ದೆಯ ಅವಕಾಶಗಳು.
- ಪ್ರಾಣಿ ದಯಾ ಕೇಂದ್ರಗಳು ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸೇವೆಯ ಅವಕಾಶಗಳು.
- ರಾಜ್ಯ ಮತ್ತು ಕೇಂದ್ರ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷಾ ಸೇವೆಯಲ್ಲಿ ಉತ್ತಮ ಅವಕಾಶಗಳು.
- ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ವಿವಿಧ ಹುದ್ದೆಗಳಲ್ಲಿ ಅವಕಾಶಗಳು.
- ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಅವಕಾಶಗಳು.
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳು.
- ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಉದ್ಯೋಗ ಗಿಟ್ಟಿಸಲು ಸುಲಭ ರಹದಾರಿಗಳು.
- ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಸಂಸ್ಥೆಗಳಲ್ಲಿ ಸೇವೆಯ ಅವಕಾಶಗಳು.
- ಇತರ ರಾಜ್ಯಗಳಲ್ಲೂ ಸಹ ಪಶುವೈದ್ಯರಾಗಿ ಸೇವಾವಕಾಶಗಳು.
- ಉತ್ತಮ ನೈಪುಣ್ಯವಿರುವುದರಿಂದ ಸ್ವಯಂ ಉದ್ಯೋಗದಲ್ಲಿ ತೊಡಗಬಹುದು.
ಇಷ್ಟೆಲ್ಲ ಅವಕಾಶ ಸಿಗುವ ಇನ್ನಾವುದೂ ಸ್ನಾತಕ ಶಿಕ್ಷಣ ಇರಲಿಕ್ಕಿಲ್ಲ. ಗ್ರಾಮೀಣ ಭಾಗಗಳಲ್ಲಿ ಉತ್ತಮ ಸೇವೆ ನೀಡಿದಲ್ಲಿ ರೈತರಿಂದ ಬಹಳಷ್ಟು ಪ್ರಶಂಸೆ, ಜನಪ್ರಿಯತೆ ಸಿಗುತ್ತದೆ. ಹಲವು ಪಶುವೈದ್ಯರು ತಮ್ಮ ವೃತ್ತಿಯ ಜೊತೆ ಬರವಣಿಗೆ, ಕತೆ, ಕವನ ಸಂಗೀತ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಹಲವು ಪಶು ವೈದ್ಯರು ವಿದೇಶ ಸೇರಿ ಅಲ್ಲಿಯೂ ಸಹ ಖಾಸಗಿ ವೃತ್ತಿಯಲ್ಲಿ ಸೇರಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ. ಬಹಳಷ್ಟು ಜನರು ಅಮೇರಿಕಾದ ಮತ್ತು ಪ್ರಪಂಚದ ವಿವಿಧ ಉತ್ತಮ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಉತ್ತಮ ಹುದ್ದೆಯಲ್ಲಿದ್ದಾರೆ. ಇಂತಹವರ ಉದ್ದ ಪಟ್ಟಿಯನ್ನೇ ನೀಡಬಹುದು. ಇದು ಅವರವರ ಪರಿಶ್ರಮದ ಮೇಲೆ ಅವಲಂಭಿಸಿದೆ.
ನಮ್ಮ ರಾಜ್ಯದ ಪಶುವೈದ್ಯರ ಉತ್ತಮ ಸೇವೆ ಮದ್ಯ ಪ್ರಾಚ್ಯ ದೇಶಗಳಲ್ಲಿ ಅವರಿಗೆ ಉತ್ತಮ ಉದ್ಯೋಗಾವಕಾಶ ಸೃಷ್ಟಿಸಿದೆ. ಪಶುವೈದ್ಯರ ಅವಿರತ ಶ್ರಮ ಮತ್ತು ಸೇವೆಯಿಂದಾಗಿ ಈವತ್ತು ನಮ್ಮ ದೇಶ ಪ್ರಪಂಚದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಸಧ್ಯ ಭಾರತದಲ್ಲಿ ಸುಮಾರು 45,000 ಪಶುವೈದ್ಯರು ಮತ್ತು ಕರ್ನಾಟಕದಲ್ಲಿ 4000 ಪಶುವೈದ್ಯರಿದ್ದಾರೆ. ಇಷ್ಟು ಸಣ್ಣ ಸಂಖ್ಯೆಯಲ್ಲೇ ಭಾರತವನ್ನು ಹಾಲು ಮತ್ತು ಪ್ರಾಣಿಜನ್ಯ ಉತ್ಪನ್ನಗಳಲ್ಲಿ ಪ್ರಥಮ ಸ್ಥಾನಕ್ಕೆ ತರುವುದು ಪಶುವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ತೋರಿಸುತ್ತದೆ.
ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ, ಈಗಾಗಲೇ ತಿಳಿಸಿದಂತೆ ಸದ್ಯ ಹಲವಾರು ಪಶುವೈದ್ಯರ ಅವಶ್ಯಕತೆ ಇದೆ. ಸಾಮಾನ್ಯವಾಗಿ ಪ್ರತಿ ವರ್ಷ 200-250 ಜನ ಪಶುವೈದ್ಯರು ಪದವಿ ಪಡೆದು ಬರುತ್ತಾರೆ ಮತ್ತು ಪ್ರತಿ ವರ್ಷ 60-80 ಪಶುವೈದ್ಯರು ಸೇವೆಯಿಂದ ನಿವೃತ್ತರಾಗುತ್ತಾರೆ.
ಶಿಕ್ಷಣ ಪಡೆಯುವುದು ಹೇಗೆ?.
ಇದು ಎಲ್ಲರನ್ನು ಕಾಡುವ ಒಂದು ಪ್ರಶ್ನೆ. ಇದಕ್ಕೆ ಉತ್ತರ ಇಲ್ಲಿದೆ. ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯ, ಬೀದರ ಇದು ಪಶುವೈದ್ಯಕೀಯ ಶಿಕ್ಷಣವನ್ನು ನೀಡುವ ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಶಿವಮೊಗ್ಗ, ಹಾಸನ, ಬೀದರ, ಗದಗ ಮತ್ತು ಗದಗ ಈ 5 ಮಹಾವಿದ್ಯಾಲಯಗಳು ಈ ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳಾಗಿದ್ದು ಸಧ್ಯ ಯಾವುದೇ ಖಾಸಗಿ ಪಶುವೈದ್ಯಕೀಯ ಮಹಾವಿದ್ಯಾಲಯಗಳಿಲ್ಲ. ಎಲ್ಲಾ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ವಸತಿನಿಲಯಗಳು, ಗ್ರಂಥಾಲಯ, ಅಂತರ್ಜಾಲ ಸೇವೆ, ಇತ್ಯಾದಿ ಮೂಲಭೂತ ಸೌಲಭ್ಯಗಳಿವೆÉ.
ಬಿ ವಿ ಎಸ್ಸಿ ಮತ್ತು ಎ ಹೆಚ್ ಇದು ಸುಮಾರು 5 ವರೆ ವರ್ಷ ಅವಧಿಯದಾಗಿರುತ್ತದೆ. ಪ್ರವೇಶ ಸಿಇಟಿ ಮೂಲಕ ನಡೆಯುತ್ತಿದ್ದು, ಇದರ ಫಲಿತಾಂಶ ಬಂದಿದ್ದು, ಅವರವರ ರ್ಯಾಂಕ್ ಪ್ರಕಾರ ವಿವಿಧ ಮಹಾವಿದ್ಯಾಲಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೃಷಿಕರು ಹಾಗೂ ಕೃಷಿಕರ ಮಕ್ಕಳಿಗಾಗಿ ವರ್ಗದವರಿಗೆ ವಿಶೇಷ ಮೀಸಲಾತಿ ಇರುತ್ತಿದ್ದು,ಈಗಾಗಲೇ ಈ ಕುರಿತು ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ್ದು, ಇದಕ್ಕಾಗಿ ಪ್ರತ್ಯೇಕ ರ್ಯಾಂಕ್ ಪಟ್ಟಿ ತಯಾರಾಗಿದ್ದು, ಇದರ ಪ್ರಾಕಾರ ಸೀಟುಗಳ ವಿತರಣೆ ಸಿಇಟಿ ಮೂಲಕ ಆಗುತ್ತದೆ.