ಶಿವಮೊಗ್ಗ ಸೆಪ್ಟೆಂಬರ್ 22: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಕೃಷಿ ವಿದ್ಯಾರ್ಥಿಗಳು ರೈತರ ಏಳ್ಗೆ ಮತ್ತು ಹಿತಕ್ಕಾಗಿ ತಮ್ಮ ಅಧ್ಯಯನ ನಡೆಸಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ನುಡಿದರು.
ಇಂದು ಇರುವಕ್ಕಿ ಮುಖ್ಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 10 ನೇ ಸಂಸ್ಥಾಪನಾ ದಿನಾಚರಣೆ(ದಶಮಾನೋತ್ಸವ)ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಅಭಿವೃದ್ದಿ ಮತ್ತು ರೈತರ ಕಲ್ಯಾಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡನ್ನು ಸಾಧಿಸುವ ಉದ್ದೇಶ ಹೊಂದಿರುವ ವಿಶ್ವವಿದ್ಯಾಲಯ, ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಲ್ಲಿನ ಸುತ್ತಮುತ್ತಲಿನ ರೈತರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ರೈತರು ಸೇರಿದಂತೆ ಸುಮಾರು 700 ಎಕರೆ ಜಮೀನನ್ನು ವಿವಿ ಗೆ ಬಿಟ್ಟುಕೊಟ್ಟು ಸಹಕರಿಸಿದ ಎಲ್ಲರಿಗೆ ಧನ್ಯವಾದಗಳು.
ವಿವಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಆಗಿದೆ. ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಮೂಲಭೂತ ಸೌಕರ್ಯ ಈಗಾಗಲೇ ಇದ್ದು ಬೆಳೆ ಅಭಿವೃದ್ದಿ, ಜೈವಿಕ ತಂತ್ರಜ್ಞಾನ, ತೋಟಗಾರಿಕೆ, ಅರಣ್ಯೀಕರಣ ಸೇರಿದಂತೆ ವಿವಿಧ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳ ಸಂಶೋಧನಾ ಕೇಂದ್ರ ಆಗಿದೆ. ಶೈಕ್ಷಣಿಕ ಬ್ಲಾಕ್, ವಿದ್ಯಾರ್ಥಿನಿಲಯ ಹೀಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ಅಭಿವೃದ್ದಿಯಾಗುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿ ಬೆಳೆಯಲಿದೆ. ಈ ದಿಕ್ಕಿನಲ್ಲಿ ನಮ್ಮ ಮುಖ್ಯಮಂತ್ರಿಗಳು ಸಹ ನಮ್ಮ ಕೈಹಿಡಿಯಲಿದ್ದಾರೆ.
ವಿಶ್ವವಿದ್ಯಾಲಯದ ಮುಂದೆಯೇ ಇರುವ ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಮಂಜೂರಾತಿ ದೊರೆತಿದ್ದು ರೂ.450 ಕೋಟಿ ಮೊದಲನೇ ಹಂತದ ಅನುದಾನ ಶೀಘ್ರದಲ್ಲಿ ಬಿಡುಗಡೆಯಾಗಿ ರಾಣೆಬೆನ್ನೂರಿನಿಂದ ಬೈಂದೂರಿನವರೆಗೆ ರಸ್ತೆ ಕಾಮಗಾರಿ ಶುರುವಾಗಲಿದೆ. ರಾಷ್ಟ್ರೀಯ ಹೆದ್ದಾರಿ ವಿವಿ ಮುಂದೆ ಹಾದು ಹೋಗುವುದರಿಂದ ಇಲ್ಲಿ ಹೆಚ್ಚು ಅಭಿವೃದ್ದಿ ಕಾಣಬಹುದು.
ರೂ.313 ಕೋಟಿ ವೆಚ್ಚದಲ್ಲಿ ಹೊಸನಗರದಿಂದ ಮಾವಿನಕೊಪ್ಪ ವಯಾ ಕೊಲ್ಲೂರಿಗೆ ರಸ್ತೆ ಮಂಜೂರಾಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಈ ರಸ್ತೆಯಿಂದಾಗಿ ಕೊಲ್ಲೂರನ್ನು ಅತಿ ಕಡಿಮೆ ಅವಧಿಯಲ್ಲಿ ತಲುಪಲು ಅನುಕೂಲವಾಗಲಿದೆ. ಯಡೆಹಳ್ಳಿಯಲ್ಲಿ ರೂ.40 ಕೋಟಿ ವೆಚ್ಚದಲ್ಲಿ ರಿಂಗ್ ರಸ್ತೆ ನಿರ್ಮಾಣ ಆಗಲಿದೆ. ಇದೆಲ್ಲದರಿಂದ ವಿಶ್ವವಿದ್ಯಾಲಯದ ಮೌಲ್ಯವರ್ಧನೆಯಾಗಲಿದೆ. ಖೇಲೋ ಇಂಡಿಯಾ ಸ್ಟೇಡಿಯಂ ನಿರ್ಮಿಸಲು ರಾಜ್ಯದಿಂದ ಈಗಾಗಲೇ ರೂ.40 ಕೋಟಿ ಮೀಸಲಿಡಲಾಗಿದ್ದು ಕೇಂದ್ರದಿಂದ ರೂ.40 ಕೋಟಿ ಮಂಜೂರಾತಿ ದೊರೆತ ನಂತರ ನವುಲೆ ಕೃಷಿ ಕಾಲೇಜು ಬಳಿ ಸ್ಟೇಡಿಯಂ ನಿರ್ಮಿಸಲಾಗುವುದು ಇದರಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಪ್ರಸ್ತುತ ತಿನ್ನುವ ಅನ್ನ ಮತ್ತು ಭೂಮಿ ವಿಷವಾಗಿ ಪರಿಣಮಿಸುತ್ತಿದೆ. ಕೀಟನಾಶಗಳಂತಹ ರಾಸಾಯನಿಕ ಬಳಕೆ ಹೆಚ್ಚುತ್ತಿದೆ. ಗೊಬ್ಬರ ಬಳಕೆ ಹೆಚ್ಚುತ್ತಿದೆ. ಇದನ್ನು ಕಡಿಮೆ ಮಾಡುವ ರೀತಿಯಲ್ಲಿ ಮತ್ತು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕೆ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಬೇಕು. ಜೈವಿಕ ತಂತ್ರಜ್ಞಾನ ಮತ್ತು ರೈತಸ್ನೇಹಿಯಾದ ತಂತ್ರಜ್ಞಾನಗಳನ್ನು ಅಭಿವೃದ್ದಿಪಡಿಸಿ ಸದಾ ನಮ್ಮ ಕಾಯುವ ರೈತರಿಗೆ ಕೊಡುಗೆಯಾಗಿ ನೀಡಬೇಕು ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ರೈತರ ಏಳ್ಗೆಗಾಗಿ ಅನೇಕ ಯೋಜನೆ, ಕಾರ್ಯಕ್ರಮಗಳು, ಮತ್ತು ಸಬ್ಸಿಡಿಗಳು ಜಾರಿಯಲ್ಲಿವೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಸುಮಾರು 13 ಕೋಟಿ ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಎರಡು ತಿಂಗಳಿಗೊಮ್ಮೆ ರೂ.2 ಸಾವಿರ ಹಣ ಜಮೆಯಾಗುತ್ತಿದೆ ಎಂದರು. ಹೀಗೆ ರೈತರು ಸ್ವಾಭಿಮಾನದಿಂದ ಬದುಕಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ವಿದ್ಯಾರ್ಥಿಗಳೂ ಈ ನಿಟ್ಟಿನಲ್ಲಿ ಶ್ರಮ ವಹಿಸಬೇಕೆಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆನಂದಪುರ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ವಿಶ್ವವಿದ್ಯಾಲಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ, ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಕುಲಸಚಿವರಾದ ಡಾ.ಆರ್.ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೊರಬ ಪ್ರಗತಿಪರ ರೈತರಾದ ದೊಡ್ಡಗೌಡ.ಸಿ.ಪಾಟೀಲ್, ಚನ್ನಗಿರಿ ಪ್ರಗತಿಪರ ರೈತರಾದ ಕೆ.ನಾಗರಾಜ್, ಶಿವಮೊಗ್ಗದ ಪ್ರಗತಿಪರ ರೈತರಾದ ವೀರಭದ್ರಪ್ಪ ಪೂಜಾರಿ, ಕೆ.ಶಿ.ನಾ.ಕೃ.ತೋ.ವಿ.ವಿ.ವಿ ಡೀನ್ ಡಾ.ಎಂ.ದಿನೇಶ್ ಕುಮಾರ್, ಡಾ. ಕುಶಾಲಪ್ಪ, ಡಾ.ಮಂಜಪ್ಪ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.