ಶಿವಮೊಗ್ಗ : ನವೆಂಬರ್ 24 : ವಿಶ್ವಕ್ಕೆ ಯೋಗ ಮತ್ತು ಯೋಗದ ಮಹತ್ವವನ್ನು ಪರಿಚಯಿಸಿದ ದೇಶ ಭಾರತ ಎಂಬ ಹೆಮ್ಮೆ ನಮ್ಮದು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಅವರು ಇಂದು ಶಿವಮೊಗ್ಗ ಮಹಾನಗರಪಾಲಿಕೆಯು ಉದ್ಯಮನಿಧಿ ಯೋಜನೆ ಯಡಿಯಲ್ಲಿ ಮೂರು ಕೋಟಿ ರು. ಗಳ ವೆಚ್ಚದಲ್ಲಿ ಶಿವಮೊಗ್ಗದ ವಿನೋಬನಗರದಲ್ಲಿ ನೂತನವಾಗಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ ಹಾಗೂ ಐವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಅಜಿತ ಯೋಗಕೇಂದ್ರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಯೋಗದಲ್ಲಿ ಭಾರತೀಯರ ಸಾಧನೆ ಎಲ್ಲರೂ ಅನುಸರಿಸುವಂತದ್ದು. ವಿಶ್ವದ ಸುಮಾರು 150 ದೇಶಗಳಲ್ಲಿ ಯೋಗವನ್ನು ಅಭ್ಯಸಿಸುತ್ತಿರುವುದು ಹೆಮ್ಮೆ ಎನಿಸಿದೆ. ಇದರಿಂದಾಗಿ ಜಾಗತಿಕವಾಗಿ ಭಾರತ ವಿಶ್ವಗುರುವಾಗಿ ಗುರುತಿಸಲಾಗುತ್ತಿದೆ. ಯೋಗ ವಿಶ್ವಮಾನ್ಯ ವಾಗಿದೆ ಎಂದರು.

ಉತ್ತಮ ಸಂಸ್ಕೃತಿ, ಸಂಸ್ಕಾರಗಳಿರುವಲ್ಲಿ ಈ ರೀತಿಯ ಸದಾಚಾರ ಸದ್ವಿಚಾರಗಳು ಆಚರಣೆ ಬಂದು, ಸರ್ವರ ಹಿತಕಾಯುವ ಕಾರ್ಯಗಳು ನಡೆಯುತ್ತವೆ. ಶಾಸಕ ಚನ್ನಬಸಪ್ಪ ಅವರ ಸಮಾಜಮುಖಿ ಚಿಂತನೆಯ ಫಲದಿಂದಾಗಿ ಯೋಗ ಕೇಂದ್ರ ಶುಭಾರಂಭಗೊಂಡಿರುವುದು ಎಲ್ಲರಿಗೂ ಸಂತಸದ ಸಂಗತಿಯಾಗಿದೆ. ಅದಕ್ಕಾಗಿ ಶಾಸಕರು ಅಭಿನಂದನಾರ್ಹರು ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್. ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಂದ್ರಭೂಪಾಲ್, ಯೋಗ ಶಿಕ್ಷಕರಾದ ಶ್ರೀನಿವಾಸಮೂರ್ತಿ, ಅರವಿಂದ್, ಪಾಲಿಕೆ ಆಯುಕ್ತ ಶ್ರೀಮತಿ ಕವಿತಾ ಯೋಗಪ್ಪನವರ, ಎಸ್. ದತ್ತಾತ್ರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!