ಹೊಸತನ ಅನ್ನುವುದು ಸೃಷ್ಟಿಯ ನಿಯಮ. ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಮ್ಮ ಮನಸ್ಸು ತುಡಿಯುತ್ತಿರುತ್ತದೆ. ಪ್ರಕೃತಿಯು ನವನವೀನ ಬಣ್ಣದ ಉಡುಗೆ ತೊಟ್ಟು ನಮ್ಮ ಕಣ್ಮನ ಸೆಳೆಯುತ್ತದೆ. ಚಳಿಗಾಲ ಕಳೆದಾಕ್ಷಣ ಗಿಡ-ಮರಗಳೆಲ್ಲ ತಮ್ಮ ಹಳೆಯ ಎಲೆಗಳನ್ನು ಕಳಚಿಕೊಂಡು ಹೊಸ ಹೊಸ ಚಿಗುರುಗಳಿಂದ ಕಂಗೊಳಿಸುವ ಮೂಲಕ ಪ್ರಕೃತಿ ಕೂಡ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತದೆ.
ಬೇರೆ ಬೇರೆ ದೇಶಗಳು ಹೊಸ ವರ್ಷದ ದಿನವನ್ನು ತಮ್ಮದೇ ಆದ ಸಂಸ್ಕøತಿ/ಪದ್ಧತಿಗಳ ಪ್ರಕಾರ ಆಚರಿಸುತ್ತವೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜನವರಿ 1ನ್ನು ಹೊಸ ವರ್ಷದ ದಿನವೆಂದು ಆಚರಿಸಲಾಗುತ್ತದೆ. ಇದು ಮೂಲ ಜೂಲಿಯನ್ ಕ್ಯಾಲೆಂಡರ್ ಮತ್ತು ರೋಮನ್ ಕ್ಯಾಲೆಂಡರ್ಗಳಲ್ಲಿ ಕ್ರಿ.ಪೂ 153ರ ನಂತರದ ವರ್ಷದ ಮೊದಲ ದಿನವಾಗಿತ್ತು.
ಪ್ರತಿವರ್ಷದಂತೆ ಈ ವರ್ಷವು ಮತ್ತೆ ಹೊಸ ವರ್ಷ ಬರುತ್ತಿದೆ. ಇನ್ನೊಂದು ವರ್ಷ ಕಳೆದು ಹೊಯಿತಲ್ಲ ಎಂಬ ವ್ಯಥೆ ಕೆಲವರಿಗಾದರೆ, ಹೊಸ ವರ್ಷದಲ್ಲಿ ಏನಾದರೂ ಹೊಸ ಸಾಹಸ ಸಾಧನೆ ಮಾಡಬೇಕು ಎಂಬ ಛಲ ಮತ್ತೆ ಕೆಲವರಿಗೆ.
ಹೊಸ ವರ್ಷವು ಬರುತ್ತಿದೆ ಎಂದು ತುಂಬಾ ಉತ್ಸಾಹಪಡುವ ಅವಶ್ಯಕತೆಯಿಲ್ಲ. ಬದಲಾಗುತ್ತಿರುವುದು ಕ್ಯಾಲೆಂಡರ್ ಅಷ್ಟೇ. ಜೀವನದ ಗುರಿ ಸಾಧನೆ ಸಂಬಂಧಗಳೆಲ್ಲಾ ಯಥಾಸ್ಥಿತಿಯಲ್ಲೇ ಇರುತ್ತದೆ. ಹೊಸ ಅಧ್ಯಾಯದೊಂದಿಗೆ ಈ ಹೊಸ ವರ್ಷ ನಮ್ಮ ಜೀವನದದಲ್ಲಿ ನವೋತ್ಸಾಹ ತುಂಬಲು ಅತ್ಯುತ್ತಮ ಸಮಯ. ನಮ್ಮ ಬದುಕಿನ ಗುರಿಯನ್ನು ಸಾಧಿಸೋಣ ಜೊತೆಗೆ ಅಸೂಯೆ, ದ್ವೇಷ, ಪ್ರತೀಕಾರ, ದುರಾಸೆ ಹೀಗೆ ಮುಂತಾದ ಕೆಟ್ಟ ಆಲೋಚನೆಗಳನ್ನು ತೊರೆದು ಆ ಜಾಗದಲ್ಲಿ ಪ್ರೀತಿ, ಸಹಾನುಭೂತಿ, ಸ್ನೇಹ ಮತ್ತು ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳೋಣ.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೊಸ ವರ್ಷವನ್ನು ವಿಜೃಂಭಣೆಯಿಂದ ಬರಮಾಡಿಕೊಳ್ಳುತ್ತಾರೆ. ಕೆಲವರು ಪಾರ್ಟಿ ಮಾಡಲು ಹಾತೊರೆಯುತ್ತಾರೆ. ಕೆಲವರಿಗೆ ಪ್ರವಾಸ ಹೋಗುವುದು ಇಷ್ಟ. ಇನ್ನು ಕೆಲವರು ಎಲ್ಲ ದಿನಗಳಂತೆ ಇದು ಒಂದು ದಿನ ಎಂದು ಭಾವಿಸುತ್ತಾರೆ.
“ಬದುಕನ್ನು ಪ್ರೀತಿಸುತ್ತಾ ಸಾಗಿ ಬದುಕು ನಮ್ಮನ್ನು ಪ್ರೀತಿಸುತ್ತೆ. ಸೋಲನ್ನು ನಗುತ್ತಾ ಸ್ವಾಗತಿಸಿ ಗೆಲವು ನಮ್ಮನ್ನು ಸ್ವಾಗತಿಸುತ್ತೆ.”