ಶಿವಮೊಗ್ಗ: ಪೈಪ್ ಕಾಂಪೋಸ್ಟ್ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಅತ್ಯಂತ ಕಡಿಮೆ ಖರ್ಚು ಹಾಗೂ ಸರಳ ರೀತಿಯಲ್ಲಿ ಕಸ ನಿರ್ವಹಣೆ ಸಾಧ್ಯವಾಗಲಿದೆ. ಕಸದಿಂದ ಗೊಬ್ಬರವಾಗಿ ಬಳಸಿಕೊಳ್ಳುವ ಜತೆಯಲ್ಲಿ ಆರೋಗ್ಯಪೂರ್ಣ ಹಾಗೂ ಸ್ವಚ್ಛ ಪರಿಸರ ನಿರ್ಮಾಣ ಮಾಡಬಹುದಾಗಿದೆ ಎಂದು ತರಬೇತುದಾರ ಟಿ.ಎಸ್.ಮಹಾದೇವಸ್ವಾಮಿ ಹೇಳಿದರು.
ಶಿವಮೊಗ್ಗ ತಾಲೂಕಿನ ಹೊಳಲೂರಿನ ಅಂಗನವಾಡಿಗಳಲ್ಲಿ ಪೈಪ್ ಕಾಂಪೋಸ್ಟ್ ಪದ್ಧತಿ ಅಳವಡಿಕೆ ಹಾಗೂ ನಿರ್ವಹಣೆ ಬಗ್ಗೆ ತರಬೇತಿ ನೀಡಿ ಮಾತನಾಡಿದ ಅವರು, ಪೈಪ್ ಕಾಂಪೋಸ್ಟ್‍ಅನ್ನು ಮನೆಗಳಲ್ಲಿ ಎಲ್ಲರೂ ಅಳವಡಿಸಿಕೊಳ್ಳುವುದರಿಂದ ಕಸ ಹಾಗೂ ತ್ಯಾಜ್ಯವನ್ನು ಮೂಲದಲ್ಲಿಯೇ ನಿರ್ವಹಣೆ ಮಾಡಲು ಸಾಧ್ಯ ಆಗಲಿದೆ. ಮಾಲಿನ್ಯರಹಿತ ಮಾದರಿ ಗ್ರಾಮಗಳನ್ನು ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿ ಆಗಿಸುವ ಪ್ರಯತ್ನದಲ್ಲಿ ಮನೆ ಮನೆ ಕಸ ಸಂಗ್ರಹಣೆ ಮತ್ತು ಕಸ ವಿಲೇವಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಇಲ್ಲಿನ ಅಂಗನವಾಡಿಗಳಲ್ಲಿ ಹಸಿ ಕಸವನ್ನು ನಿರ್ವಹಣೆ ಮಾಡಲು ಪೈಪ್ ಕಾಂಪೋಸ್ಟ್ ಅಳವಡಿಕೆ ಮಾಡುತ್ತಿರುವುದು ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ಮಾದರಿಯಾಗಿದೆ ಎಂದರು.
ತರಬೇತಿಯಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಸುವ ವಿಧಾನ ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ, 6 ಇಂಚು ಅಥವಾ 8 ಇಂಚಿನ ದಪ್ಪದ 6 ಅಡಿ ಎತ್ತರದ ಸಿಮೆಂಟ್ ಅಥವಾ ಮಣ್ಣಿನ ಅಥವಾ ಪಿವಿಸಿ ಪ್ಲಾಸ್ಟಿಕ್ ಪೈಪ್ ಅನ್ನು ಒಂದೂವರೆ ಅಡಿ ಅಳದಲ್ಲಿ ನೆಡಬೇಕು. ಪೈಪ್ ಒಳಗೆ ಕಸ ಹಾಕುವ ಮೊದಲು ಪೈಪ್ ನೊಳಗೆ ಜೈವಿಕ ಹುಳುಗಳು ಉತ್ಪತ್ತಿಯಾಗಲು ಸ್ವಲ್ಪ ಒಣಗಿದ ಮರದ ಎಲೆಗಳನ್ನು ಮೊದಲು ಹಾಕಿ ನಂತರ, 1 ಕೆಜಿ ಬೆಲ್ಲ ಮತ್ತು 5 ಕೆಜಿ ಸಗಣಿ ನೀರನ್ನು ಹಾಕಬೇಕು. ನಂತರ ಅಡುಗೆ ಮನೆಯಲ್ಲಿ ನಿತ್ಯ ಉತ್ಪತ್ತಿಯಾಗುವ ಬೇಡವಾದ ಜೈವಿಕ ಕಸವನ್ನು ಹಾಕಬೇಕು. ಭೂಮಿಯಲ್ಲಿ ಕರಗದ ಯಾವುದೇ ವಸ್ತುಗಳನ್ನು ಪೈಪ್ ಒಳಗೆ ಹಾಕಬಾರದು. ವಾರಕ್ಕೊಮ್ಮೆ ಅರ್ಧ ಮಗ್ ನೀರು ಮತ್ತು ಒಂದು ಹಿಡಿ ಮಣ್ಣನ್ನು ಪೈಪ್ ಒಳಗೆ ಹಾಕಬೇಕು. ಪೈಪ್ ಮೇಲ್ಭಾಗವನ್ನು ಮರದ ತುಂಡು ಅಥವಾ ಹೆಂಚು ಅಥವಾ ಮುಚ್ಚುಳವನ್ನು ಗಾಳಿಯಾಡುವಂತೆ ಮುಚ್ಚಬೇಕು ಎಂದು ವಿವರಿಸಿದರು.
ಪೈಪ್ ಕಾಂಪೋಸ್ಟ್‍ಅನ್ನು ಅಳವಡಿಸಲು ಕಡಿಮೆ ವೆಚ್ಚವಾಗುವುದು. 6 ಇಂಚು 6 ಅಡಿ ಉದ್ದದ ಪೈಪ್ ಮತ್ತು ಮುಚ್ಚುಳ 850ರೂ. ಅಥವಾ 8 ಇಂಚು 6 ಅಡಿ ಉದ್ದದ ಪೈಪ್ ಮತ್ತು ಮುಚ್ಚುಳ 1300 ರೂ. ಅಗುತ್ತದೆ. ಹೊಳಲೂರು ಅಂಗನವಾಡಿಗಳಲ್ಲಿ ಅಳವಡಿಸುತ್ತಿದ್ದು, ಇಡೀ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶದ ಮನೆ ಮನೆಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಚೈತನ್ಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಸಿಇಓ ಭದ್ರೀಶ್ ಬಿ.ಟಿ. ಮಾತನಾಡಿ, ಜಿಪಂ ಸಿಇಒ ವೈಶಾಲಿ ಎಂ.ಎಲ್ ಅವರ ಮನೆಯಲ್ಲಿ ನಾಲ್ಕು ಪೈಪ್ ಕಾಂಪೋಸ್ಟ್‍ಗಳನ್ನು ಅಳವಡಿಸಿಕೊಂಡಿದ್ದು, ಚೈತನ್ಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಉಸ್ತುವಾರಿಯಲ್ಲಿ ನಗರದ ಸ್ವಚ್ಚ ಸರ್ವೇಕ್ಷಣ್ 2018 ಪ್ರಶಸ್ತಿ ಪುರಸ್ಕøತ ಟಿ.ಎಸ್.ಮಹದೇವಸ್ವಾಮಿ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಸ ಸಂಗ್ರಹ ಮತ್ತು ತ್ಯಾಜ್ಯ ನಿರ್ವಹಣೆಯ ಬಗ್ಗೆ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಪೈಪ್ ಕಾಂಪೋಸ್ಟ್ ಅಳವಡಿಕೆಯ ಸಂದರ್ಭದಲ್ಲಿ ಹೊಳಲೂರು ಗ್ರಾಮ ಪಂಚಾಯಿತಿ ಪಿಡಿಓ ಲೋಕೇಶ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!