ಹೊರ ಜಿಲ್ಲೆಗಳಿಗೆ ಒಂದು ಅವಧಿಗೆ ಮಾತ್ರ ತೆರಳುವವರಿಗೆ ಈಗಾಗಲೇ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಂತದಲ್ಲಿ ವನ್ ವೇ ಪಾಸ್ ನೀಡಲಾಗುತ್ತಿದ್ದು, ವಿಳಂಬಕ್ಕೆ ಅವಕಾಶವಿಲ್ಲದಂತೆ ಅರ್ಜಿ ಸಲ್ಲಿಸಿದ ಎರಡು ಗಂಟೆ ಒಳಗಾಗಿ ಪಾಸ್ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.
ಅವರು ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಈ ಕುರಿತು ಸೂಚನೆಗಳನ್ನು ನೀಡಿದರು.
ಅರ್ಜಿಯಲ್ಲಿ ಮೊಬೈಲ್ ಸಂಖ್ಯೆ ಸೇರಿದಂತೆ ಕನಿಷ್ಟ ಮಾಹಿತಿಗಳನ್ನು ಮಾತ್ರ ಪಡೆಯಬೇಕು. ಜನರನ್ನು ಕಾಯಿಸದೆ ನೇರವಾಗಿ ಅರ್ಜಿಯನ್ನು ಸ್ವೀಕರಿಸಬೇಕು. ಒಂದು ವೇಳೆ ಪಾಸ್ ನೀಡಲು ಸಾಧ್ಯವಿಲ್ಲದಿದ್ದರೆ ಅರ್ಜಿ ಸ್ವೀಕರಿಸುವ ಸಂದರ್ಭದಲ್ಲಿಯೇ ತಿಳಿಸಬೇಕು. ಅರ್ಜಿಗಳನ್ನು ತಹಶೀಲ್ದಾರ್ ಕಚೇರಿಯಲ್ಲಿ ಸ್ವೀಕರಿಸಬೇಕು. ಪಾಸ್ಗಳನ್ನು ಮೊಬೈಲ್ ಸಂಖ್ಯೆ ತಿಳಿಸಿ ನಾಡ ಕಚೇರಿಯಲ್ಲಿ ಪಡೆಯಬೇಕು ಎಂದು ಹೇಳಿದರು.
ಹೊರ ಜಿಲ್ಲೆಗಳಿಗೆ ತೆರಳುವವರು ಬಸ್ ಸೌಲಭ್ಯ ಬಯಸಿದರೆ ಕಲ್ಪಿಸಬೇಕು. ಯಾವುದಾದರೂ ಒಂದು ಊರಿಗೆ ಒಂದು ಬಸ್ನಲ್ಲಿ ಪ್ರಯಾಣಿಸುವಷ್ಟು ಜನರಿಂದ ವಿನಂತಿ ಬಂದರೆ, ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಮಾತನಾಡಿ ಬಸ್ ವ್ಯವಸ್ಥೆ ಮಾಡಿ ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಮಾಹಿತಿ ಕಡ್ಡಾಯ: ಜಿಲ್ಲೆಯ ಎಪಿಎಂಸಿಗಳಿಗೆ ಸೇರಿದಂತೆ ಕೈಗಾರಿಕಾ ವಲಯಗಳಿಗೆ ಹೊರ ರಾಜ್ಯಗಳಿಂದ ಲಾರಿಗಳಲ್ಲಿ ಆಗಮಿಸುವವರ ಸಂಪೂರ್ಣ ವಿವರಗಳನ್ನು ಪಡೆಯಬೇಕು. ಹೊರ ರಾಜ್ಯಗಳಿಂದ ಲಾರಿಗಳಲ್ಲಿ ಅನಧಿಕೃತವಾಗಿ ಯಾರೂ ಜಿಲ್ಲೆ ಪ್ರವೇಶಿಸುವಂತಿಲ್ಲ. ಎಪಿಎಂಸಿಗಳಿಗೆ ಆಗಮಿಸುವ ಲಾರಿಗಳ ಚಾಲಕರ ವಿವರ, ಒಂದು ವೇಳೆ ಹಮಾಲಿಗಳು ಆಗಮಿಸಿದ್ದರೆ ಅವರ ವಿವರ, ಆಗಮಿಸಿದ ಹಾಗೂ ಹಿಂತಿರುಗುವ ದಿನಾಂಕ ಇತ್ಯಾದಿಗಳನ್ನು ಎಪಿಎಂಸಿ ಕಾರ್ಯದರ್ಶಿಗಳು ಪಡೆದು ಪೊಲೀಸರಿಗೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಲಾರಿಯಲ್ಲಿ ಆಗಮಿಸುವವರು ಎಪಿಎಂಸಿ ಆವರಣದ ಹೊರಗೆ ಅಡ್ಡಾಡುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಸಗಟು ಡೀಲರ್ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ಅನಾವಶ್ಯಕವಾಗಿ ಹೊರ ಬರಬೇಡಿ: ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ, ಸಾರ್ವಜನಿಕರು ಅಗತ್ಯ ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಅಗತ್ಯ ಸಾಮಾಗ್ರಿಗಳನ್ನು ಮನೆಯ ಸಮೀಪದಲ್ಲೇ ಖರೀದಿಸಬೇಕು. ಯಾವುದೇ ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವ್ಯಾಪಾರ ನಡೆಸುತ್ತಿದ್ದರೆ, ಅಂತಹ ಅಂಗಡಿ ಮಾಲಿಕರಿಗೆ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಸೆಲೂನ್ ಅವಕಾಶ: ಜಿಲ್ಲೆಯಲ್ಲಿ ಸೆಲೂನ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಕಡ್ಡಾಯವಾಗಿ ಮಾಸ್ಕ್ ಮತ್ತು ಕೈಗವಸು ಸೇರಿದಂತೆ ಎಲ್ಲಾ ಅಗತ್ಯ ಮುಂಜಾಗರೂಕತೆ ವಹಿಸಿರಬೇಕು ಎಂದರು.
ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಮತ್ತಿತರರು ಉಪಸ್ಥಿತರಿದ್ದರು.