News Next

ಶಿವಮೊಗ್ಗ, ಜನವರಿ 05 : ಕೃಷಿ ಇಲಾಖೆಯು ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ವಿವರಗಳನ್ನು ಅಪ್‍ಲೋಡ್ ಮಾಡಲು ಮೊಬೈಲ್ ಆಪ್‍ನ್ನು ಅಭಿವೃದ್ಧಿಪಡಿಸಲಾಗಿದೆ.
ಜಿಲ್ಲೆಯಲ್ಲಿ ಹಿಂಗಾರು ಬೆಳೆ ಪ್ರದೇಶಗಳಾದ ಶಿಕಾರಿಪುರ ತಾಲೂಕಿನ ಎಲ್ಲಾ ಹೋಬಳಿಗಳು ಮತ್ತು ಸೊರಬ ತಾಲೂಕಿನ ಜಡೆ ಹೋಬಳಿಗಳಲ್ಲಿ ಬೆಳೆ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದ್ದು, ರೈತರು ಗೂಗಲ್ ಪ್ಲೇಸ್ಟೋರ್‍ನಿಂದ ಅಥವಾ ಇಲಾಖೆಯ ಜಾಲತಾಣ: http://play.google.com/store/apps/ details?id=com.csk.RabiTPKfarmer.cropsurvey ಲಿಂಕ್ ಬಳಸಿ ‘ಹಿಂಗಾರು ರೈತರ ಬೆಳೆ ಸಮೀಕ್ಷೆ 2020-21 ಆಪ್’ನ್ನು ನಕಲಿಳಿಸಿಕೊಳ್ಳಬಹುದಾಗಿದೆ.
ಆಪ್‍ನಲ್ಲಿ ಆರ್ಥಿಕ ವರ್ಷ(2020-21) ಹಾಗೂ ಋತು(ಹಿಂಗಾರು)ವನ್ನು ದಾಖಲಿಸಿ ತಮ್ಮ ಆಧಾರ್ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ. ಬರಲಿದ್ದು, ಒ.ಟಿ.ಪಿ.ಯನ್ನು ದಾಖಲಿಸಿ ಸಲ್ಲಿಸಬೇಕು. ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಸರ್ವೇ ನಂಬರುಗಳ ಗಡಿ ರೇಖೆಯೊಳಗೆ ನಿಂತು ಬೆಳೆ ಕ್ಷೇತ್ರವನ್ನು ನಮೂದಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್‍ಲೋಡ್ ಮಾಡಬಹುದಾಗಿದೆ.
ಬೆಳೆ ಸಮೀಕ್ಷೆ ಮಾಹಿತಿಯನ್ನು ಪ್ರಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ದಾಖಲಿಸಲು ಬಳಸಲಾಗುವುದು.
ರೈತರು ನಿಗಧಿತ ಸಮಯದೊಳಗಾಗಿ ತಾವು ಬೆಳೆದ ಬೆಳೆಗಳ ಖಚಿತ ಮಾಹಿತಿಯನನು ಮೊಬೈಲ್ ಆಪ್ ಮೂಲಕ ದಾಖಲಿಸುವಂತೆ ಹಾಗೂ ಹೆಚ್ಚಿನ ವಿವರಗಳಿಗಾಗಿ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ತಹಶೀಲ್ದಾರರ ಕಚೇರಿ ಅಥವಾ ಸಂಬಂಧಪಟ್ಟ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!