ಭಾರತೀಯ ಶಿಲ್ಪಕಲೆಗೆ ಜಕಾಣಾಚಾರಿ ಅವರ ಕೊಡುಗಡೆ ಅನನ್ಯ. ಕನ್ನಡ ಶಿಲ್ಪ ಕಲೆಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ ಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಹೇಳಿದರು.ನಗರದ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಲಾಯಿತು.
ಭಾರತೀಯ ಶಿಲ್ಪ ಪರಂಪರೆಗೆ ವಿಶೇಷವಾಗಿ ಕನ್ನಡ ನಾಡಿನ ಶಿಲ್ಪಕಲೆಗೆ ವಿಶೇಷ ಕೊಡುಗೆ ನೀಡಿದ ಜಕಣಾಚಾರಿ ಅವರನ್ನು ಎಲ್ಲ ಸಮುದಾಯಗಳು ಆದರದಿಂದ ಕಾಣುತ್ತವೆ ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರು ಮಾತನಾಡಿ, ಸಾಹಿತ್ಯ, ಸಂಗೀತ, ನಾಟ್ಯ, ವಾಸ್ತುಶಿಲ್ಪ ಇತ್ಯಾದಿ ಒಳಗೊಂಡಿರುವುದೇ ಭಾರತೀಯ ಸಂಸ್ಕೃತಿಯ ಪ್ರತೀಕ. ವಾಸ್ತು ಶಿಲ್ಪ ಕಲೆಯನ್ನು ಅಜಾರಮರಗೊಳಿಸಿದ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಅಮರಶಿಲ್ಪಿ ಜಕಣಾಚಾರಿ ಅವರನ್ನು ಸ್ಮರಿಸುವುದು, ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಜಿಲ್ಲಾ ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಗಣೇಶಪ್ಪ ಕಮ್ಮಾರ ಮಾತನಾಡಿ, ದೇವಾಲಯಗಳಲ್ಲಿ ದೇವರ ಮೂರ್ತಿಗಳನ್ನು ಕೆತ್ತುವ ಮೂಲಕ ದೇವರು ಇದ್ದಾನೆ ಎಂದು ತೋರಿಸಿಕೊಟ್ಟುವರು ಜಕಣಾಚಾರಿ. ನಮ್ಮ ಸಮುದಾಯದ ಕುಲ ಕಸುಬುಗಳು ಇಂದು ನಶಿಸುತ್ತೀವೆ. ಸರ್ಕಾರದ ವತಿಯಿಂದ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.ಕನ್ನಡ ಉಪನ್ಯಾಸಕ ಡಾ.ಚಾಮರಾಜ ಕಮ್ಮಾರ ಅವರು ಮಾತನಾಡಿ, ಜಕಣಾಚಾರಿ ಶ್ರೇಷ್ಠ ಶಿಲ್ಪಕಲಾ ರಚನೆಕಾರರಿದ್ದು, ಅವರು ಕೆತ್ತಿದ ಬೇಲೂರು, ಹಳೆಬೀಡಿನ ದೇವಾಲಯಗಳು ದೇಶ-ವಿದೇಶಗಳಲ್ಲಿ ಸುಪ್ರಸಿದ್ಧವಾಗಿದೆ ಎಂದರು.
ಜಕಣಾಚಾರಿ ಜೀವನದ ಕುರಿತು ಜನಪದ ಹಾಗೂ ಇತಿಹಾಸದಲ್ಲಿ ಅನೇಕ ವಿಚಾರಗಳನ್ನು ಕಾಣಬಹುದು. ಯಾವ ಊರಲ್ಲಿ ನೋಡಿದರೂ ಜಕಣಾಚಾರಿ ಗುಡಿ ಎನ್ನುತ್ತಾರೆ. ಹೊಯ್ಸಳ ಶೈಲಿ, ಚಾಲುಕ್ಯ ಶೈಲಿಯಂತೆ ಶಿಲ್ಪ ಕಲೆಯಲ್ಲಿ ಜಕಣಾಚಾರಿ ಶೈಲಿ ಎಂದು ಪ್ರಸಿದ್ಧಿಯಾಗಿದೆ ಎಂದರು. ವಿಶ್ವಕರ್ಮರು ಸುಂದರವಾದ ಶಿಲ್ಪ ನಿರ್ಮಾಣ, ಸುಂದರ ನಗರ ನಿರ್ಮಾಣಗಳ ಜೊತೆಗೆ ಯುದ್ಧೋಪಕರಣಗಳ ತಯಾರಿಕೆ, ನಾಣ್ಯಗಳನ್ನು ಟಂಕಿಸುವುದರ ಜೊತೆಗೆ ಯುದ್ಧದಲ್ಲೂ ಭಾಗವಹಿಸಿ ನಾಡನ್ನು ಉಳಿಸಿದ ವೀರಪರಂಪರೆ ಇದೆ. ಇಂತಹ ಉನ್ನತ ಪರಂಪರೆಯ ವಿಶ್ವಕರ್ಮಕರ ಕಸುಬುಗಳು ಆಧುನಿಕರಣದ ಸಂದರ್ಭದಲ್ಲಿ ಕ್ಷೀಣಿಸುತ್ತಿವೆ. ಕಾಲಕ್ಕೆ ತಕ್ಕಂತೆ ತಮ್ಮ ಕುಲಕಸುಬಿಗೆ ಆಧುನಿಕತೆಯನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹಾವೇರಿ ನಗರದಲ್ಲಿ ಅಮರಶಿಲ್ಪಿ ಜಕಣಾಚಾರಿ ವೃತ್ತ ಸ್ಥಾಪಿಸುವ ಹಾಗೂ ವಿಶ್ವಕರ್ಮ ಸಮುದಾಯದವರಿಗೆ ನಿವೇಶನ ಒದಗಿಸುವಂತೆ ನಗರಸಭೆ ಅಧ್ಯಕ್ಷರಿಗೆ ಮುಖಂಡರು ಮನವಿ ಸಲ್ಲಿಸಿದರು.ಹಿರೇಕೆರೂರ ತಾಲೂಕಿನ ನೂಲಗೇರಿ ಗ್ರಾಮದ ಹಿರಿಯ ಶಿಲ್ಪಿ ಮೌನೇಶಾಚಾರ್ಯ ಮಹದೇವಪ್ಪಾಚಾರ್ಯ ಮಾಯಾಚಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶಿವಕುಮಾರ ಸಂಗೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನಾಮ ನಿರ್ದೇಶಿತ ಸದಸ್ಯ ಮಹೇಂದ್ರ ಬಡಿಗೇರ ಸೇರಿದಂತೆ ವಿಶ್ವಕರ್ಮ ಬಂಧುಗಳು ಉಪಸ್ಥಿತರಿದ್ದರು.