ಕೈಮಗ್ಗ ಉದ್ಯಮವು ಭಾರತದ ಅತಿದೊಡ್ಡ ಅಸಂಘಟಿತ ಆರ್ಥಿಕ ಚಟುವಟಿಕೆಗಳಲ್ಲಿ ಒಂದಾಗಿದ್ದು, ತನ್ನ ವಿಶಿಷ್ಟವಾದ ನೇಯ್ಗೆ ಮತ್ತು ಮುದ್ರಣ ಶೈಲಿಗೆ ಜಾಗತಿಕವಾಗಿ ಪ್ರಸಿದ್ಧಿ ಗಳಿಸಿ ದೇಶದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಅತ್ಯುತ್ತಮ ಸಂಕೇತವಾಗಿದೆ.
ಭಾರತದ ಗ್ರಾಮೀಣ ಮತ್ತು ಅರೆ ಗ್ರಾಮೀಣ ಭಾಗಗಳಲ್ಲಿ ಜೀವನೋಪಾಯಕ್ಕೆ ಪ್ರಮುಖ ಮೂಲವಾಗಿರುವ ಕೈಮಗ್ಗ ಕ್ಷೇತ್ರದ ನೇಕಾರರಲ್ಲಿ ಶೇ. 72ಕ್ಕಿಂತ ಹೆಚ್ಚು ಮಹಿಳೆಯರನ್ನ ಒಳಗೊಂಡಿದೆ.
1905 ರ ಆಗಸ್ಟ್ 7 ರಂದು ಪ್ರಾರಂಭವಾದ ಸ್ವದೇಶಿ ಆಂದೋಲನವು ಸ್ಥಳೀಯ ಕೈಗಾರಿಕೆಗಳು ಮತ್ತು ಪ್ರಮುಖವಾಗಿ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸುವುದಾಗಿತ್ತು. ಸ್ವದೇಶಿ ಚಳುವಳಿಯು ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸಾಮಾಜಿಕ ಹಾಗು ದೇಶೀಯ ಜೀವನದ ಸಂಪೂರ್ಣ ವಿನ್ಯಾಸವನ್ನು ಬದಲಿಸಿದ ಆಂದೋಲನವಾಗಿದೆ.
ಸ್ವದೇಶಿ ಚಳುವಳಿಯ ಪ್ರಮುಖ ಅಂಶಗಳೆಂದರೆ ಸ್ವಾವಲಂಬನೆ ಅಥವಾ ಆತ್ಮಶಕ್ತಿಗೆ ಒತ್ತು ನೀಡುವುದು. ರಾಷ್ಟ್ರೀಯ ಘನತೆ, ಗೌರವ ಮತ್ತು ಆತ್ಮವಿಶ್ವಾಸ ಪ್ರತಿಪಾದನೆಯೊಂದಿಗೆ ಆರ್ಥಿಕ ಕ್ಷೇತ್ರದಲ್ಲಿ ಸ್ಥಳೀಯ ಕೈಗಾರಿಕೆ ಮತ್ತು ಇತರೆ ಉದ್ಯಮಗಳನ್ನು ಬೆಂಬಲಿಸಿ ಪೋಷಿಸುವುದಾಗಿತ್ತು.
ಸ್ಥಳೀಯ ಕೈಗಾರಿಕೆಗಳನ್ನು ಮತ್ತು ನಿರ್ಧಿಷ್ಟವಾಗಿ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸುವ ಮೂಲ ಉದ್ದೇಶದಿಂದ ಪ್ರಾರಂಭಗೊಂಡ ಸ್ವದೇಶಿ ಚಳುವಳಿಯ ದಿನದ ವಿಷೇಶತೆಗಾಗಿ ಭಾರತ ಸರ್ಕಾರವು 2015 ರಂದು ಪ್ರತಿ ವರ್ಷ ಆಗಸ್ಟ್ 7 ನ್ನು “ರಾಷ್ಟ್ರೀಯ ಕೈಮಗ್ಗ ದಿನ”ವನ್ನಾಗಿ ಆಚರಿಸಲು ನಿರ್ಧರಿಸಿದೆ. ಕೈಮಗ್ಗ ದಿನದ ವಿಶೇಷತೆಯೆಂದರೆ, ದೇಶದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಅಭಿವೃದ್ದಿಗೆ ಕೈಮಗ್ಗದ ಕೊಡುಗೆ ಮತ್ತು ಪರಂಪರೆಯನ್ನು ಸಂರಕ್ಷಿಸಿ ಈ ಉದ್ಯಮದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಬ್ರಿಟಿಷರು ಭಾರತಲ್ಲಿ ಸಿಗುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ತಮ್ಮ ದೇಶದಲ್ಲಿನ ಗಿರಣಿಗಳಲ್ಲಿ ಬಟ್ಟೆಗಳನ್ನು ತಯಾರಿಸಿ ಪುನಃ ಅವುಗಳನ್ನು ಭಾರತದಲ್ಲಿ ಮಾರಾಟ ಮಾಡುವುದು, ಭಾರತೀಯ ಸ್ಥಳೀಯ ಆರ್ಥಿಕತೆಗೆ ವಿನಾಶಕಾರಿಯಾಗಿತ್ತು. ಈ ವಸಾಹತುಶಾಹಿ ಪದ್ದತಿಯ ವಿರುದ್ದ ರೂಪುಗೊಂಡ ಸ್ವದೇಶಿ ಚಳುವಳಿಯು ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸಿ ದೇಶೀಯ ಬಟ್ಟೆಗಳ ಉತ್ಪಾದನೆಗೆ ಪ್ರೋತ್ಸಾಹಿಸಿತು. ಇದರಿಂದಾಗಿ ಕೈಮಗ್ಗ ಉದ್ಯಮವು ಸ್ವದೇಶಿ ಚಳುವಳಿಯಲ್ಲಿ ಒಂದು ಮಹತ್ವದ ಘಟನೆಯಾಗಿದೆ.
ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಕೌಶಲ್ಯವನ್ನು ರವಾನಿಸಲ್ಪಡುತ್ತ, ಶತಮಾನಗಳು ಕಳೆದರು ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿರುವ ಭಾರತೀಯ ಕೈಮಗ್ಗ ಉದ್ಯಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದಕ್ಕೆ ಸ್ಪಷ್ಟತೆಯೆಂಬಂತೆ ಮೊಹೆಂಜೋದಾರೊ ನ ಉತ್ಖನನ ಸಮಯದಲ್ಲಿ ದೊರೆತ ನೇಯ್ದ ಮತ್ತು ಬಣ್ಣ ಬಣ್ಣದ ಹತ್ತಿ ಬಟ್ಟೆಗಳು, ಈಜಿಪ್ಟ್ ನಾಗರಿಕತೆಯಲ್ಲಿ ಪತ್ತೆಯಾದ ಭಾರತೀಯ ಕೈಮಗ್ಗ ತುಣುಕುಗಳು.
ಕಡಿಮೆ ಬಂಡವಾಳದೊಂದಿಗೆ ಕನಿಷ್ಟ ಶಕ್ತಿಯನ್ನು ಬಳಸಿಕೊಂಡು ಪರಿಸರ ಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುವ ಕೈಮಗ್ಗ ಕ್ಷೇತ್ರವು ಇಂದು ದೇಶದ ಅತಿ ದೊಡ್ಡ ಗುಡಿ ಕೈಗಾರಿಕೆಯಾಗಿದ್ದು, 2019-20 ರ ಕೈಮಗ್ಗ ಗಣತಿಯ ಪ್ರಕಾರ, ಸುಮಾರು 23.77 ಲಕ್ಷ ಮಗ್ಗಗಳನ್ನು ಹೊಂದಿದ್ದು ನೇರವಾಗಿ ಮತ್ತು ಪರೋಕ್ಷವಾಗಿ 3 ಮಿಲಿಯನ್ಗಿಂತಲು ಹೆಚ್ಚು ಜನರನ್ನೊಳಗೊಂಡಿದೆ ಮತ್ತು ಇವರಲ್ಲಿ ಶೇ.72 ಕ್ಕಿಂತಲೂ ಹೆಚ್ಚು ಮಹಿಳೆಯರೆ ಇದ್ದಾರೆ ಹಾಗು ಗ್ರಾಮೀಣ ಪ್ರದೇಶದಲ್ಲಿ ಕೃಷಿ ನಂತರದ ಎರಡನೇ ಅತಿ ದೊಡ್ಡ ಉದ್ಯೋಗ ಒದಗಿಸುವ ಸಂಸ್ಥೆಯಾಯಾಗಿದೆ.
ಭಾರತದ ಕೈಮಗ್ಗದಿಂದ ಉತ್ಪಾದನೆಯಾಗುವ ಸೀರಗಳು, ಕುರ್ತಾ, ಶಾಲು, ಫ್ಯಾಷನ್ ಪರಿಕರಗಳು, ಇತ್ಯಾದಿಗಳಂತಹ ಸಾಂಪ್ರದಾಯಿಕ ಉತ್ಪನ್ನಗಳು ಇಂದಿಗು ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ.
ದೇಶದಲ್ಲಿ ತಯಾರಾಗುವ ಸಾವಿರಾರು ಕೈಮಗ್ಗ ಉತ್ಪನ್ನಗಳಲ್ಲಿ ಇಲ್ಲಿಯವರೆಗೆ 65 ಕೈಮಗ್ಗ ಉತ್ಪನ್ನಗಳು ಜಾಗತಿಕ ಸೂಚಕ( ಜಿ. ಐ ಟ್ಯಾಗ್) ಮತ್ತು 6 ಜಿ. ಐ. ಲೋಗೊ ಗಳನ್ನು ಪಡೆದುಕೊಂಡಿವೆ. ಇದರಲ್ಲಿ ಕರ್ನಾಟಕದ ಕೈಮಗ್ಗ ಉತ್ಪನ್ನಗಳಾದ ”ನವಲಗುಂದ ದುರ್ರೀಸ್, ಬಾಗಲಕೊಟೆಯ ಇಳಕಲ್ ಸೀರೆಗಳು, ಚಿತ್ರದುರ್ಗದ ಮೊಳಕಾಲ್ಮೂರು ಸೀರೆಗಳು, ಉಡುಪಿ ಸೀರೆಗಳು, ಗುಳೇದಗುಡ್ಡ ಖಾನ, ಮತ್ತು ಮೈಸೂರು ಸಿಲ್ಕ್” ಜಿ. ಐ. ಟ್ಯಾಗ್ ಪಡೆದುಕೊಂಡಿದ್ದು “ಮೈಸೂರು ಸಿಲ್ಕ್ ಮತ್ತು ನವಲಗುಂದ ದುರ್ರೀಸ್” ಜಿ. ಐ. ನೊಂದಾಯಿತ ಕೈಮಗ್ಗ ಉತ್ಪನ್ನಗಳ ಲೋಗೊ ಪಡೆದುಕೋಡಿದೆ.
ಭಾರತವು ಇಂದು ಪ್ರಪಂಚದ 20ಕ್ಕೂ ಹೆಚ್ಚಿನ ದೇಶಗಳಿಗೆ ಕೈಮಗ್ಗ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು ಇವುಗಳಲ್ಲಿ ಅಮೇರಿಕ, ಯು.ಕೆ., ಸ್ಪೇನ್, ಆಸ್ಟ್ರೇಲಿಯಾ, ಇಟಲಿ, ಜರ್ಮನಿ, ದಕ್ಷಿಣ ಆಫ್ರಿಕ, ನೆದಲ್ರ್ಯಾಂಡ್ ಮತ್ತು ಯು.ಎ.ಇ. ದೇಶಗಳು ಭಾರತೀಯ ಕೈಮಗ್ಗ ಉತ್ಪನ್ನಗಳ ಅತಿದೊಡ್ಡ ಆಮದುದಾರ ದೇಶಗಳಾಗಿವೆ. ಈ ದೇಶಗಳಿಗೆ ರಫ್ತಾಗುವ ಪ್ರಮುಖ ಕೈಮಗ್ಗ ಉತ್ಪನ್ನಗಳೆಂದರೆ ಮ್ಯಾಟ್ಸ್, ರಗ್ಗುಗಳು, ಬೆಡ್ಶೀಟ್ಗಳು, ಕುಶನ್ ಕವರ್ಗಳು ಮತು ಇತರ ಕೈಮಗ್ಗ ಉತ್ಪನ್ನಗಳು.
ಇಂದು ಭಾರತ ಸರ್ಕಾರವು ಕೈಮಗ್ಗ ಮತ್ತು ಕರಕುಶಲ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿ, ನೇಕಾರರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ದಿಪಡಿಸಲು ಜವಳಿ ಸಚಿವಾಲಯದಡಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದಾಗಿ ನೇಕಾರರಿಗೆ ವಿಮಾ ಸೌಲಭ್ಯ, ಅವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆಯ ವೇದಿಕೆ ಒದಗುಸುವಿಕೆ ಮುಂತಾದ ಅನೂಕೂಲಗಳಾಗಿವೆ. ಆಗಸ್ಟ್ 7, 2015 ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಂದು, ಉನ್ನತ ಮಟ್ಟದ ಕೈಮಗ್ಗ ಉತ್ಪನ್ನಗಳ ಬ್ರಾಂಡಿಂಗ್ಗಾಗಿ “ಇಂಡಿಯಾ ಹ್ಯಾಂಡ್ಲ್ಯೂಂ” ಬ್ರಾಂಡ್ ಅನ್ನು ಪ್ರಾರಂಭಿಸಲಾಗಿದೆ. ಕೈಮಗ್ಗ ನೇಕಾರರ ಅತ್ಯುತ್ತಮ ಕುಶಲಕರ್ಮಿ ಕೊಡುಗೆ ಮತ್ತು ಕೈಮಗ್ಗ ನೇಯ್ಗೆಯ ಅಭಿವೃದ್ದಿಯನ್ನು ಗುರುತಿಸಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಆದಾಗ್ಯೂ, ಇಂದು ಜವಳಿ ಉದ್ಯಮದಲ್ಲಿ ಬೆಳೆಯುತ್ತಿರುವ ನಾವಿನ್ಯ ತಂತ್ರಜ್ಞಾನದ ಪ್ರಗತಿಯೊಂದಿಗೆ ಕೈಮಗ್ಗದ ಜನಪ್ರಿಯತೆಯು ಗಣನೀಯವಾಗಿ ಕುಸಿಯುತ್ತಿದೆ. ಇದಕ್ಕೆ ಉದಾಹರಣೆಯೆಂದರೆ, ಸುಮಾರು ಎರಡು ದಶಕಗಳ ಹಿಂದೆ ಒಂದು ಮನೆಯಲ್ಲಿ ಐದು ಕೈಮಗ್ಗಗಳಿದ್ದರೆ ಇಂದು ಐದು ಮನೆಗಳಲ್ಲಿ ಒಂದು ಕೈಮಗ್ಗವನ್ನು ಕಾಣುವುದು ಅದೃಷ್ಟವಾಗಿದೆ. ಇದಕ್ಕೆ ಕಾರಣಗಳೆಂದರೆ ಮೂಲ ಸೌಕರ್ಯಗಳ ಕೊರತೆ, ಹಳೆಯ ಮಗ್ಗಗಳು, ಪ್ರಮುಖ ಮಾರುಕಟ್ಟೆಗಳನ್ನು ತಲುಪಲು ಸಾಧ್ಯವಾಗದಿರುವುದು ಮತ್ತು ಪ್ರಚಾರದ ಕೊರತೆ.
ಸ್ವಾತಂತ್ರ್ಯ ನಂತರದ ಶತಮಾನದ ಇತಿಹಾಸದೊಂದಿಗೆ ಸಾವಿರಾರು ವರ್ಷಗಳ ಪ್ರಾಚೀನ ವೈಭವೋಪೂರಿತ ಸಾಂಸ್ಕøತಿಕ ಪರಂಪರೆಯ ಚರಿತ್ರೆಯನ್ನು ಹೊಂದಿರುವ ಕೈಮಗ್ಗ ಉದ್ಯಮದ ವಿಶಿಷ್ಟ ಕರಕುಶಲತೆಯನ್ನು ಉಳಿಸಿಕೊಳ್ಳುವುದು ಇಂದು ಪ್ರತಿಯೊಬ್ಬರ ಕತ್ರ್ಯವ್ಯ ಮತ್ತು ಜವಾಬ್ದಾರಿಯಾಗಿದೆ.
ರಿತೇಶ್ ನಾಯ್ಕ
ಅಪ್ರೆಂಟಿಸ್, ವಾರ್ತಾ ಇಲಾಖೆ, ಶಿವಮೊಗ್ಗ