ಶಿವಮೊಗ್ಗ: ಸ್ವಾಮಿ ವಿವೇಕಾನಂದರು ಯುವಜನರಿಗೆ ಸ್ಫೂರ್ತಿ. ಅವರ ಜೀವನ ಆದರ್ಶಗಳನ್ನು ಯುವಜನರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಹೇಳಿದರು.
ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ಸಹ್ಯಾದ್ರಿ ಕಲಾ ಕಾಲೇಜು ಹಾಗೂ ಸಂಕಲ್ಪ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಯುವ ಯೋಜನೆಯಡಿ ಆಯೋಜಿಸಿದ್ದ “ಸ್ವಾವಲಂಬಿ ಬದುಕಿಗೆ ಯಶಸ್ವಿ ಸೂತ್ರಗಳು” ಉಪನ್ಯಾಸ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮಿ ವಿವೇಕರ ಆದರ್ಶಗಳನ್ನು ಯುವಜನರಿಗೆ ತಲುಪಿಸುವ ಆಶಯದಿಂದ ಪ್ರತಿ ವರ್ಷ ಸ್ವಾಮಿ ವಿವೇಕಾನಂದ ಯುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಆಡಳಿತ ಮತ್ತು ತರಬೇತಿ ಜಿಲ್ಲಾ ಸಂಸ್ಥೆಯ ಉಪನ್ಯಾಸಕಿ ಜ್ಯೋತಿಕುಮಾರಿ ಮಾತನಾಡಿ, ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಅನನ್ಯ. ಅಖಂಡ ಭಾರತದ ಪರಿಕಲ್ಪನೆಯ ಅರಿವು ಮೂಡಬೇಕಾದರೆ ಸ್ವಾಮಿ ವಿವೇಕಾನಂದರ ಜೀವನದ ಅಧ್ಯಯನ ಅತ್ಯಂತ ಅವಶ್ಯಕ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಯುವಜನರ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಅಧ್ಬುತ ಶಕ್ತಿ ಹೊಂದಿರುವ ಯುವ ಸಮೂಹ ಅಸಾಧ್ಯವಾದುದನ್ನು ಸಾಧ್ಯವಾಗಿಸಬಲ್ಲರು. ಸ್ವಾಮಿ ವಿವೇಕರು ಜೀವನದ ಪ್ರತಿ ಹಂತದಲ್ಲಿಯೂ ಯುವ ಜನರಿಗೆ ಸಂದೇಶ ನೀಡಿದ್ದರು ಎಂದು ತಿಳಿಸಿದರು.
ಸ್ವಾವಲಂಬಿ ಜೀವನ ಎಂದರೆ ಕೇವಲ ಆರ್ಥಿಕವಾಗಿ ಸದೃಢರಾಗುವುದಲ್ಲ. ಸ್ವಂತ ವಿಚಾರಧಾರೆಗಳನ್ನು ಸೃಷ್ಠಿಸಿಕೊಳ್ಳುವಾತ ಸ್ವಾವಲಂಬಿ ಬದುಕು ನಡೆಸಬಲ್ಲ. ಸ್ವಂತ ವಿಚಾರ, ಸೃಜನಶೀಲ ಸಾಮಾರ್ಥ್ಯ, ಸ್ವದೇಶಿ ಚಿಂತನೆ ಒಳಗೊಂಡು ಸ್ವಾವಲಂಬಿ ಬದುಕು ರೂಢಿಸಿಕೊಳ್ಳಲು ಯುವಜನರು ಮುಂದಾಗಬೇಕು ಎಂದರು.
ಯುವಜನರು ಕೀಳರಿಮೆ ಮನೋಭಾವ ಬಿಡಬೇಕು. ಏಕಾಗ್ರತಾ ಶಕ್ತಿ ವೃದ್ಧಿಸಿಕೊಳ್ಳಬೇಕು. ಚಿಕ್ಕ ಚಿಕ್ಕ ವಿಷಯಗಳಲ್ಲೂ ಪರಿಪೂರ್ಣತೆ ಸಾಧಿಸಬೇಕು. ವಿವೇಕಾಂದರ ಚಿಂತನೆ ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಲು ಸಾಧ್ಯವಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ದೇಶಕ್ಕಾಗಿ ಸಂಪೂರ್ಣ ಜೀವನ ನಡೆಸಿದ ಮಹಾನ್ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರು. ರಾಷ್ಟ್ರದ ವಿಶೇಷ ಪರಿಕಲ್ಪನೆ ಹೊಂದಿದ್ದ ವ್ಯಕ್ತಿತ್ವ ವಿವೇಕರದು. ಸ್ವಾವಲಂಬಿ ಬದುಕು ನಡೆಸಬೇಕೆಂಬ ಉದಾತ್ತ ಚಿಂತನೆಯನ್ನು ಬದುಕಿನಲ್ಲಿ ಸಾರಿದವರು ಸ್ವಾಮಿ ವಿವೇಕಾನಂದರು ಎಂದು ಹೇಳಿದರು.
 “ಸ್ವಾವಲಂಬಿ ಬದುಕಿಗೆ ಯಶಸ್ವಿ ಸೂತ್ರಗಳು” ಉಪನ್ಯಾಸ ಸಪ್ತಾಹ ಕಾರ್ಯಕ್ರಮಕ್ಕೆ ಮೇಯರ್ ಶಿವಕುಮಾರ್ ಚಾಲನೆ ನೀಡಿದರು. ಜನವರಿ 13ರಿಂದ ಶಿವಮೊಗ್ಗ ನಗರದ ವಿವಿಧ ಕಾಲೇಜುಗಳಲ್ಲಿ ಜನವರಿ 19ರವರೆಗೆ ಉಪನ್ಯಾಸ ಸಪ್ತಾಹ ನಡೆಯಲಿದೆ.
ಉಪಮೇಯರ್ ಲಕ್ಷ್ಮೀ ಶಂಕ್ರನಾಯ್ಕ, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್, ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಧನಂಜಯ್, ಸಂಪನ್ಮೂಲ ವ್ಯಕ್ತಿ ಶಿವಾಜಿ, ಸಮನ್ವಯ ಕಾಶಿ, ಅನುಪಮಾ, ಲೋಕೇಶ್, ಅಭಿ ಎಚ್.ಎನ್. ಗೌಡ ಮತ್ತಿತರರು ಉಪಸ್ಥಿತರಿದ್ದರು.

error: Content is protected !!