ಶಿವಮೊಗ್ಗ, ಎಪ್ರಿಲ್ 1 : ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮೊತ್ತವನ್ನು ಪ್ರಸ್ತುತವಿರುವ 285 ರೂ. ನಿಂದ 299 ರೂ. ಗೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ತಿಳಿಸಿದರು.
ಅವರು ಗುರುವಾರ ಕೊಮ್ಮನಾಳು ಗ್ರಾಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ದುಡಿಯೋಣ ಬಾರಾ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಉದ್ಯೋಗ ಕಲ್ಪಿಸಲು ಈಗಾಗಲೇ ಎಲ್ಲಾ ಗ್ರಾಮ ಪಂಚಾಯತ್‍ಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸಗಳನ್ನು ಗುರುತಿಸಲಾಗಿದೆ. ಉದ್ಯೋಗ ಚೀಟಿಯನ್ನು ಇನ್ನೂ ಪಡೆಯದವರು ತಕ್ಷಣ ಪಡೆದು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100ದಿನ ಕೂಲಿ ಕೆಲಸವನ್ನು ನೀಡಲಾಗುವುದು. ಅತಿವಷ್ಟಿ, ಅನಾವೃಷ್ಟಿಯಂತಹ ಸಂದರ್ಭಗಳಲ್ಲಿ ಇದನ್ನು 150ದಿನಗಳವರೆಗೆ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.
ಕೆರೆಗಳ ಹೂಳೆತ್ತುವುದು, ಜಲ ಸಂರಕ್ಷಣೆ, ತಡೆಗೋಡೆ ನಿರ್ಮಾಣ, ತೋಟಗಾರಿಕೆ, ಅರಣ್ಯೀಕರಣ ಸೇರಿದಂತೆ ಹಲವು ಕಾರ್ಯಗಳನ್ನು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗಿದೆ ಎಂದರು.
ತರಬೇತಿ: ನೂರು ದಿನಗಳ ಕಾಲ ಕೂಲಿ ಪಡೆದಿರುವ ಕುಟುಂಬಗಳ ಒಬ್ಬ ಸದಸ್ಯನಿಗೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ಅಂತಹ ಕುಟುಂಬದಲ್ಲಿ ವಿದ್ಯಾವಂತರಿಗೆ ಅಂದರೆ 8 ನೇ ತರಗತಿ, 10 ನೇ ತರಗತಿ, ಪಿ.ಯು.ಸಿ ವಿದ್ಯಾಭ್ಯಾಸ ಪೂರ್ಣ ಅಥವಾ ಅರ್ಧಕ್ಕೆ ಬಿಟ್ಟಿದ್ದರೂ, ಅವರಿಗೆ ನರೇಗಾ ಯೋಜನಯಡಿ ಉನ್ನತಿ ಕೌಶ್ಯಲದಡಿ ತರಬೇತಿ ನೀಡಿ ಅರ್ಥಿಕವಾಗಿ ಜೀವನದಲ್ಲಿ ಸಬಲರಾಗಲು ನೆರವು ನೀಡಲಾಗುವುದು. ಹೈನುಗಾರಿಕೆ, ಆಟೋಮೊಬೈಲ್, ಬ್ಯೂಟಿಪಾರ್ಲರ್, ಮೊಬೈಲ್ ರಿಪೇರಿ, ಕಾಫಿ ಡೇ ಇತರೇ ಸ್ವ ಉದ್ಯೋಗಕ್ಕೆ ತರಬೇತಿ ನೀಡಿ ಉದ್ಯೋಗವಕಾಶ ಕಲ್ಪಿಸಲಾಗುವುದು. 3 ತಿಂಗಳ ಅಭಿಯಾನದಲ್ಲಿ ಭಾಗವಹಿಸುವುದರಿಂದ ಪ್ರತಿ ಕುಟುಂಬಕ್ಕೆ ರೂ.17,940 ಅರ್ಥಿಕ ಸಹಾಯ ನರೇಗಾ ಯೋಜನೆಯಡಿ ದೊರಕುವುದು. 10ದಿನಗಳ ತರಬೇತಿಯಲ್ಲಿ ಆಯಾ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಪ್ರಾಯೋಗಿಕ ಪ್ರಾತ್ಯಕ್ಷಿತೆ ನೀಡಲಾಗುವುದು. ಇದರಿಂದ ಅವರು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಧ್ಯವಾಗಲಿದೆ. ಅಂತಹ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಹಾಗೂ ತಾಂತ್ರಿಕ ನೆರವನ್ನು ಸಹ ಒದಗಿಸಲಾಗುವುದು ಎಂದು ಅವರು ಹೇಳಿದರು.
ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಜನರನ್ನು ಸ್ವಾವಲಂಬಿಗಳಾಗಿ ಮಾಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಯೋಜನಾ ನಿರ್ದೇಶಕಿ ನಂದಿನಿ, ಯೋಜನಾಧಿಕಾರಿ ಉಮಾ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.