ಶಿವಮೊಗ್ಗ, ಮಾರ್ಚ್-20 : ಶಿವಮೊಗ್ಗ ನಗರದ ಹೊರ ವಲಯದಲ್ಲಿರುವ ಅಬ್ಬಲಗೆರೆ ಬಳಿ 1 ಎಕರೆ ಭೂಮಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಗಿಡಗಳು ಇರುವ ಹಚ್ಚ ಹಸಿರಿನ ‘ಆರ್ವಿವನ’ ನಿರ್ಮಾಣದ ಕಾಯಕದಲ್ಲಿ ಎಂಪಿಎಂ ನಿವೃತ್ತ ಅಧಿಕಾರಿಯೊಬ್ಬರು ಸ್ವಯಂ ಪ್ರೇರಿತರಾಗಿ ಶ್ರಮಿಸುತ್ತಿದ್ದಾರೆ.

  ನಗರೀಕರಣ ಹಾಗೂ ಮನುಷ್ಯನ ಅವಶ್ಯಕತೆಗಾಗಿ ಗಿಡ ಮರಗಳು ದಿನದಿಂದ ದಿನಕ್ಕೆ  ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ಪರಿಸರ ಇದ್ದರೆ ಮಾತ್ರ ಸಮಾಜ ಉಳಿಯುವುದು ಎಂಬುದನ್ನು ಅರ್ಥ ಮಾಡಿಕೊಂಡಿರುವ ಎಂಪಿಎಂ ನಿವೃತ್ತ ಅಧಿಕಾರಿ ಮಹಾದೇವ ಸ್ವಾಮಿ ಅವರು, ಆರ್ವಿವನವನ್ನು ವಿದೇಶದಲ್ಲಿರುವ ತಮ್ಮ ಮೊಮ್ಮೊಗಳ 4ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅವಳಿಗೆ ಉಡುಗೊರೆಯಾಗಿ ನೀಡಿದ್ದಾರೆ.

ತಾನು ಖರೀದಿಸಿರುವ ಖಾಸಗಿ ಜಮೀನಿನಲ್ಲಿ ಕಳೆದ ಆರೇಳು ತಿಂಗಳಿನಿಂದ ವನ ನಿರ್ಮಿಸುವ ಕಾರ್ಯದಲ್ಲಿ ದಂಪತಿಗಳಿಬ್ಬರು ತೊಡಗಿದ್ದಾರೆ. ಈ ಜಮೀನಿನಲ್ಲಿ ಬೇವು, ಹೊನ್ನೆ, ಹಿಪ್ಲಿ, ತಾರೆ, ರಕ್ತ ಚಂದನ, ಶಿವನಿ, ನಾಗಲಿಂಗಪುಷ್ಪ ಅತ್ತಿ, ಚಳ್ಳೆ, ಹೊಳೆ ಮತ್ತಿ, ಹೀಗೆ 53ಕ್ಕೂ ಹೆಚ್ಚು ಕಾಡು ಜಾತಿಯ ಗಿಡಗಳು ನೆಟ್ಟಿದ್ದಾರೆ. ಅದೇ ರೀತಿ ತೆಂಗು, ದಾಳಿಂಬೆ, ಬಾಳೆ, ಪಪ್ಪಾಯಿ, ಮಾವು, ರಾಮಫಲ, ಹಲಸು, ನುಗ್ಗೆ, ಕಿತ್ತಳೆ, ಸೇರಿ ಸುಮಾರು 30 ತೋಟಗಾರಿಕೆ ಗಿಡಗಳನ್ನು ಬೆಳೆದು ಪೋಷಿಸಲಾಗಿದೆ. ಸುಮಾರು 400 ಬಗೆಯ ಗಿಡಗಳಿದ್ದು ಅವು ಈಗಾಗಲೇ 4 ರಿಂದ6 ಅಡ್ಡಿ ಎತ್ತರಕ್ಕೆ ಬೆಳೆದು ನಿಂತಿವೆ. ಅದರಲ್ಲಿ ಕೆಲವು ತೋಟಗಾರಿಕೆ ಗಿಡಗಳು ಹೂ-ಹಣ್ಣುಗಳು ಬಿಡುವುದಕ್ಕೆ ಆರಂಭಿಸಿವೆ. ಈ ಮರದ ಹಣ್ಣುಗಳು ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಲಿ. ನೂರಾರು ಪಕ್ಷಿಗಳಿಗೆ ಇದು ಆಶ್ರಯ ತಾಣವಾಗಲಿ ಎಂಬುದು ಅವರ ಆಶಯ.

ಹಲವಾರು ವರ್ಷಗಳಿಂದಲೂ ನಿರಂತರವಾಗಿ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಮಹಾದೇವ ಸ್ವಾಮಿಯವರಿಗೆ ಪೈಪ್ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಕೈಗೊಂಡಿರುವ ಕ್ರಮಗಳಿಗಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿಯೂ ಒಲಿದಿದೆ.

ಮಹಾದೇವ ಸ್ವಾಮಿ ಟಿ.ಎಸ್ ಮುಂದಿನ ಪೀಳಿಗೆ ಉಳಿವಿಗಾಗಿ ಕಾಡು ಬೇಕು. ಇಂದಿನ ಪೀಳಿಗೆ ಮಕ್ಕಳಿಗೆ ಅದೆಷ್ಟೋ ಮರಗಳ ಗುರುತಿಸಲು, ಅದರ ಹೆಸರಿನ ಅರಿವಿಲ್ಲ. ಸಕಲ ಜೀವ ರಾಶಿಗಳ ಉಳಿವಿಗಾಗಿ ಹಾಗೂ ಪ್ರಾಣಿ, ಪಕ್ಷಿ ಎಂದರೆ ನನ್ನ ಮೊಮ್ಮಗಳಿಗೆ ಪಂಚಪ್ರಾಣ ಈ ಉದ್ದೇಶದಿಂದ ಅವಳ ಹೆಸರಿನಲ್ಲಿ ವನ ನಿರ್ಮಾಣ ಕಾರ್ಯಕ್ಕೆ ತೊಡಗಿರುವೆ. ಪರಿಸರ ಇದ್ದರೆ ಮಾತ್ರ ಸಮಾಜ ಉಳಿಯುವುದು ಎಂಬುದನ್ನು ಅರ್ಥ ಮಾಡಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು.


ಸುಮಾ ಬತ್ತಿಕೊಪ್ಪ

error: Content is protected !!