ಶಿವಮೊಗ್ಗ,: ವಾಹನ ಸವಾರರು ಸದಾ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸುವಂತೆ ಜಂಟಿ ಸಾರಿಗೆ ಆಯುಕ್ತ ಶಿವರಾಜ್ ಬಿ ಪಾಟೀಲ್ ಅವರು ವಾಹನ ಚಾಲಕರಿಗೆ ಕರೆ ನೀಡಿದರು.
ಅವರು ಇಂದು 30ನೇ ರಾಷ್ಟ್ರೀಯ ರಸ್ತೆ ಸುರಕ್ಷಾತ ಸಪ್ತಾಹ 2019ರ ಅಂಗವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಆರಕ್ಷಕ ಠಾಣೆ ಭದ್ರಾವತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಭದ್ರಾವತಿ ಸಾರಿಗೆ ಘಟಕದ ಆವರಣದಲ್ಲಿ “ರಸ್ತೆ ಸುರಕ್ಷತೆ ಜೀವದ ರಕ್ಷೆ, ಸಡಕ್ ಸುರಕ್ಷಾ-ಜೀವದರಕ್ಷೆ’ ಎಂಬ ಘೋಷಣೆಯಡಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಚಾರ ಹಾಗೂ ಸುರಕ್ಷತಾ ನಿಯಮಗಳನ್ನು ಅನುಸರಿಸದಿರುವ ಕಾರಣದಿಂದಾಗಿ ದೇಶದಲ್ಲಿ ಪ್ರತಿವರ್ಷ 1.50ಲಕ್ಷಕ್ಕೂ ಅಧಿಕ ಸಂಖ್ಯೆಯ ಪ್ರಯಾಣಿಕರು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ದುರಾದೃಷ್ಠಕರ ಸಂಗತಿ ಎಂದವರು ನುಡಿದರು.
ಆಕಸ್ಮಿಕ ಅಪಘಾತಗಳ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರವು ಸವಾರರು ಅನುಸರಿಸಬೇಕಾದ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಇದರೊಂದಿಗೆ ಬಸ್ಸುಗಳ ಸುಸ್ಥಿತಿ ಬಗ್ಗೆ ವಾಹನ ಪರೀಕ್ಷಾ ತಾಂತ್ರಿಕರ ಜವಾಬ್ದಾರಿಯು ಸಹ ಅತೀ ಮುಖ್ಯ. ಸಾರಿಗೆ ಇಲಾಖೆಯಿಂದ ವಾಹನವನ್ನು ನೋಂದಣಿ ಮಾಡಿ ವಾಹನದ ಆಸನ ವ್ಯವಸ್ಥೆ, ವಾಹನದ ಅರ್ಹತೆ ಬಗ್ಗೆ ಪರಿಶೀಲಿಸಿ ಅನುಮೋದನೆ ನೀಡಲಾಗುತ್ತಿದೆ.. ಈ ನಿಟ್ಟಿನಿಲ್ಲಿ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳನ್ನು ಪಾಲಿಸುವುದು ಚಾಲಕರ ಅತೀ ಮುಖ್ಯವಾದ ಕರ್ತವ್ಯವಾಗಿರುತ್ತದೆ ಎಂದ ಅವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭದ್ರಾವತಿ ಆರಕ್ಷಕ ವೃತ್ತ ನಿರೀಕ್ಷಕ ನಂಜಪ್ಪ ಅವರು ಮಾತನಾಡಿ, ಪ್ರಾಣಿಗಳು ರಸ್ತೆಯಲ್ಲಿ ಸಂಚರಿಸುವಾಗ ಪ್ರಾಣಿಗಳ ಜೀವ ಉಳಿಸುವಂತಹ ಸಂದರ್ಭ ಎದುರಾದಲ್ಲಿ ವಾಹನವನ್ನು ಅಪಘಾತಕ್ಕೆ ಈಡಾಗುವ ಸಂಭಂವ ಹೆಚ್ಚಾಗಿರುವುದರಿಂದ ಚಾಲಕರು ಈ ಸಂದರ್ಭನುಸಾರ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗಮನಹರಿಸಬೇಕೆಂದವರು ತಿಳಿಸಿದರು.
ರಸ್ತೆಗಳಲ್ಲಿ ವಾಹನಗಳು ಕೆಟ್ಟು ನಿಂತಾಗ ರಸ್ತೆಯಲ್ಲಿ ಕಲ್ಲುಗಳನ್ನು ಇಡುವ ಅಭ್ಯಾಸ ಚಾಲಕರಲ್ಲಿ ಇದ್ದು ವಾಹನ ಸುಸ್ಥಿತಿ ಆದ ನಂತರದಲ್ಲಿ ಸದರಿ ಕಲ್ಲುಗಳನ್ನು ತೆಗೆಯದೆ ಹಾಗೇ ಹೋಗುವುದರಿಂದಲೂ ತೀವ್ರ ಸ್ವರೂಪದ ಅಪಘಾತ ಉಂಟಾಗುತ್ತಿವೆ ಎಂದರು.
ಡಿ.ಟಿ.ಓ. ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿ.ಎಸ್.ಐ, ಭರತ್ ಕುಮಾರ, ಪಿ.ಎಸ್.ಐ ಸುರೇಶ್, ಡಿಪೋ ಮ್ಯಾನೇಜರ್ ಶ್ರೀಮತಿ.ಅಮೂಲ್ಯ, ಬಂಗಾರಪ್ಪ ಸೇರಿದಂತೆ ಭದ್ರಾವತಿ-ಶಿವಮೊಗ್ಗ ಸಾರಿಗೆ ಇಲಾಖೆ ಸಿಬ್ಬಂದಿ, ಭದ್ರಾವತಿ ಆರಕ್ಷಕ ಇಲಾಖೆ ಸಿಬ್ಬಂದಿ ಮತ್ತು ಕೆ.ಎಸ್.ಆರ್.ಟಿ.ಸಿ ಭದ್ರಾವತಿ ವಿಭಾಗದ ಸಿಬ್ಬಂದಿಗಲು ಭಾಗವಹಿಸಿದ್ದರು.