ಕುವೆಂಪು ವಿವಿ: ಸಿಬ್ಬಂದಿಗೆ ವೇತನ ನಿಗದೀಕರಣ ಸೌಲಭ್ಯ
ಶಂಕರಘಟ್ಟ, ಆ. ೨೩: ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ವಿಶ್ವವಿದ್ಯಾಲಯದ ಭೋಧಕೇತರ ನೌಕರರ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ವೇತನ ನಿಗದೀಕರಣ ಸೌಲಭ್ಯದ ಆದೇಶವನ್ನು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅರ್ಹ ಫಲಾನುಭವಿಗಳಿಗೆ ನೀಡಿದರು. ಕಳೆದ ಗುರುವಾರ ಸಾಂಕೇತಿಕವಾಗಿ ಇಬ್ಬರು ನೌಕರರು ಆದೇಶವನ್ನು ಸ್ವೀಕರಿಸುವುದರೊಂದಿಗೆ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಕುಲಸಚಿವೆ ಜಿ. ಅನುರಾಧ, ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್ ಮತ್ತು ರಾಮಲಿಂಗಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಿರಿಯ ಸಹಾಯಕರಿಂದ ಮೊದಲ್ಗೊಂಡು ಸಹಾಯಕ ಕುಲಸಚಿವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯದ ಸುಮಾರು ೧೦೦ ಮಂದಿ ಭೋಧಕೇತರ ಸಿಬ್ಬಂದಿಗೆ ಈ ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ಮುಂಬಡ್ತಿ ಮತ್ತು ವೇತನ ನಿಗದೀಕರಣದ ಆರ್ಥಿಕ ಸೌಲಭ್ಯ ದೊರಕಲಿದ್ದು, ನೌಕರರಲ್ಲಿ ಸಂತಸ ಮನೆಮಾಡಿದೆ.
“ವಿಶ್ವವಿದ್ಯಾಲಯದ ಆರಂಭದ ದಿನಗಳಿಂದಲೂ ಕಗ್ಗಂಟಾಗಿದ್ದ ಜೇಷ್ಠತಾ ಪಟ್ಟಿಯನ್ನು ಯಾವುದೇ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಅಂತಿಮಗೊಳಿಸುವುದು ಆಡಳಿತವರ್ಗಕ್ಕೆ ಸವಾಲಿನ ವಿಷಯವಾಗಿತ್ತು. ಆದರೆ, ತಾವು ಅಧಿಕಾರ ವಹಿಸಿಕೊಂಡ ನಂತರ ಆದ್ಯತೆಯ ಮೇರೆಗೆ ೨೦೨೦ರ ಜನವರಿ ತಿಂಗಳಿನಲ್ಲಿ ಜೇಷ್ಠತಾ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು” ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಪ್ರತಿಕ್ರಿಯಿಸಿದರು.
ಜೇಷ್ಠತಾ ಪಟ್ಟಿ ಅಂತಿಮಗೊಂಡ ನಂತರ ಯಾವುದೇ ನೌಕರರೂ ಸೇವಾ ಸೌಲಭ್ಯದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ, ಸರ್ಕಾರದ ಡಿಪಿಎಆರ್ ಇಲಾಖೆಯ ತಜ್ಞರನ್ನು ಆಹ್ವಾನಿಸಿ ಮತ್ತೊಮ್ಮೆ ಪಟ್ಟಿಯನ್ನು ಪರಾಮರ್ಶಿಸಿ, ಅದರ ಆಧಾರದ ಮೇಲೆ ಮುಂಬಡ್ತಿ ನೀಡಲಾಗಿತ್ತು. ಆದರೆ, ವೇತನ ನಿಗದೀಕರಣ ಸೌಲಭ್ಯ ನೀಡಲಾಗಿರಲಿಲ್ಲ. ಇದೀಗ, ವೇತನ ನಿಗದೀಕರಣದ ಸೌಲಭ್ಯವನ್ನು ನೀಡುವುದರೊಂದಿಗೆ ಬಹುವರ್ಷಗಳ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ. ಆಗಸ್ಟ್ ೨೫ರೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಆದೇಶ ನೀಡಲಾಗುವುದು ಎಂದು ಕುಲಸಚಿವೆ ಜಿ. ಅನುರಾಧ ಈ ಸಂದರ್ಭದಲ್ಲಿ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ವೇತನ ನಿಗದೀಕರಣದ ಸೌಲಭ್ಯವನ್ನು ಅರ್ಹ ನೌಕರರಿಗೆ ನೀಡಿರುವುದಕ್ಕೆ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್, ರಾಮಲಿಂಗಪ್ಪ, ರಮೇಶ್ ಬಾಬು, ಪ್ರೊ. ಕಿರಣ್ ದೇಸಾಯಿ, ನಿರಂಜನ್ ಮೂರ್ತಿ, ಮಂಜುನಾಥ್, ಡಾ. ಸಿ. ಗೀತಾ, ಪ್ರೊ. ವಿ. ಕೃಷ್ಣ, ನಾಗರಾಜ್ ಹಾಗೂ ಇತರೆ ಸಿಂಡಿಕೇಟ್ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
#
ಫೋಟೋ ಕ್ಯಾಪ್ಷನ್: ೧. ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ ಅವರು ಅಧೀಕ್ಷಕ ಜಗನ್ನಾಥ್ ಅವರಿಗೆ ವೇತನ ನಿಗದೀಕರಣದ ಆದೇಶ ನೀಡಿದರು. ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್, ರಾಮಲಿಂಗಪ್ಪ, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ ಮತ್ತಿತರರಿದ್ದಾರೆ.
೨. ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ ಅವರು ಸಹಾಯಕ ಕುಲಸಚಿವೆ ನವರತ್ನ ಅವರಿಗೆ ವೇತನ ನಿಗದೀಕರಣದ ಆದೇಶ ನೀಡಿದರು. ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್, ರಾಮಲಿಂಗಪ್ಪ, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ ಮತ್ತಿತರರಿದ್ದಾರೆ.